ಅಣ್ಣ-ತಂಗಿಯ 'ಸರ್ಪ್ರೈಸ್' ಶೋಗೆ ಗರಂ ಆದ ಮಿತ್ರಪಕ್ಷಗಳು: ಆಕ್ರೋಶ ತಣಿಸಲು ಕಾಂಗ್ರೆಸ್ ಹರಸಾಹಸ! | India Alliance

ನವದೆಹಲಿ: ಮಂಗಳವಾರ ದೆಹಲಿಯಲ್ಲಿ ಚುನಾವಣಾ ಆಯೋಗದ ಕಚೇರಿಯತ್ತ ಇಂಡಿಯಾ ಮೈತ್ರಿಕೂಟ (India Alliance) ನಡೆಸಿದ ಮೆರವಣಿಗೆ ಮತ್ತು ಆಕಾಶವಾಣಿ ಭವನದ ಮುಂದೆ ನಡೆಸಿದ ಧರಣಿಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಪೂರ್ಣ ಗಮನ ಸೆಳೆದರು.
ಅಣ್ಣ-ತಂಗಿಯ'ಸರ್ಪ್ರೈಸ್' ಶೋಗೆ ಗರಂ ಆದ ಮಿತ್ರಪಕ್ಷಗಳು
ಅಣ್ಣ-ತಂಗಿಯ'ಸರ್ಪ್ರೈಸ್' ಶೋಗೆ ಗರಂ ಆದ ಮಿತ್ರಪಕ್ಷಗಳು
Published on: 

ನವದೆಹಲಿ: ಮಂಗಳವಾರ ದೆಹಲಿಯಲ್ಲಿ ಚುನಾವಣಾ ಆಯೋಗದ ಕಚೇರಿಯತ್ತ ಇಂಡಿಯಾ ಮೈತ್ರಿಕೂಟ (India Alliance) ನಡೆಸಿದ ಮೆರವಣಿಗೆ ಮತ್ತು ಆಕಾಶವಾಣಿ ಭವನದ ಮುಂದೆ ನಡೆಸಿದ ಧರಣಿಯಲ್ಲಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಪೂರ್ಣ ಗಮನ ಸೆಳೆದರು. ಆದರೆ, ಇದು ಕಾಂಗ್ರೆಸ್‌ನ ಮಿತ್ರಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಮಂಗಳವಾರದ ಈ ಬೃಹತ್ ಪ್ರತಿಭಟನೆಯು ಅಂತಿಮವಾಗಿ ಗಾಂಧಿ ಕುಟುಂಬದವರ ಶೋ ಆಗಿ ಮಾರ್ಪಟ್ಟಿದೆ ಎಂದು ಹಲವು ಮಿತ್ರಪಕ್ಷಗಳು ಕಿಡಿಕಾರಿವೆ.

ಮೈತ್ರಿಕೂಟದ ಇತರ ನಾಯಕರನ್ನು ವಶಕ್ಕೆ ಪಡೆದು ಪೊಲೀಸ್ ಠಾಣೆಗಳಿಗೆ ಕರೆದೊಯ್ದರೆ. ರಾಹುಲ್​ ಮತ್ತು ಪ್ರಿಯಾಂಕಾ ಆಕಾಶವಾಣಿ ಭವನದ (ಅಖಿಲ ಭಾರತ ರೇಡಿಯೋ ಕೇಂದ್ರ) ಮುಂದೆ ಧರಣಿ ಕುಳಿತುಕೊಳ್ಳುವ ಮೂಲಕ ಸಂಪೂರ್ಣ ಗಮನವನ್ನು ತಮ್ಮತ್ತ ಸೆಳೆಯುವ ಹಾಗೆ ಮಾಡಿದ್ದಾರೆ ಎಂದು ಅಸಮಾಧಾನ ತೋಡಿಕೊಂಡಿವೆ. ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣಕ್ಕೆ ವಿಷಾದ ವ್ಯಕ್ತಪಡಿಸುವುದಾಗಿ ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರು ಇಂಡಿಯಾ ಬ್ಲಾಕ್‌ನ ಇತರ ಪಕ್ಷಗಳಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದು ಜಂಟಿ ವಿಪಕ್ಷ ಪ್ರತಿಭಟನೆಯಾಗಿದ್ದು, ಕೊನೆಗೆ ರಾಹುಲ್ ಗಾಂಧಿ ಶೋ ಆಗಿ ಬದಲಾಯಿತು ಎಂಬ ಭಾವನೆ ಮಿತ್ರಪಕ್ಷಗಳ ವಲಯದಿಂದ ವ್ಯಕ್ತವಾಗಿದೆ. ಚುನಾವಣಾ ಆಯೋಗದ ವಿರುದ್ಧವೇ ಪ್ರತಿಭಟನೆ ನಡೆಯುತ್ತಿದ್ದಾಗ, ಕಾಂಗ್ರೆಸ್ ನಾಯಕರು ಆಯೋಗವನ್ನು ಭೇಟಿ ಮಾಡಲು ಪಟ್ಟು ಹಿಡಿದಿದ್ದೇಕೆ ಎಂದೂ ಕೆಲವರು ಪ್ರಶ್ನಿಸಿದ್ದಾರೆ.

ಮಂಗಳವಾರ ನಡೆದಿದ್ದೇನು...?

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದ ವಿಚಾರಗಳಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಚುನಾವಣಾ ಆಯೋಗದ ಕಚೇರಿಯತ್ತ ಜಾಥಾ ನಡೆಸಲು ಸುಮಾರು 200 ವಿಪಕ್ಷ ಸಂಸದರು ಮಂಗಳವಾರ ಸಂಸತ್ತಿನ ಮಕರ ದ್ವಾರದ ಬಳಿ ಜಮಾಯಿಸಿದ್ದರು. ಚುನಾಪಣಾ ಆಯೋಗದ ಕಚೇರಿಗೆ ಹೋಗುವ ಎಲ್ಲ ರಸ್ತೆಗಳನ್ನು ದೆಹಲಿ ಪೊಲೀಸರು ಬಂದೋಬಸ್ತ್ ಮಾಡಿದ್ದರು. ವಿಪಕ್ಷಗಳ ಮಾರ್ಚ್ ಆಕಾಶವಾಣಿ ಭವನವನ್ನು ತಲುಪುತ್ತಿದ್ದಂತೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸೇರಿದಂತೆ ಹಿರಿಯ ವಿಪಕ್ಷ ನಾಯಕರನ್ನು ವಶಕ್ಕೆ ಪಡೆದು ಬಸ್‌ಗಳಲ್ಲಿ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಯಿತು.

ಒಂದು ಅನಿರೀಕ್ಷಿತ ನಡೆ

ಕಾಂಗ್ರೆಸ್ ಅನಿರೀಕ್ಷಿತ ಎಂದು ಕರೆದ ನಡೆಯೊಂದರಲ್ಲಿ, ರಾಹುಲ್​ ಮತ್ತು ಪ್ರಿಯಾಂಕಾ ಗಾಂಧಿ ಆಕಾಶವಾಣಿ ಭವನವನ್ನು ಪ್ರವೇಶಿಸಿ ಗಂಟೆಗಟ್ಟಲೆ ಧರಣಿ ನಡೆಸಿದರು. ಕಾಂಗ್ರೆಸ್ ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ಆಕಾಶವಾಣಿ ಭವನ ಸಂಕೀರ್ಣವನ್ನು ಪ್ರವೇಶಿಸಿ, ಚುನಾವಣಾ ಆಯೋಗದ ಕಚೇರಿಯ ಎದುರುಗಡೆ ಇರುವ ಹಿಂಭಾಗದ ಗೇಟ್ ಮೂಲಕ ಹೊರಡಲು ಯೋಜಿಸಿದ್ದರು. ಆದರೆ ಪೊಲೀಸರು ಹಿಂಭಾಗದ ಗೇಟ್ ಅನ್ನು ಲಾಕ್ ಮಾಡಿದಾಗ, ಗಾಂಧಿ ಸಹೋದರರು ಮತ್ತು ವೇಣುಗೋಪಾಲ್, ಪವನ್ ಖೇರಾ ಸೇರಿದಂತೆ ಇತರ ನಾಯಕರು ಆಕಾಶವಾಣಿ ಭವನದ ಮುಂದೆ ಧರಣಿ ಕುಳಿತುಕೊಂಡು ಚುನಾವಣಾ ಆಯೋಗದೊಂದಿಗೆ ಸಭೆಗೆ ಆಗ್ರಹಿಸಿದರು.

ಆಕಾಶವಾಣಿ ಭವನದ ಧರಣಿ ಯೋಜನೆಯ ಭಾಗವಾಗಿರಲಿಲ್ಲ ಮತ್ತು ಗಾಂಧಿ ಸಹೋದರರು ಅಚ್ಚರಿಯ ಹೆಜ್ಜೆ ಇಟ್ಟರು ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೇ ಈ ಪ್ರತಿಭಟನೆಯ ಬಗ್ಗೆ ಮೊದಲೇ ತಿಳಿದಿರಲಿಲ್ಲ, ಹಾಗಾಗಿ ಮಿತ್ರಪಕ್ಷಗಳಿಗೂ ತಿಳಿಸಲು ಸಾಧ್ಯವಾಗಿಲ್ಲ ಎನ್ನುತ್ತಾ, ಆಕಾಶವಾಣಿ ಭವನದಲ್ಲಿ ಪ್ರತಿಭಟಿಸುವ ನಿರ್ಧಾರವನ್ನು ಕೈ ನಾಯಕರು ಸಮರ್ಥಿಸಿಕೊಂಡಿದ್ದಾರೆ.

ಮಿತ್ರಪಕ್ಷಗಳ ಅಸಮಾಧಾನಕ್ಕೆ ಇದೇನಾ ಕಾರಣ..?

ಮಂಗಳವಾರ ನಡೆದ ಪ್ರತಿಭಟನೆ ಇಂಡಿಯಾ ಒಕ್ಕೂಟ ಒಗ್ಗಟ್ಟಿನ ಹೊರಾಟವಾಗಿತ್ತು, ಆದರೆ ಅಂತಿಮವಾಗಿ ಅದು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಪ್ರತಿಭಟನೆಯಾಯಿತು ಎಂದು ಇಂಡಿಯಾ ಬ್ಲಾಕ್ ಪಕ್ಷಗಳ ಮೂಲವೊಂದು ತಿಳಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಯನ್ನು ನಾವು ಒತ್ತಾಯಿಸುತ್ತಿರುವಾಗ, ಚುನಾವಣಾ ಆಯೋಗವನ್ನೇ ಭೇಟಿ ಮಾಡುವುದು ಯಾಕೆ..? ಒಂದು ವೇಳೆ ಇದನ್ನು ಮಿತ್ರಪಕ್ಷಗಳೊಂದಿಗೆ ಚರ್ಚಿಸಿದ್ದರೆ, ನಾವು ಒಪ್ಪುತ್ತಿರಲಿಲ್ಲ ಎಂದು ಎಡಪಕ್ಷದ ಸಂಸದರೊಬ್ಬರು ಹೇಳಿದ್ದಾರೆ.

ಇದು ಮೊದಲೇನಲ್ಲ!

ಸಂಸತ್ತಿನ ಮುಂಗಾರು ಅಧಿವೇಶನದ ಸಮಯದಲ್ಲಿಯೂ ಕಾಂಗ್ರೆಸ್ ಪಕ್ಷವು ಇದೇ ರೀತಿಯ ನಡೆದಿತ್ತು. ಪ್ರಶ್ನೆಪತ್ರಿಕೆ ಸೋರಿಕೆ (ಪೇಪರ್ ಲೀಕ್) ಹಗರಣಕ್ಕೆ ಸಂಬಂಧಿಸಿದಂತೆ ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮುಂದೆ ಧರಣಿ ನಡೆಸುವ ತನ್ನ ಯೋಜನೆ ಬಗ್ಗೆ ಕಾಂಗ್ರೆಸ್ ಮಿತ್ರಪಕ್ಷಗಳಿಗೆ ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲ. ನಂತರ ಕೆ ಸಿ ವೇಣುಗೋಪಾಲ್ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಮಿತ್ರಪಕ್ಷಗಳೊಂದಿಗೆ ಸಂಪರ್ಕ ಸಾಧಿಸಿ ವಿವರಿಸಿದ್ದರು. ಆ ಬಳಿಕ ಅಖಿಲೇಶ್ ಯಾದವ್ ಮತ್ತು ಸುಪ್ರಿಯಾ ಸುಳೆ ಸೇರಿದಂತೆ ಇತರೆ ಪ್ರಮುಖ ವಿರೋಧ ಪಕ್ಷದ ನಾಯಕರು ರಾಹುಲ್ ಗಾಂಧಿ ಅವರ ಆ ಪ್ರತಿಭಟನೆಯಲ್ಲಿ ಬಂದು ಪಾಲ್ಗೊಂಡಿದ್ದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net