ರಾಹುಲ್ ಗಾಂಧಿ 
ದೇಶ

ಬಿಜೆಪಿಯ ಪ್ರತಿ ಆರು ಸಂಸದರ ಪೈಕಿ ಒಬ್ಬರು ಮತಗಳ್ಳತನದಿಂದ ಗೆದ್ದಿದ್ದಾರೆ; ನುಸುಳುಕೋರರು ಎನ್ನಬೇಕೆ?; ರಾಹುಲ್ ಗಾಂಧಿ | Rahul Gandhi

ನವದೆಹಲಿ: ಲೋಕಸಭೆಯಲ್ಲಿರುವ ಬಿಜೆಪಿ ಸಂಸದರಲ್ಲಿ ಪ್ರತಿ ಆರು ಮಂದಿ ಪೈಕಿ ಒಬ್ಬರು ಮತಗಳ್ಳತನದಿಂದ ಗೆದ್ದಿದ್ದಾರೆ ಎಂದು ಕಾಂಗ್ರೆಸ್​ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi) ಆರೋಪಿಸಿದ್ದು, ಅವರನ್ನು ನಾವು ಬಿಜೆಪಿ ಭಾಷೆಯಲ್ಲಿ ಹೇಳುವುದಾದರೇ ನುಸುಳುಕೋರರು ಎನ್ನಬೇಕೇ ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಇದೇ ನಿಜವಾದ ಸತ್ಯ. ಇಂದು ಲೋಕಸಭೆಗೆ ನ್ಯಾಯಯುತ ಚುನಾವಣೆ ನಡೆದರೆ ಬಿಜೆಪಿ 140 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಮತಗಳ್ಳತನದ ಮೂಲಕ ಸ್ಥಾನಗಳನ್ನು ಕದಿಯಲಾಗಿದೆ, ಕೆಲವೊಮ್ಮೆ ಇಡೀ ಸರ್ಕಾರವನ್ನೇ ಕದಿಯಲಾಗಿದೆ. ಲೋಕಸಭೆಯಲ್ಲಿರುವ 240 ಬಿಜೆಪಿ ಸಂಸದರಲ್ಲಿ ಪ್ರತಿ ಆರು ಸಂಸದರ ಪೈಕಿ ಒಬ್ಬರು ಮತಗಳ್ಳತನದ ಮೂಲಕ ಗೆದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಮತಗಳ್ಳತನದ ಮೂಲಕ ಗೆದ್ದವರನ್ನು ಗುರುತಿಸುವುದು ಕಷ್ಟವೇನಲ್ಲ. ಬಿಜೆಪಿಯ ಮಾತಿನಲ್ಲಿ ಹೇಳುವುದಾದರೆ ನಾವು ಅವರನ್ನು ನುಸುಳುಕೋರರು ಎಂದು ಹಣೆಪಟ್ಟಿ ಕಟ್ಟಬೇಕೇ? ಇನ್ನೂ ಹರಿಯಾಣದ ಕಥೆ ಏನು? ಇಡೀ ಸರ್ಕಾರವೇ ನುಸುಳುಕೋರರದ್ದು. ಮತದಾರರ ಪಟ್ಟಿ ಮತ್ತು ಚುನಾವಣಾ ಪ್ರಕ್ರಿಯೆಯನ್ನು ತಿರುಚಲು, ಬಿಜೆಪಿ ಚುನಾವಣಾ ಆಯೋಗವನ್ನು ರಿಮೋಟ್ ಕಂಟ್ರೋಲ್ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರವೂ, ಬಂಗಾಳ ಮತ್ತು ಅಸ್ಸಾಂನಲ್ಲಿ ಜನಾದೇಶ ಕಳ್ಳತನವಾಗಿದೆ, ಟಿಎಂಸಿ ಸೋಲನ್ನು ನೋಡಿ ಖುಷಿ ಪಟ್ಟು ಕ್ಷುಲ್ಲಕ ರಾಜಕೀಯ ಮಾಡಬೇಡಿ ಎಂದು ಕಾಂಗ್ರೆಸ್​ ನಾಯಕರು ಮತ್ತು ಇತರರಿಗೆ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದರು (ಏಜೆನ್ಸೀಸ್).