Prabhakaran Controversy | ಎಲ್‌ಟಿಟಿಇ ಪ್ರಭಾಕರನ್ ಸ್ಮರಿಸಿದ ಸಿಎಂ ವಿಜಯ್!
ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿ ದಳಪತಿ ವಿಜಯ್ ನಿಷೇಧಿತ ಸಂಘಟನೆ ಎಲ್‌ಟಿಟಿಇ (LTTE) ಸಂಸ್ಥಾಪಕ ವೇಲುಪಿಳ್ಳೈ ಪ್ರಭಾಕರನ್ ಸ್ಮರಣಾರ್ಥ (Prabhakaran Controversy) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ದೇಶಾದ್ಯಂತ ತಲ್ಲಣವನ್ನೇ ಸೃಷ್ಟಿಸಿದ್ದು, ವಿಜಯ್ ಈ ರೀತಿ ಗೌರವ ಸಲ್ಲಿಸಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.
ವಿಜಯ್ ನೇತೃತ್ವದ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿರುವ ಕಾಂಗ್ರೆಸ್ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಹರಿಹಾಯ್ದಿರುವ ಬಿಜೆಪಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಗೆ ಇದೇ ಎಲ್‌ಟಿಟಿಇ ಸಂಘಟನೆ ಕಾರಣವಾಗಿತ್ತು ಎಂಬುದನ್ನು ನೆನಪಿಸಿದೆ.
ವಿಜಯ್ ಹಾಕಿದ ಆ ಒಂದು ಪೋಸ್ಟ್
2009ರ ಮೇ 18 ರಂದು ಶ್ರೀಲಂಕಾ ಸೇನೆಯು ಪ್ರಭಾಕರನ್‌ನನ್ನು ಮುಲ್ಲಿವೈಕ್ಕಲ್‌ನಲ್ಲಿ ಹೊಡೆದುರುಳಿಸಿತ್ತು. ಈ ದಿನದ ಸವಿನೆನಪಿನಲ್ಲಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ಮುಖ್ಯಮಂತ್ರಿ ವಿಜಯ್, ಮುಲ್ಲಿವೈಕ್ಕಲ್‌ನ ಕಹಿ ನೆನಪುಗಳನ್ನು ನಾವು ಸದಾ ಹೃದಯದಲ್ಲಿ ಹೊತ್ತು ಸಾಗುತ್ತೇವೆ. ಸಮುದ್ರದಾಚೆ ವಾಸಿಸುತ್ತಿರುವ ನಮ್ಮ ತಮಿಳು ಬಾಂಧವರ ಹಕ್ಕುಗಳ ಪರವಾಗಿ ನಾವು ಯಾವಾಗಲೂ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಎಂದು ಬರೆದುಕೊಂಡಿದ್ದರು. 1991 ರಲ್ಲಿ ನಡೆದ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪ್ರಭಾಕರನ್ ಪ್ರಮುಖ ಆರೋಪಿಯಾಗಿದ್ದರಿಂದ ಮತ್ತು ಭಾರತದಲ್ಲಿ ಈ ಸಂಘಟನೆಯನ್ನು ನಿಷೇಧಿಸಿರುವುದರಿಂದ, ಹಾಲಿ ಮುಖ್ಯಮಂತ್ರಿಯೊಬ್ಬರು ಹೀಗೆ ಪೋಸ್ಟ್ ಮಾಡಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ರಾಹುಲ್ ಗಾಂಧಿಗೆ ಬಿಜೆಪಿಯ ರಾಜೀವ್ ನೆನಪು
ಮುಖ್ಯಮಂತ್ರಿ ವಿಜಯ್ ಪೋಸ್ಟ್ ಬೆನ್ನಲ್ಲೇ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿಯ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ತಂದೆಯನ್ನು ಹತ್ಯೆ ಮಾಡಿದ ಎಲ್‌ಟಿಟಿಇ ಮುಖ್ಯಸ್ಥನಿಗೆ ತಮಿಳುನಾಡಿನ ಹೊಸ ಮುಖ್ಯಮಂತ್ರಿ ಗೌರವ ಸಲ್ಲಿಸುತ್ತಿದ್ದರೂ ರಾಹುಲ್ ಗಾಂಧಿ ಅವರಿಗೆ ಯಾವುದೇ ತೊಂದರೆ ಇಲ್ಲ. ಕಾಂಗ್ರೆಸ್‌ಗೆ ಕೇವಲ ಅಧಿಕಾರದ ಸವಿ ಸವಿಯಲು ಸಿಕ್ಕರೆ ಸಾಕು. ಈ ಹಿಂದೆ ಎಲ್‌ಟಿಟಿಇ ಬೆಂಬಲಿಸುತ್ತಿದ್ದ ಡಿಎಂಕೆ ಜೊತೆಗೂ ಕಾಂಗ್ರೆಸ್ ಅತ್ಯಂತ ಆರಾಮದಾಯಕವಾಗಿ ಮೈತ್ರಿ ಮಾಡಿಕೊಂಡಿತ್ತು ಎಂದು ವ್ಯಂಗ್ಯವಾಡಿದ್ದಾರೆ.
ಈ ವಿವಾದದ ಕುರಿತು ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮೂಲಗಳು ಸಮರ್ಥನೆ ನೀಡಿದ್ದು, ವಿಜಯ್ ಕೇವಲ ಪ್ರಭಾಕರನ್ ಸಾವನ್ನು ಮಾತ್ರ ಉಲ್ಲೇಖಿಸಿಲ್ಲ, ಬದಲಿಗೆ ಶ್ರೀಲಂಕಾ ಯುದ್ಧದ ಕೊನೆಯ ಹಂತದಲ್ಲಿ ಮುಲ್ಲಿವೈಕ್ಕಲ್ ಗ್ರಾಮದಲ್ಲಿ ಹತ್ಯೆಗೀಡಾದ ಸಾವಿರಾರು ಅಮಾಯಕ ತಮಿಳರ ನರಮೇಧವನ್ನು ನೆನಪಿಸಿಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿವೆ. ವಿಶ್ವದಾದ್ಯಂತ ಇರುವ ತಮಿಳರು ಮೇ 18 ರಂದು ಮುಲ್ಲಿವೈಕ್ಕಲ್ ಸ್ಮರಣಾರ್ಥ ದಿನ ಅಥವಾ ತಮಿಳು ಜನಾಂಗೀಯ ಹತ್ಯೆ ಸ್ಮರಣ ದಿನ ಎಂದು ಆಚರಿಸುತ್ತಾರೆ. ಹಾಗಾಗಿ ಅಮಾಯಕ ಜೀವಿಗಳ ಪರವಾಗಿ ಧ್ವನಿ ಎತ್ತುವುದು ಒಬ್ಬ ಜವಾಬ್ದಾರಿಯುತ ನಾಯಕನ ಕರ್ತವ್ಯ ಎಂದು ಪಕ್ಷ ಹೇಳಿದೆ.
ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಈ ವಿಷಯವು ಪ್ರಮುಖ ಚರ್ಚೆಯಾಗಿರದಿದ್ದರೂ, ಪ್ರಚಾರದ ವೇಳೆ ವಿಜಯ್ ಲಂಕಾ ತಮಿಳರ ಪರವಾಗಿ ಮಾತನಾಡಿದ್ದರು. ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಸಾಮಾನ್ಯವಾಗಿ ಪ್ರಭಾಕರನ್ ಪರವಾಗಿ ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ. ಆದರೆ ವಿಜಯ್ ಸರ್ಕಾರವು ಎಲ್‌ಟಿಟಿಇ ಪರ ಒಲವು ಹೊಂದಿರುವ ವಿಸಿಕೆ ಪಕ್ಷದ ಬೆಂಬಲದೊಂದಿಗೆ ನಡೆಯುತ್ತಿರುವುದರಿಂದ, ಈ ರಾಜಕೀಯ ಬೆಳವಣಿಗೆ ಈಗ ತಮಿಳುನಾಡು ಮಾತ್ರವಲ್ಲದೆ ಇಡೀ ದೇಶದ ಗಮನ ಸೆಳೆದಿದೆ(ಏಜೆನ್ಸೀಸ್).