ಶಿಮ್ಲಾ: ಪ್ರೀತಿಗೆ ಯಾವುದೇ ವಯಸ್ಸಿನ ಹಂಗಿಲ್ಲ, ಸಂಗಾತಿಯ ಒಲವಿಗೆ ಮುಪ್ಪಿನ ಬಂಧನವಿಲ್ಲ ಎಂಬುದಕ್ಕೆ ಹಿಮಾಚಲ ಪ್ರದೇಶದ ವೃದ್ಧಾಶ್ರಮವೊಂದರಲ್ಲಿ ನಡೆದ ವಿಶೇಷ ವಿವಾಹವೊಂದು ( Old Age Home Love ) ತಾಜಾ ಸಾಕ್ಷಿಯಾಗಿದೆ. ಜೀವನದ ಸಂಧ್ಯಾಕಾಲದಲ್ಲಿ ಯಾರೂ ಇಲ್ಲದ ಏಕಾಂತಕ್ಕೆ ಗುರಿಯಾಗಿದ್ದ 75 ವರ್ಷದ ಕನ್ಹಯ್ಯಾ ಲಾಲ್ ಮತ್ತು 63 ವರ್ಷದ ಸವಿನಾ ಅವರು ಪರಸ್ಪರ ಪ್ರೀತಿಸಿ ಹಸೆಮಣೆ ಏರುವ ಮೂಲಕ ಹೊಸ ಬದುಕಿಗೆ ಕಾಲಿಟ್ಟಿದ್ದು, ಇಳಿ ವಯಸ್ಸಿನಲ್ಲಿ ಕೈಹಿಡಿದ ಈ ನವದಂಪತಿಯ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಮನಗೆದ್ದಿದೆ.
ಹಿಮಾಚಲ ಪ್ರದೇಶದ ವೃದ್ಧಾಶ್ರಮವೊಂದರಲ್ಲಿ ಆಶ್ರಯ ಪಡೆದಿದ್ದ ಈ ಇಬ್ಬರು ಹಿರಿಯ ಜೀವಗಳ ವಿವಾಹ ಮಹೋತ್ಸವವು ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ನೆರವೇರಿದೆ. ವೃದ್ಧಾಶ್ರಮದಲ್ಲಿದ್ದ ಇತರ ನಿವಾಸಿಗಳೆಲ್ಲರೂ ಕುಟುಂಬಸ್ಥರಂತೆ ಮುಂದೆ ನಿಂತು, ಕನ್ಹಯ್ಯಾ ಲಾಲ್ ಮತ್ತು ಸವಿನಾ ಅವರ ಮದುವೆಯಲ್ಲಿ ಅತ್ಯಂತ ಸಂತೋಷದಿಂದ ಪಾಲ್ಗೊಂಡು ನವಜೋಡಿಗೆ ಶುಭ ಹಾರೈಸಿದ್ದಾರೆ.
ಈ ವಿಶೇಷ ವಿವಾಹ ಸಮಾರಂಭಕ್ಕೆ ಇನ್ನಷ್ಟು ಮೆರುಗು ನೀಡಲು ವೃದ್ಧಾಶ್ರಮದಲ್ಲಿ ಸಂಗೀತ ಮತ್ತು ನೃತ್ಯದ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿತ್ತು. ತಮ್ಮ 75ರ ಇಳಿ ವಯಸ್ಸನ್ನೂ ಮರೆತ ವರ ಕನ್ಹಯ್ಯಾ ಲಾಲ್ ಅವರು ಸಂಗೀತದ ತಾಳಕ್ಕೆ ತಕ್ಕಂತೆ ಅತ್ಯಂತ ಉತ್ಸಾಹದಿಂದ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದ್ದು, ಈ ದೃಶ್ಯ ನೆರೆದಿದ್ದವರ ಕಣ್ಣಲ್ಲಿ ಆನಂದಭಾಷ್ಪ ತರಿಸಿದೆ. ಇನ್ನು ಈ ಅಪರೂಪದ ವಿವಾಹದ ಸುದ್ದಿ ತಿಳಿದು ಬಿಲಾಸ್ಪುರ ಜಿಲ್ಲಾಧಿಕಾರಿ ಕಿರಣ್ ಭದಾನಾ ಅವರೂ ಸಹ ಖುದ್ದು ವೃದ್ಧಾಶ್ರಮಕ್ಕೆ ಭೇಟಿ ನೀಡಿ, ನವದಂಪತಿಯನ್ನು ಅಭಿನಂದಿಸಿ ಅವರ ಮುಂದಿನ ಸುಖಕರ ದಾಂಪತ್ಯ ಜೀವನಕ್ಕೆ ಶುಭಾಶಯ ಕೋರಿದ್ದಾರೆ.
ವಧು-ವರರ ಹಿನ್ನೆಲೆಯನ್ನು ಗಮನಿಸುವುದಾದರೆ, ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ರೈತರಾಗಿದ್ದ ಕನ್ಹಯ್ಯಾ ಲಾಲ್ ಅವರಿಗೆ ಈ ಹಿಂದೆ ವಿವಾಹವಾಗಿದ್ದರೂ ಮಕ್ಕಳಿರಲಿಲ್ಲ. ಇಳಿ ವಯಸ್ಸಿನಲ್ಲಿ ಪತ್ನಿಯನ್ನು ಕಳೆದುಕೊಂಡು ತೀವ್ರ ಒಂಟಿತನಕ್ಕೆ ತುತ್ತಾದ ಅವರು, ತಮ್ಮಲ್ಲಿದ್ದ ಆಸ್ತಿಯನ್ನೆಲ್ಲಾ ಸಹೋದರರಿಗೆ ಬರೆದುಕೊಟ್ಟು ಮನೆ ತೊರೆದು ವೃದ್ಧಾಶ್ರಮ ಸೇರಿದ್ದರು. ಮತ್ತೊಂದೆಡೆ, ಪಶ್ಚಿಮ ಬಂಗಾಳದ ಕೋಲ್ಕತ್ತಾದಿಂದ ದಾರಿ ತಪ್ಪಿ ಹಿಮಾಚಲ ಪ್ರದೇಶದ ಶಿಮ್ಲಾ ತಲುಪಿದ್ದ 63 ವರ್ಷದ ಸವಿನಾ ಅವರಿಗೆ ಸ್ವಂತ ಮನೆ ಅಥವಾ ಆಶ್ರಯವಿರಲಿಲ್ಲ, ಹೀಗಾಗಿ ಸ್ಥಳೀಯ ಪೊಲೀಸರು ಅವರನ್ನು ರಕ್ಷಿಸಿ ಇದೇ ವೃದ್ಧಾಶ್ರಮಕ್ಕೆ ತಂದು ಸೇರಿಸಿದ್ದರು.
ವಿಧಿಯಾಟದಂತೆ ಒಂದೇ ಸೂರಿನಡಿ ಬಂದು ಸೇರಿದ ಕನ್ಹಯ್ಯಾ ಲಾಲ್ ಮತ್ತು ಸವಿನಾ ಅವರ ಪರಿಚಯವು ವೃದ್ಧಾಶ್ರಮದಲ್ಲಿ ಆರಂಭವಾಯಿತು. ದಿನಕಳೆದಂತೆ ಇಬ್ಬರೂ ತಮ್ಮ ಬದುಕಿನ ನೋವು-ನಲಿವುಗಳನ್ನು ಹಂಚಿಕೊಳ್ಳುತ್ತಾ ಪರಸ್ಪರ ಹತ್ತಿರವಾದರು ಹಾಗೂ ಇಳಿ ವಯಸ್ಸಿನಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ ಬಾಳಲು ವಿವಾಹವಾಗುವ ದೃಢ ನಿರ್ಧಾರ ಕೈಗೊಂಡರು. ಆಶ್ರಮದ ಸಿಬ್ಬಂದಿ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ನೆರವೇರಿದ ಈ ಪ್ರೇಮ ವಿವಾಹವು, ಜೀವನದ ಯಾವುದೇ ಹಂತದಲ್ಲೂ ಹೊಸ ಆರಂಭಕ್ಕೆ ಅವಕಾಶವಿದೆ ಎಂಬ ಸುಂದರ ಸಂದೇಶವನ್ನು ಸಮಾಜಕ್ಕೆ ನೀಡಿದೆ, (ಏಜೆನ್ಸೀಸ್).