

ತಿರುವನಂತಪುರಂ: ನಟಿ ನಿತ್ಯಾ ಮೆನನ್ ( Nithya Menen ) ಹೆಸರು ಕೇಳಿದ ಮೇಲೆ ಅವರ ಬಗ್ಗೆ ಹೆಚ್ಚು ಪರಿಚಯ ಮಾಡುವ ಅವಶ್ಯಕತೆ ಇಲ್ಲ. ಏಕೆಂದರೆ, ನಿತ್ಯಾ ಕೇವಲ ಒಂದು ಸಿನಿಮಾ ರಂಗಕ್ಕೆ ಸೀಮಿತವಾಗಿಲ್ಲ. ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಹಾಗೂ ಮಾಲಿವುಡ್ನಲ್ಲಿ ನಿತ್ಯಾ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಕನ್ನಡದಲ್ಲಿ ಜೋಶ್, ಮೈನಾ ಹಾಗೂ ಕೋಟಿಗೊಬ್ಬ 2 ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡಿಗರ ಮನದಲ್ಲಿ ಮನೆ ಮಾಡಿದ್ದಾರೆ. ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ ನಿತ್ಯಾ, ಕನ್ನಡಿಗರಿಗೂ ಅಚ್ಚುಮೆಚ್ಚು.
ನಿತ್ಯಾ ಮೆನನ್ ಅವರು ತಮ್ಮ ವಿಭಿನ್ನ ಪಾತ್ರಗಳ ಮೂಲಕವೇ ಚಿತ್ರರಂಗದಲ್ಲಿ ವಿಶಿಷ್ಟವಾದ ಗುರುತನ್ನು ಮೂಡಿಸಿದ್ದಾರೆ. ಹೀರೋ ಯಾರೇ ಆಗಿರಲಿ, ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ನಿತ್ಯಾ ಮೆನನ್ ಪ್ರಾಮುಖ್ಯತೆ ನೀಡುತ್ತಾರೆ. ಅಲ್ಲದೆ, ನಿತ್ಯಾ ನಟಿಸಿದ ಅನೇಕ ಸಿನಿಮಾಗಳಲ್ಲಿ ಅವರ ಪಾತ್ರವೇ ಪ್ರೇಕ್ಷಕರನ್ನು ಹೆಚ್ಚು ಗಮನ ಸೆಳೆದಿದೆ. ಇನ್ನು ಸಿನಿಮಾ ದೊಡ್ಡದಾದಷ್ಟೂ ಸಂಭಾವನೆ ಕೂಡ ಹೆಚ್ಚುತ್ತದೆ ಎಂಬ ಕಾರಣಕ್ಕೆ ದೊಡ್ಡ ಚಿತ್ರಗಳನ್ನು ನಿತ್ಯಾ ಒಪ್ಪುವುದಿಲ್ಲ. ತಮ್ಮ ಪಾತ್ರಕ್ಕೆ ಆದ್ಯತೆ ನೀಡಿದರೆ ಮಾತ್ರ ಅದರಲ್ಲಿ ನಟಿಸುತ್ತಾರೆ. ಹೀಗಾಗಿ ತಾನು ನಿರ್ವಹಿಸಿದ ಪಾತ್ರಗಳಿಗೆ ಸಾಕಷ್ಟು ಚಪ್ಪಾಳೆ ಗಿಟ್ಟಿಸಿದ್ದಾರೆ.
ತಾಜಾ ಸಂಗತಿ ಏನೆಂದರೆ, ನಟಿ ನಿತ್ಯಾ ಮೆನನ್ ಅವರಿಗೆ ಮದುವೆಯ ಬಗ್ಗೆ ಸ್ವಲ್ಪವೂ ಆಸಕ್ತಿಯಿಲ್ಲ, ಅವರು ವಿವಾಹ ವಿರೋಧಿ ಎಂಬುದಾಗಿ ಹಬ್ಬಿದ್ದ ಎಲ್ಲಾ ಊಹಾಪೋಹಗಳಿಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಸ್ವತಃ ನಿತ್ಯಾ ಅವರೇ ಇದೀಗ ಸ್ಪಷ್ಟನೆ ನೀಡಿದ್ದಾರೆ. 38ನೇ ವಯಸ್ಸಿನಲ್ಲೂ ತಮ್ಮ ವೈಯಕ್ತಿಕ ಬದುಕನ್ನು ಅತ್ಯಂತ ಖಾಸಗಿಯಾಗಿಟ್ಟಿರುವ ನಿತ್ಯಾ, ತಮಗೆ ಖಂಡಿತವಾಗಿಯೂ ಮದುವೆಯಾಗುವ ಆಸೆಯಿದೆ ಎಂದು ಮನಬಿಚ್ಚಿ ಮಾತನಾಡಿದ್ದಾರೆ. ಆದರೆ, ಕೇವಲ ಸಮಾಜಕ್ಕೋಸ್ಕರ ಅಥವಾ ಒಂದು ಸಂಪ್ರದಾಯಕ್ಕಾಗಿ ಯಾರನ್ನೋ ಬಾಳಸಂಗಾತಿಯನ್ನಾಗಿ ಮಾಡಿಕೊಳ್ಳಲು ತಾವು ಸಿದ್ಧವಿಲ್ಲ ಎಂಬ ದೃಢ ನಿರ್ಧಾರವನ್ನು ಅವರು ಸ್ಪಷ್ಟಪಡಿಸಿದ್ದಾರೆ.
ತಮ್ಮ ಹಳೆಯ ಸಂಬಂಧಗಳ ಕುರಿತು ಮುಕ್ತವಾಗಿ ಮಾತನಾಡಿರುವ ನಿತ್ಯಾ ಮೆನನ್, ವೈಯಕ್ತಿಕ ಸ್ವಾತಂತ್ರ್ಯ ಮತ್ತು ವ್ಯಕ್ತಿತ್ವಕ್ಕೆ ಬೆಲೆ ನೀಡದ ಸಂಬಂಧಗಳು ತಮ್ಮನ್ನು ಕಟ್ಟಿಹಾಕಿದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಅಂತಹ ಸಂಬಂಧಗಳಿಂದ ಹೊರಬರುವುದು ಆರಂಭದಲ್ಲಿ ಕಠಿಣ ನಿರ್ಧಾರವೆನಿಸಿದರೂ, ಆ ಸಂಬಂಧಗಳಲ್ಲಿ ಮುಂದುವರಿಯುವುದು ತಮ್ಮ ವೈಯಕ್ತಿಕ ಬೆಳವಣಿಗೆಗೆ ದೊಡ್ಡ ಮಾರಕವಾಗುತ್ತದೆ ಎಂಬುದನ್ನು ತಾವು ತಡವಾಗಿ ಅರಿತುಕೊಂಡಿದ್ದಾಗಿ ನಿತ್ಯಾ ಹೇಳಿದ್ದಾರೆ.
ವಿಶೇಷವಾಗಿ ಪ್ರೇಮ ಸಂಬಂಧಗಳಲ್ಲಿ ಒಬ್ಬರ ವ್ಯಕ್ತಿತ್ವವನ್ನು ದುರ್ಬಲಗೊಳಿಸುವಂತಹ ಪರಿಸ್ಥಿತಿ ಎದುರಾದಾಗ ಅದನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ, ತಾವು ಮುಕ್ತವಾಗಿ ಬೆಳೆಯಲು ಮತ್ತು ಸಂವಹನ ನಡೆಸಲು ಸಾಧ್ಯವಾಗದ ಜಾಗದಲ್ಲಿ ಎಂದಿಗೂ ಇರಲು ಸಾಧ್ಯವಿಲ್ಲ ಎಂದು ನಿತ್ಯಾ ವಿವರಿಸಿದ್ದಾರೆ. ಇತರರಿಗೆ ಅವರದ್ದೇ ಆದ ವೈಯಕ್ತಿಕ ಅವಕಾಶ ನೀಡದ ಅನೇಕ ಜನರಿದ್ದಾರೆ, ತಾವು ಅಂತಹ ಸಂಬಂಧಗಳಿಂದ ದೂರವಿರಲು ಭಯ ಕಾರಣವಲ್ಲ, ಬದಲಾಗಿ ಸರಿಯಾದ ಅರಿವು ಕಾರಣ ಎಂದು ಅವರು ಹೇಳಿದ್ದಾರೆ.
ಹಳೆಯ ಕಹಿ ಅನುಭವಗಳನ್ನು ಸ್ಮರಿಸಿಕೊಂಡಿರುವ ನಿತ್ಯಾ, ಕೆಲವು ಸಂಬಂಧಗಳಲ್ಲಿ ತಾವು ತಮ್ಮ ಸಹಜತೆ ಮತ್ತು ಆತ್ಮವಿಶ್ವಾಸವನ್ನೇ ಕಳೆದುಕೊಂಡಂತೆ ಭಾಸವಾಗಿತ್ತು ಎಂದು ತಿಳಿಸಿದ್ದಾರೆ. ಅಂತಹ ನಿರ್ಬಂಧಗಳು ತಮ್ಮನ್ನು ಮಾನಸಿಕವಾಗಿ ನಿಷ್ಕ್ರಿಯಗೊಳಿಸಿದ್ದವು ಎಂದು ವಿವರಿಸಿರುವ ನಟಿ, ತಾವು ಹೇಗಿದ್ದೇವೋ ಹಾಗೆಯೇ ಒಪ್ಪಿಕೊಳ್ಳುವ ಮತ್ತು ಬೆಂಬಲಿಸುವ ಸಂಬಂಧವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು ಎಂಬ ದೃಢ ನಿರ್ಧಾರಕ್ಕೆ ಬಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಂತಹ ಉಸಿರುಗಟ್ಟಿಸುವ ಪರಿಸ್ಥಿತಿಗಳಿಂದ ಹೊರಬಂದಾಗ ತಮಗೆ ದೊಡ್ಡ ಮಟ್ಟದ ನೆಮ್ಮದಿ ಸಿಕ್ಕಿತು ಮತ್ತು ತನ್ನೆದುರು ಹೊಸ ಪ್ರಪಂಚವೇ ತೆರೆದುಕೊಂಡಂತೆ ಭಾಸವಾಯಿತು ಎಂದು ನಿತ್ಯಾ ಹೇಳಿಕೊಂಡಿದ್ದಾರೆ.
ಇದೇ ವೇಳೆ, ತಮಗೆ ಮದುವೆಯ ಬಗ್ಗೆ ಆಸಕ್ತಿಯಿಲ್ಲ ಎಂಬುದಾಗಿ ಹರಿದಾಡುತ್ತಿರುವ ತಪ್ಪು ಕಲ್ಪನೆಗಳಿಗೂ ನಿತ್ಯಾ ಮೆನನ್ ಸ್ಪಷ್ಟನೆ ನೀಡಿದ್ದಾರೆ. "ನಾನು ಒಂಟಿಯಾಗಿದ್ದೇನೆ ಎಂದು ಹೇಳಿದಾಗ, ನಾನು ಮದುವೆಯ ವಿರೋಧಿ ಅಥವಾ ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಅದು ನಿಜವಲ್ಲ, ನನಗೆ ಮದುವೆಯಾಗಲು ಇಷ್ಟವಿಲ್ಲ ಎಂದು ನಾನು ಎಂದಿಗೂ ಹೇಳಿಲ್ಲ. ನನಗೆ ಮದುವೆಯಾಗುವ ಆಸೆಯಿದೆ, ಆದರೆ ಜೀವನದಲ್ಲಿ ನನಗೆ ಏನು ಬೇಕು ಎಂಬುದರ ಬಗ್ಗೆ ನನಗೆ ಸ್ಪಷ್ಟ ಕಲ್ಪನೆಯಿದೆ. ನನಗೆ ಕೇವಲ ಒಂದು ಮದುವೆ ಬೇಕಾಗಿಲ್ಲ, ಬದಲಾಗಿ ಸರಿಯಾದ ಪಾಲುದಾರಿಕೆ ಬೇಕಾಗಿದೆ. ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ವ್ಯಕ್ತಿ ಸಿಗುವವರೆಗೂ ನಾನು ಮದುವೆಯ ನಿರ್ಧಾರಕ್ಕೆ ಮುಂದಾಗಲು ಸಿದ್ಧಳಿಲ್ಲ ಎಂದು ನಿತ್ಯಾ ಖಡಕ್ಕಾಗಿ ನುಡಿದಿದ್ದಾರೆ.
'ತಿರುಚಿತ್ರಂಬಲಂ' ಚಿತ್ರದ ಅಮೋಘ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದರೂ ಸಹ, ಸಾರ್ವಜನಿಕವಾಗಿ ಎಲ್ಲರ ಗಮನದ ಕೇಂದ್ರಬಿಂದುವಾಗಿರುವುದು ತಮಗೆ ಮುಜುಗರ ತರುತ್ತದೆ ಎಂದು ನಿತ್ಯಾ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸ್ವಯಂ-ಆರೈಕೆ, ಕೆಲಸದ ಸ್ಥಳದಲ್ಲಿ ಸ್ಪಷ್ಟ ಗಡಿಗಳನ್ನು ಹಾಕಿಕೊಳ್ಳುವುದು ಮತ್ತು ಭಾವನಾತ್ಮಕ ಸವಾಲುಗಳನ್ನು ಎದುರಿಸುವಂತಹ ವಿಷಯಗಳ ಬಗ್ಗೆ ನಟಿ ಹೆಚ್ಚು ಮಾತನಾಡುತ್ತಿದ್ದಾರೆ. ತಮ್ಮ ಜೀವನದ ಪಯಣ ಮತ್ತು ಕಲಿಕೆ ಸಿನಿಮಾಗಳ ಮೂಲಕವೇ ಸಾಗಿದೆ ಎಂದಿರುವ ನಿತ್ಯಾ, ಈಗ ಹಿಂತಿರುಗಿ ನೋಡಿದಾಗ ತಾವು ಬೇರೆ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಂಡಿದ್ದರೆ ಬದುಕು ಇನ್ನಷ್ಟು ಸುಲಭವಾಗಿರುತ್ತಿತ್ತು ಎಂದು ಅನಿಸುತ್ತದೆ ಎಂದಿದ್ದಾರೆ.
ಬಾಲ್ಯದಿಂದಲೂ ತಮಗೆ ಎಲ್ಲರ ಗಮನ ಸೆಳೆಯುವುದು ಕಷ್ಟಕರವಾಗಿತ್ತು ಮತ್ತು ವಯಸ್ಕರಾದ ಮೇಲೂ ಆ ಸ್ವಭಾವದಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ ಎಂದು ನಿತ್ಯಾ ಮೆನನ್ ಸ್ಪಷ್ಟಪಡಿಸಿದ್ದಾರೆ. ಚಿಕ್ಕವಳಿದ್ದಾಗ ಜನರು ನನ್ನನ್ನು ಗಮನಿಸಿದಾಗಲೆಲ್ಲಾ ನನಗೆ ತುಂಬಾ ನಾಚಿಕೆ ಮತ್ತು ಅಸಹಜತೆ ಕಾಡುತ್ತಿತ್ತು. ಇಂದಿಗೂ ಸಹ ಎಲ್ಲರ ಗಮನದ ಕೇಂದ್ರವಾಗಿರುವುದು ನನಗೆ ಒಂದು ದೊಡ್ಡ ಸವಾಲಾಗಿದೆ. ನನಗೆ ಏಕೆ ಹೀಗೆ ಅನಿಸುತ್ತದೆ ಎಂದು ಆಳವಾಗಿ ಯೋಚಿಸಿದಾಗ, ಅದು ನನ್ನ ಆಂತರಿಕ ಸ್ವಭಾವ ಎಂಬುದು ಅರಿವಾಗುತ್ತದೆ, ಆದರೂ ನಾನು ಅದನ್ನು ಮೀರಿ ನಿಲ್ಲಲು ನಿರಂತರವಾಗಿ ಪ್ರಯತ್ನಿಸುತ್ತೇನೆ ಎಂದು ನಟಿ ತಮ್ಮ ಮನದಾಳದ ಭಾವನೆಗಳನ್ನು ಹಂಚಿಕೊಂಡಿದ್ದಾರೆ.
ಜೀವನ ನಡೆಸಲು ಎರಡು ಮುಖ್ಯ ಮಾರ್ಗಗಳಿವೆ ಎಂದು ನಂಬಿರುವ ನಿತ್ಯಾ ಮೆನನ್, ಒಂದು ಅಹಂಕಾರದಿಂದ ಕೂಡಿದ ಮಾರ್ಗವಾದರೆ, ಮತ್ತೊಂದು ಸಹಜ ಮತ್ತು ಆಧ್ಯಾತ್ಮಿಕ ಮಾರ್ಗ ಎಂದು ವಿಶ್ಲೇಷಿಸಿದ್ದಾರೆ. ಆದಾಗ್ಯೂ, ಇತರರಿಂದ ಪ್ರೀತಿ ಮತ್ತು ಗಮನವನ್ನು ಪಡೆಯುವುದನ್ನು ಯಾವಾಗಲೂ ತಪ್ಪಾಗಿ ನೋಡಬಾರದು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಅಂತಿಮವಾಗಿ, ನಟನೆ ಮತ್ತು ಸಿನಿಮಾಗಳು ತಮ್ಮ ಜೀವನದ ಪ್ರಮುಖ ಭಾಗಗಳು ಮಾತ್ರವೇ ಹೊರತು, ಅವೇ ತಮ್ಮ ಇಡೀ ಪ್ರಪಂಚವಲ್ಲ ಎಂಬ ಮಹತ್ವದ ಸಂದೇಶವನ್ನು ನಿತ್ಯಾ ಮೆನನ್ ಅಭಿಮಾನಿಗಳಿಗೆ ನೆನಪಿಸಿದ್ದಾರೆ, (ಏಜೆನ್ಸೀಸ್).