ಸುಪ್ರೀಂಕೋರ್ಟ್ 
ದೇಶ

UAPA, PMLA ಸಹಿತ ಯಾವುದೇ ಸಮಯದಲ್ಲಿ ವ್ಯಕ್ತಿ ಬಂಧಿಸುವಾಗ ಅಧಿಕಾರಿ ಲಿಖಿತ ಕಾರಣಗಳನ್ನು ನೀಡಬೇಕು: ಸುಪ್ರೀಂಕೋರ್ಟ್ | Supreme Court

ಸಂವಿಧಾನದ ವಿಧಿ 22(1)ರ ಪಾಲನೆ ಕಡ್ಡಾಯ ಮಾಡಿರುವ ಸುಪ್ರೀಂಕೋರ್ಟ್, ಯುಎಪಿಎ, ಪಿಎಂಎಲ್​ಎ ಸಹಿತ ಯಾವುದೇ ಪ್ರಕರಣದ ಸಂದರ್ಭದಲ್ಲಿ ವ್ಯಕ್ತಿಯನ್ನು ಬಂಧಿಸುವ ವೇಳೆ ಅಧಿಕಾರಿ ಲಿಖಿತವಾದ ಕಾರಣಗಳನ್ನು ನೀಡಬೇಕೆಂದು ಸೋಮವಾರ(ಸೆ. 21) ಮಹತ್ವದ ಆದೇಶ ಹೊರಡಿಸಿದೆ.

ನವದೆಹಲಿ: ಸಂವಿಧಾನದ ವಿಧಿ 22(1)ರ ಪಾಲನೆ ಕಡ್ಡಾಯ ಮಾಡಿರುವ ಸುಪ್ರೀಂಕೋರ್ಟ್, ಯುಎಪಿಎ, ಪಿಎಂಎಲ್​ಎ ಸಹಿತ ಯಾವುದೇ ಪ್ರಕರಣದ ಸಂದರ್ಭದಲ್ಲಿ ವ್ಯಕ್ತಿಯನ್ನು ಬಂಧಿಸುವ ವೇಳೆ ಅಧಿಕಾರಿ ಲಿಖಿತವಾದ ಕಾರಣಗಳನ್ನು ನೀಡಬೇಕೆಂದು ಸೋಮವಾರ(ಸೆ. 21) ಮಹತ್ವದ ಆದೇಶ ಹೊರಡಿಸಿದೆ.

ಬಾಲಕಿಯೊಬ್ಬಳ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದಂತೆ ಶಿರೋಮಣಿ ಅಕಾಲಿ ದಳದ ಮುಲ್ಲಾನ್‌ಪುರ ದಖಾ ಕ್ಷೇತ್ರ ಉಸ್ತುವಾರಿ ಜಸ್ಕರನ್‌ಜಿತ್ ಸಿಂಗ್ ಬಂಧನಕ್ಕೊಳಗಾಗಿದ್ದರು. ಬಳಿಕ ಸ್ಥಳೀಯ ನ್ಯಾಯಾಲಯ ಅವರ ಬಂಧನ ಕಾನೂನುಬಾಹಿರ ಎಂದು ಘೋಷಿಸಿ ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.

ಆದರೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸ್ಥಳೀಯ ನ್ಯಾಯಾಲಯ ನೀಡಿದ ಆದೇಶಕ್ಕೆ ತಡೆ ನೀಡಿತ್ತು. ಇದನ್ನೂ ಪ್ರಶ್ನಿಸಿ ಜಸ್ಕರನ್‌ಜಿತ್ ಸಿಂಗ್ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದರು. ಸೋಮವಾರ(ಸೆ. 21) ಅರ್ಜಿ ವಿಚಾರಣೆ ನಡೆಸಿದ ನ್ಯಾ. ಉಜ್ಜಲ್ ಭುಯಾನ್ ಮತ್ತು ಅತುಲ್ ಎಸ್. ಚಂದುರ್ಕರ್ ಅವರಿದ್ದ ಪೀಠವು, ಅವರ ಬಂಧನಕ್ಕೆ ಕಾರಣಗಳನ್ನು ತಿಳಿಸಿರಲಿಲ್ಲ ಎಂದು ಹೇಳಿ, ಬಂಧನವನ್ನು ಕಾನೂನುಬಾಹಿರ ಎಂದು ಘೋಷಿಸಿ ಬಿಡುಗಡೆದೆ ಆದೇಶ ನೀಡಿದೆ.

ಇದೇ ವೇಳೆ ಹಲವು ಸೂಚನೆಗಳನ್ನು ನೀಡಿದ ಪೀಠವು, ಓರ್ವ ವ್ಯಕ್ತಿಯನ್ನು ಬಂಧಿಸಬೇಕು ಅಂದ್ರೆ ಲಿಖಿವಾಗಿ ಕಾರಣಗಳನ್ನು ನೀಡಬೇಕು. ಮತ್ತು ಅದು ಆ ವ್ಯಕ್ತಿಗೆ ಅರ್ಥವಾಗುವ ಭಾಷೆಯಲ್ಲಿರಬೇಕು ಎಂದು ಹೇಳಿದೆ. ಬಂಧನಕ್ಕೆ ಕಾರಣಗಳನ್ನು ಲಿಖಿತವಾಗಿ ನೀಡದಿದ್ದರೇ ಆ ಬಂಧನ ಕಾನೂನುಬಾಹಿರವಾಗುತ್ತದೆ ಎಂದು ತಿಳಿಸಿದೆ.

ಸಂವಿಧಾನದ ವಿಧಿ 22(1)ರ ಉಲ್ಲಂಘನೆ ಮೇಲೆ ತನಿಖಾ ಸಂಸ್ಥೆಯು ನಂತರದ ಹಂತದಲ್ಲಿ ಆ ವ್ಯಕ್ತಿಯನ್ನು ಮರುಬಂಧಿಸಲು ಬಯಸಿದರೆ, ಮೊದಲು ಬಂಧನದ ಕಾರಣಗಳನ್ನು ಲಿಖಿತವಾಗಿ ಒದಗಿಸಬೇಕು. ಮತ್ತು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಅವರಿಂದ ಅನುಮತಿ ಪಡೆಯಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಅಷ್ಟೇ ಅಲ್ಲದೇ ಈ ನಿಬಂಧನೆಯು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್​ಎ) ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ನಂತಹ ನಿರ್ದಿಷ್ಟ ಕಾನೂನುಗಳ ಅಡಿಯಲ್ಲಿ ಮಾಡಲಾದ ಬಂಧನಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದೆ (ಏಜೆನ್ಸೀಸ್).