ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ)ನ ನಮ್ಮ ಶಾಸಕರಿಗೆ ಪಕ್ಷ ಬದಲಾಯಿಸಲು ಬಿಜೆಪಿ 20 ರಿಂದ 30 ಕೋಟಿ ರೂ. ಆಮಿಷವೊಡ್ಡಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ(CM Omar Abdullah) ಶನಿವಾರ(ಜು. 11) ಗಂಭೀರ ಆರೋಪ ಮಾಡಿದ್ದಾರೆ.
ಶ್ರೀನಗರದ ಹಜರತ್‌ಬಾಲ್‌ನಲ್ಲಿ ನಡೆದ 'ಮದಾರ್-ಎ-ಮೆಹರ್ಬನ್' ದಿನದ ರ್ಯಾಲಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ಅವರು, ನ್ಯಾಷನಲ್ ಕಾನ್ಫರೆನ್ಸ್ ಅನ್ನು ವಿಭಜಿಸಲು ಮತ್ತೊಂದು ಪ್ರಯತ್ನ ನಡೆಯುತ್ತಿದೆ. ಬಿಜೆಪಿ ನಮ್ಮ ಶಾಸಕರಿಗೆ 20-30 ಕೋಟಿ ರೂ., ಸಚಿವ ಸ್ಥಾನ ಮತ್ತು ರಾಜ್ಯ ಸ್ಥಾನಮಾನದ ಆಫರ್ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ತಾಳ್ಮೆ ಮತ್ತು ಸಭ್ಯತೆಯನ್ನು ಪರೀಕ್ಷಿಸಬೇಡಿ ಎಂದು ಬಿಜೆಪಿ ಎಚ್ಚರಿಕೆ ನೀಡಿರುವ ಅವರು, ನಿಮ್ಮ ಹಣದ ದುರಾಸೆ, ಮಂತ್ರಿಗಿರಿ ಆಮಿಷ ಕೆಲಸ ಮಾಡದಿದ್ದಾಗ, ನನ್ನ ಶಾಸಕರಿಗೆ ಮುಚ್ಚಿದ ಕೋಣೆಯಲ್ಲಿ ನೀವು ನಮ್ಮೊಂದಿಗೆ ಬನ್ನಿ ಮತ್ತು ನೀವು ನಮ್ಮೊಂದಿಗೆ ಸೇರಿದ್ರೆ ನಾವು ನಿಮಗೆ ರಾಜ್ಯತ್ವ ನೀಡುತ್ತೇವೆ ಎಂದು ಹೇಳುತ್ತಿದ್ದೀರಿ ಎನ್ನುವುದು ನಮಗೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ನನ್ನ ಜಮ್ಮು ಶಾಸಕರೊಬ್ಬರು ನನ್ನ ಕೋಣೆಗೆ ಬಂದು ಹೇಳಿದ್ದರು ಎಂಬುದಕ್ಕೆ ಅಲ್ಲಾಹನೇ ಸಾಕ್ಷಿ. ಬಿಜೆಪಿ ಕಾರ್ಯಕರ್ತನೂ ಆಗಿರುವ ಸುಪ್ರೀಂ ಕೋರ್ಟ್ ವಕೀಲರೊಬ್ಬರು ತಮ್ಮ ಜಮ್ಮು ಶಾಸಕರೊಬ್ಬರನ್ನು ಸಂಪರ್ಕಿಸಿದ್ದಾರೆ. ನೀವು ನಮ್ಮೊಂದಿಗೆ ಸೇರಿಕೊಂಡರೆ ನಾವು 20-30 ಕೋಟಿ ರೂ., ಒಂದು ಸಚಿವಾಲಯ ಮತ್ತು ರಾಜ್ಯ ಸ್ಥಾನಮಾನವನ್ನು ನೀಡುತ್ತೇವೆ ಆಫರ್ ನೀಡಿದ್ದಾರೆ.
ಈ ಜನರ ನಂಬಿಕೆ ತುಂಬಾ ಅಗ್ಗವಾಗಿದೆ ಎಂದು ಅವರು ಭಾವಿಸುತ್ತಾರೆ. ಈ ವೇದಿಕೆಯನ್ನು ನೋಡಿ, 20 ಕೋಟಿ ಅಥವಾ 100 ಕೋಟಿ ರೂಪಾಯಿಗಳಿಗೆ ತಮ್ಮ ನಂಬಿಕೆಯನ್ನು ಮಾರಲು ಸಿದ್ಧರಿರುವ ಯಾರನ್ನೂ ನೀವು ನೋಡುವುದಿಲ್ಲ. ನಮಗೆಲ್ಲರಿಗೂ ತಿಳಿದಿದೆ, ಬಾಬಾ-ಎ-ಕೌಮ್ ಶೇಖ್ ಮೊಹಮ್ಮದ್ ಅಬ್ದುಲ್ಲಾ), ಮಾದ್ರೆ ಮೆಹರ್ಬನ್ ಮತ್ತು ಫಾರೂಕ್ ಅಬ್ದುಲ್ಲಾ ಅವರು ಈ ಜಗತ್ತಿನಲ್ಲಿ ನಮ್ಮ ಕಾರ್ಯಗಳಿಗೆ ನಾವು ಉತ್ತರಿಸಬೇಕೇ ಅಥವಾ ಬೇಡವೇ, ಅಲ್ಲಾಹನ ಮುಂದೆ ನಾವು ಉತ್ತರಿಸಬೇಕಾದ ದಿನ ಬರುತ್ತದೆ ಎಂದು ನನಗೆ ಕಲಿಸಿದ್ದಾರೆ ಎಂದು ಹೇಳಿದ್ದಾರೆ.
ನಮ್ಮನ್ನು ದುರ್ಬಲರೆಂದು ಪರಿಗಣಿಸಬೇಡಿ. ನೀವು ಹಿಂದಿನ ಬಾಗಿಲಿನಿಂದ ಒಳಗೆ ಬರಲು ಸಾಧ್ಯವಾಗುವುದಿಲ್ಲ. ಹಿಂದಿನ ಬಾಗಿಲಿನಿಂದ ಮುಂದಿನ ಸೀಟಿಗೆ ಬರಲು ನಿಮಗೆ ಸಾಧ್ಯವಾಗುವುದಿಲ್ಲ. ಇದೀಗ, ಜನರು ನಿಮ್ಮನ್ನು ಹಿಂದೆಯೇ ಇಟ್ಟಿದ್ದಾರೆ. ನೀವು ಹಿಂದೆಯೇ ಇರುತ್ತೀರಿ. 371ನೇ ವಿಧಿ ಕುರಿತು ಕೇಂದ್ರ ಮತ್ತು ಲಡಾಖ್ ನಾಯಕರ ನಡುವಿನ ಮಾತುಕತೆ ನಡೆದಂತೆ ಜಮ್ಮು ಮತ್ತು ಕಾಶ್ಮೀರದೊಂದಿಗೆ ಯಾಕೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇಂದು, ತಿಳಿದೋ ಅಥವಾ ತಿಳಿಯದೆಯೋ, ಪ್ರತಿಭಟನೆಯಿಲ್ಲದೆ ನಮಗೆ ಏನೂ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಒಂದೇ ಒಂದು ಮಾರ್ಗವಿರಬೇಕು ಮತ್ತು ಎಲ್ಲವೂ ಸಮಾನವಾಗಿರಬೇಕು ಎಂದು ಹೇಳಲಾಗುತ್ತಿದೆ. ಅದಕ್ಕಾಗಿಯೇ ನಾವು 370 ಅನ್ನು ತೆಗೆದುಹಾಕಿದ್ದೇವೆ ಎನ್ನುತ್ತಾರೆ. ಆದರೆ ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಲು ಮುಂದಡಿಯಿಟ್ಟಂತೆ ಕಾಶ್ಮೀರಕ್ಕೆ ನೀಡುತ್ತಿಲ್ಲ ಎಂದಿದ್ದಾರೆ (ಏಜೆನ್ಸೀಸ್).