RCB | ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು
ಬೆಂಗಳೂರು: ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಆರ್‌ಸಿಬಿ (RCB) ತಂಡದ ವೇಗಿ ಯಶ್ ದಯಾಳ್ ಮುಂಬರುವ ಐಪಿಎಲ್ನಿಂದ ಅಧಿಕೃತವಾಗಿ ಹೊರಬಿದ್ದಿದ್ದು, ಇದು ತಂಡದ ಪಾಲಿಗೆ ದೊಡ್ಡ ಹಿನ್ನಡೆಯಂದೇ ಭಾವಿಸಲಾಗಿದೆ.
2025ರ ಸೀಸನ್ ಬಳಿಕ ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ಪೋಕ್ಸೊ ಪ್ರಕರಣದಂತಹ ಗಂಭೀರ ಕಾನೂನು ಸಂಘರ್ಷಗಳನ್ನು ಎದುರಿಸುತ್ತಿರುವ ದಯಾಳ್, ಕಳೆದ ಕೆಲ ತಿಂಗಳುಗಳಿಂದ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಇಷ್ಟೆಲ್ಲಾ ಸವಾಲುಗಳ ನಡುವೆಯೂ ಆರ್‌ಸಿಬಿ ಫ್ರಾಂಚೈಸಿ ಅವರನ್ನು ತಂಡದಲ್ಲಿ ಉಳಿಸಿಕೊಂಡಿತ್ತಾದರೂ, ಅಂತಿಮವಾಗಿ ಅವರು ಈ ಬಾರಿಯ ಟೂರ್ನಿಯಿಂದ ಹೊರಬಿದ್ದಿದ್ದಾರೆ.
ದಯಾಳ್ ಅನುಪಸ್ಥಿತಿಯ ಕುರಿತು ಪ್ರತಿಕ್ರಿಯಿಸಿರುವ ಆರ್‌ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್, ದಯಾಳ್ ಎದುರಿಸುತ್ತಿರುವ ಪರಿಸ್ಥಿತಿ ಕ್ಲಿಷ್ಟಕರವಾಗಿದ್ದು, ಅವರ ಲಭ್ಯತೆಯನ್ನು ಊಹಿಸುವುದು ಕಷ್ಟ ಎಂದಿದ್ದಾರೆ. ಯಶ್ ದಯಾಳ್ ಲಭ್ಯವಿರುವುದಿಲ್ಲ ಎಂಬ ಕೆಟ್ಟ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ನಾವು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದೆವು. ಅವರ ಅಲಭ್ಯತೆಯು ತಂಡಕ್ಕೆ ದೊಡ್ಡ ಹೊಡೆತ ಎಂಬುದು ನಿಜ, ಆದರೆ ನಮ್ಮಲ್ಲಿ ಸಮರ್ಥವಾದ ದೇಶೀಯ ವೇಗಿಗಳ ದಂಡೇ ಇದೆ ಎಂದು ಬೊಬಾಟ್ ತಿಳಿಸಿದ್ದಾರೆ.
ದಯಾಳ್ ಸ್ಥಾನದಲ್ಲಿ ತಂಡಕ್ಕೆ ಬಲ ನೀಡಬಲ್ಲ ರಸಿಕ್ ಸಲಾಂ ದಾರ್, ಅಭಿನಂದನ್ ಸಿಂಗ್ ಮತ್ತು ಮಂಗೇಶ್ ಯಾದವ್ ಅವರಂತಹ ಪ್ರತಿಭಾನ್ವಿತ ವೇಗಿಗಳ ಬಗ್ಗೆ ಬೊಬಾಟ್ ಹೆಚ್ಚಿನ ಭರವಸೆ ಇಟ್ಟಿದ್ದಾರೆ.
ಆಸ್ಟ್ರೇಲಿಯಾದ ಸ್ಟಾರ್ ವೇಗಿ ಜೋಶ್ ಹ್ಯಾಜಲ್‌ವುಡ್ ಲಭ್ಯತೆಯ ಬಗ್ಗೆಯೂ ತಂಡದಲ್ಲಿ ಅನಿಶ್ಚಿತತೆ ಮುಂದುವರಿದಿದ್ದು, ಹ್ಯಾಜಲ್‌ವುಡ್ ಯಾವಾಗ ತಂಡವನ್ನು ಸೇರಲಿದ್ದಾರೆ ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ನಾವು ಜೋಶ್ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಅವರ ಫಿಟ್‌ನೆಸ್ ಕುರಿತು ನಮ್ಮ ವೈದ್ಯಕೀಯ ತಂಡಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿವೆ. ಕ್ರಿಕೆಟ್ ಆಸ್ಟ್ರೇಲಿಯಾ ಗ್ರೀನ್ ಸಿಗ್ನಲ್ ನೀಡಿದ ತಕ್ಷಣ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಬೊಬಾಟ್ ಮಾಹಿತಿ ನೀಡಿದ್ದಾರೆ.
ಪ್ರಮುಖ ಬೌಲರ್‌ಗಳ ಅಲಭ್ಯತೆ ಮತ್ತು ಅನಿಶ್ಚಿತತೆಯ ನಡುವೆಯೂ, ಲಭ್ಯವಿರುವ ಬದಲಿ ಆಯ್ಕೆಗಳೊಂದಿಗೆ ಆರ್‌ಸಿಬಿ ಈ ಬಾರಿಯ ಐಪಿಎಲ್‌ನಲ್ಲಿ ಸವಾಲು ಎದುರಿಸಲು ಸಜ್ಜಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ತಂಡದ ಬೆನ್ನೆಲುಬಾಗಿದ್ದ ದಯಾಳ್ ಅವರ ಸ್ಥಾನವನ್ನು ಹೊಸ ದೇಶೀಯ ವೇಗಿಗಳು ಹೇಗೆ ತುಂಬಲಿದ್ದಾರೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ(ಏಜೆನ್ಸೀಸ್).