ಸಾಂದರ್ಭಿಕ ಚಿತ್ರ 
ದೇಶ

ರೈಲ್ಟೈ ಹಳಿ ಮೇಲೆ ರೀಲ್ಸ್ ಮಾಡುವ ಹುಚ್ಚು; ರೈಲು ಡಿಕ್ಕಿ ಹೊಡೆದು ಎರಡೂ ಕೈಗಳನ್ನು ಕಳೆದುಕೊಂಡ ಯುವತಿ | reels

ರಾಂಚಿ: ಸಾಮಾಜಿಕ ಜಾಲತಾಣಗಳಲ್ಲಿ ಪಾಲೋವರ್ಸ್​ ಹೆಚ್ಚಿಸಿಕೊಳ್ಳಲು ಮತ್ತು ರಾತ್ರೋರಾತ್ರಿ ಪ್ರಸಿದ್ದರಾಗಲು ಕೆಲವರು ಮಾಡುತ್ತಿರುವ ರೀಲ್ಸ್(reels) ಹುಚ್ಚಾಟ, ಸಾಹಸಗಳು ಅವರ ಜೀವನವನ್ನೇ ನರಕ ಮಾಡುತ್ತಿವೆ. ಅಂತಹದ್ದೇ ಒಂದು ಘಟನೆ ಮಂಗಳವಾರ(ಆ. 25) ಜಾರ್ಖಂಡ್​​ನಲ್ಲಿ ನಡೆದಿದ್ದು ಯುವತಿಯ ಜೀವನವನ್ನೇ ನರಕ ಮಾಡಿದೆ.
ಹಳಿ ಮೇಲೆ ರೀಲ್ಸ್​ ಮಾಡುವಾಗ ರೈಲು ಡಿಕ್ಕಿ ಹೊಡೆದ ಪರಿಣಾಮ ಯುವತಿಯೊಬ್ಬಳ ತನ್ನ ಎರಡೂ ಕೈಗಳನ್ನು ಕಳೆದುಕೊಂಡಿದ್ದಾಳೆ. ಜಾರ್ಖಂಡ್​ ಗರ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಜೋಬಾರಿಯಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಪೂರ್ಣಿಮಾ ಕುಮಾರಿ ರೀಲ್ಸ್ ಹುಚ್ಚಿಗೆ ತನ್ನ ಎರಡು ಕೈಗಳನ್ನು ಕಳೆದುಕೊಂಡ 19 ವರ್ಷದ ಯುವತಿ.
ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಪೂರ್ಣಿಮಾ ಕುಮಾರಿ ತನ್ನ ಸ್ನೇಹಿತರೊಂದಿಗೆ ರೀಲ್ಸ್ ಮಾಡಲು ಜೋಬಾರಿಯಾ ಗ್ರಾಮದ ಬಳಿಯ ರೈಲ್ವೆ ಹಳಿಗೆ ಹೋಗಿದ್ದಳು ಎನ್ನಲಾಗಿದೆ. ಅವರು ಹಳಿಯಲ್ಲಿ ರೀಲ್ಸ್ ಮಾಡುತ್ತಿದ್ದಾಗ ವೇಗವಾಗಿ ಬಂದ ರಾಂಚಿ-ಚೋಪನ್ ರೈಲು ಹಿಂದಿನಿಂದ ಪೂರ್ಣಿಮಾಗೆ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ಅವಳ ಎರಡೂ ಕೈಗಳು ಕಟ್ ಆಗಿವೆ. ಮತ್ತು ದೇಹದ ಇತರ ಹಲವು ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಸ್ನೇಹಿತರು ಅವಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇನ್ನೂ ಇಂತಹ ಅಪಘಾತಗಳು ಜಾರ್ಖಂಡ್‌ನಲ್ಲಿ ಹೆಚ್ಚುತ್ತಿದ್ದು ರೈಲ್ವೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).