ನವದೆಹಲಿ: ಗುಜರಾತ್ ಮುಖ್ಯಮಂತ್ರಿಯಾಗಿ 2001ರ ಅಕ್ಟೋಬರ್ 7ರಂದು ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಸರ್ಕಾರದ ಮುಖ್ಯಸ್ಥರಾಗಿ ಯಶಸ್ವಿ 25 ವರ್ಷಗಳನ್ನು ಪೂರೈಸಿದ್ದಾರೆ.
ಈ ಐತಿಹಾಸಿಕ ಮೈಲಿಗಲ್ಲಿನ ಸಂಭ್ರಮದಲ್ಲಿ ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನಮೋ, ಈ ಸುದೀರ್ಘ ರಾಜಕೀಯ ಪಯಣದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸತತ 25 ವರ್ಷಗಳ ಕಾಲ ಸರ್ಕಾರಗಳನ್ನು ಮುನ್ನಡೆಸುತ್ತೇನೆ ಎಂದು ತಾವೆಂದೂ ಊಹಿಸಿರಲಿಲ್ಲ ಎಂದು ಭಾವನಾತ್ಮಕವಾಗಿ ನುಡಿದರು. ಅಲ್ಲದೆ, ಈ ಅದ್ಭುತ ಪಯಣ ಸಾಕಾರಗೊಳ್ಳಲು ಭಾರತದ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಪವಿತ್ರ ಸಂವಿಧಾನವೇ ಮೂಲ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ:ನಮೋ ಆಡಳಿತಕ್ಕೆ 25ರ ಸಂಭ್ರಮ: ವಿನಾಯಕ ಮಂದಿರದಲ್ಲಿ ವಿಶೇಷ ಪೂಜೆ
ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವನ್ನು ಸ್ಮರಿಸಿಕೊಂಡ ಪ್ರಧಾನಿ ಮೋದಿ, 2001ರ ಅಕ್ಟೋಬರ್ 7 ರಂದು ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ, ಇಂತಹ ಪರಿಸ್ಥಿತಿ ಎಂದಾದರೂ ಬರಬಹುದು ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದರು. ತಾವು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಈ 25 ವರ್ಷದ ಮೈಲಿಗಲ್ಲನ್ನು ನಿರೀಕ್ಷಿಸಿರಲಿಲ್ಲ ಎಂದ ಅವರು, ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಸಂವಿಧಾನಕ್ಕೆ ತಮ್ಮ ಕೃತಜ್ಞತೆಯನ್ನು ಅರ್ಪಿಸಿದರು.
ಸರ್ಕಾರಗಳ ಚುಕ್ಕಾಣಿ ಹಿಡಿದು ತಮ್ಮ ಈ ರಾಜಕೀಯ ಪಯಣ ಸಾಗಲು ಮತದಾರರ ಪ್ರೀತಿ ಮತ್ತು ತಮ್ಮನ್ನು ಬೆಂಬಲಿಸಿದ ರಾಜಕೀಯ ಸಂಘಟನೆಗಳೇ ಕಾರಣ ಎಂದು ಪ್ರಧಾನಿ ಮೋದಿ ತಿಳಿಸಿದರು. ಇದು ಕೋಟ್ಯಂತರ ಜನರ ಆಶೀರ್ವಾದದ ದಿವ್ಯ ಫಲ. ಭಾರತೀಯ ಜನತಾ ಪಾರ್ಟಿ ಹಾಗೂ ಎನ್‌ಡಿಎ ಮೈತ್ರಿಕೂಟದ ಮೇಲೆ ಅಚಲ ನಂಬಿಕೆ ಇಟ್ಟಿರುವ ಎಲ್ಲ ರಾಜಕೀಯ ಪಕ್ಷಗಳ ವಿಶ್ವಾಸಕ್ಕೆ ಇದು ಸಾಕ್ಷಿಯಾಗಿದೆ. ನಾನು ಕೃತಜ್ಞತೆಯಿಂದ ಜನರ ಚರಣಗಳಿಗೆ ತಲೆಬಾಗುತ್ತೇನೆ ಎಂದರು.
ಈ ಅವಧಿಯಲ್ಲಿ ನಡೆದ ಪ್ರತಿಯೊಂದು ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿಯೂ ದೇಶದ ಜನತೆ ತಮಗೆ ನಿಸ್ವಾರ್ಥ ಸೇವೆ ಸಲ್ಲಿಸಲು ದೊಡ್ಡ ಅವಕಾಶ ಕಲ್ಪಿಸಿದ್ದಾರೆ ಎಂದು ಸ್ಮರಿಸಿದ ಅವರು, ಇಂದು ಬೆಳಿಗ್ಗೆ ನಾನು ನನ್ನ 140 ಕೋಟಿ ದೇಶವಾಸಿಗಳ ಕಲ್ಯಾಣಕ್ಕಾಗಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ. ನನ್ನ ಮಾತೃಭೂಮಿಗಾಗಿ ಇನ್ನಷ್ಟು ಉಚ್ಛ್ರಾಯ ಸ್ಥಿತಿಯಲ್ಲಿ, ಹೆಚ್ಚಿನ ಶಕ್ತಿ ಮತ್ತು ಸಾಮರ್ಥ್ಯದೊಂದಿಗೆ ಸೇವೆ ಸಲ್ಲಿಸಲು ದೇವರು ನನಗೆ ಬಲ ತುಂಬಲಿ ಎಂದು ಬೇಡಿಕೊಂಡರು.
ಇಂದು ವಿಶ್ವದಾದ್ಯಂತ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್ ಬಗ್ಗೆ ಚರ್ಚೆಯಾಗುತ್ತಿದೆ. ಒಂದು ದಿನ ಖಂಡಿತವಾಗಿಯೂ ಜಗತ್ತು ಮೇಡ್-ಇನ್-ಇಂಡಿಯಾ ವಿಮಾನದ ಬಗ್ಗೆಯೂ ಮಾತನಾಡುವ ದಿನ ಬರುತ್ತದೆ. ದೂರದೃಷ್ಟಿಯ ನೀತಿಗಳನ್ನು ರೂಪಿಸುವುದರ ಜೊತೆಗೆ ಅತ್ಯಂತ ಕಠಿಣ ಪರಿಶ್ರಮವನ್ನು ಹಾಕಿದರೆ ಮಾತ್ರ ಈ ಗುರಿಗಳನ್ನು ಸಾಧಿಸಬಹುದು. ಇದು ವಿಶ್ರಾಂತಿ ಪಡೆಯುವ ಸಮಯವಲ್ಲ, ಉತ್ಸಾಹದಿಂದ ಮುಂದೆ ಸಾಗುವ ಮತ್ತು ರಾಷ್ಟ್ರಕ್ಕಾಗಿ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಸಮಯ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರು 2001 ಅಕ್ಟೋಬರ್ 7 ರಂದು ಗುಜರಾತ್ ಮುಖ್ಯಮಂತ್ರಿಯಾದರು. ಆ ಮೂಲಕ ಸರ್ಕಾರದ ಮುಖ್ಯಸ್ಥರಾಗಿ ತಮ್ಮ ಅಧಿಕಾರಾವಧಿಯನ್ನು ಆರಂಭಿಸಿದರು. ನಂತರ 2014ರಲ್ಲಿ ಪೂರ್ಣ ಬಹುಮತ ಪಡೆದು ಭಾರತದ ಪ್ರಧಾನ ಮಂತ್ರಿಯಾಗಿ ಹೊರಹೊಮ್ಮಿದರು. ಇದು ರಾಜ್ಯ ಸರ್ಕಾರದಿಂದ ಒಕ್ಕೂಟ ಸರ್ಕಾರದವರೆಗೆ ಅವರ ಅಧಿಕಾರಾವಧಿಯನ್ನು ವಿಸ್ತರಿಸಿತು.
ಇಂದಿನ ಈ ವಿಶೇಷ ದಿನ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು 25 ವರ್ಷಗಳು ತುಂಬುತ್ತವೆ. ಈ ಅವಧಿಯಲ್ಲಿ ಅವರು ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಅವರ ರಾಜಕೀಯ ಜೀವನವು ಅನೇಕ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳನ್ನು ಕಂಡಿದೆ. ಈ ಸಂದರ್ಭವನ್ನು ಸ್ಮರಿಸಿಕೊಂಡ ನಮೋ, ದೇಶಕ್ಕೆ ಸೇವೆ ಸಲ್ಲಿಸುವುದೇ ತಮ್ಮ ಗಮನವಾಗಿದೆ ಎನ್ನುತ್ತಾ, ಜನರಿಗಾಗಿ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುವುದನ್ನು ಮುಂದುವರಿಸಲು ಭಗವಂತನಲ್ಲಿ ಶಕ್ತಿ ಕೋರಿದರು(ಏಜೆನ್ಸೀಸ್).