ಶಿಕ್ಷಣದಲ್ಲಿ AI ಕ್ರಾಂತಿ ಅನಿರ್ವಾಯ: ರಾಮ್ ಗೋಪಾಲ್ ವರ್ಮಾ
- ನೀಟ್ ಪರೀಕ್ಷೆ ವಿವಾದದ ಬೆನ್ನಲ್ಲೇ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿಕೆ ವೈರಲ್
- ಶಿಕ್ಷಣ ವ್ಯವಸ್ಥೆ ಮತ್ತು ಉದ್ಯೋಗದ ಮೇಲೆ AI (ಕೃತಕ ಬುದ್ಧಿಮತ್ತೆ) ವ್ಯತಿರಿಕ್ತ ಪರಿಣಾಮ ಬೀರಲಿದೆ.
- ಶಿಕ್ಷಣದಲ್ಲಿ AI ಕ್ರಾಂತಿ ಅನಿರ್ವಾಯ: ರಾಮ್ ಗೋಪಾಲ್ ವರ್ಮಾ
ಮುಂಬೈ: ದೇಶದಾದ್ಯಂತ ನೀಟ್ ಪರೀಕ್ಷೆ ಸೋರಿಕೆ, ಮರು ಪರೀಕ್ಷೆ, ಪ್ರತಿಭಟನೆ, ಸಚಿವರ ರಾಜೀನಾಮೆ ಇದರ ಚರ್ಚೆಗಳೇ ನಡೆಯುತ್ತಿರುವ ಸಂದರ್ಭದಲ್ಲಿ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma on AI in Education) ಅವರು ನೀಡಿರುವ ಹೇಳಿಕೆಯೊಂದು ಈಗ ಸಕ್ಕತ್ ವೈರಲ್ ಆಗುತ್ತಿದೆ.
ನೀಟ್ ಪ್ರತಿಭಟನೆಗೆ ಸಂಬಂಧಿಸಿದಂತೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಆರ್ಜಿವಿ, ಶಿಕ್ಷಣ ವ್ಯವಸ್ಥೆಯಲ್ಲಿ ನೀಟ್ ಸಮಸ್ಯೆಯಲ್ಲ, ಬದಲಿಗೆ ಕೃತಕ ಬುದ್ಧಿಮತ್ತೆ (AI) ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಹೇಳಿದ್ದಾರೆ.
AI ಶಿಕ್ಷಣ ಇಲಾಖೆಗೆ ಸವಾಲು!
ನೀಟ್ ಪ್ರತಿಭಟನೆ ಕುರಿತು ಹೇಳಿರುವ ಆರ್ಜಿವಿ, ನೀಟ್ ಪೇಪರ್ ಸೋರಿಕೆಯಾಯಿತು, ಕೆಲ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡರು, ಸಚಿವರ ರಾಜೀನಾಮೆ ಕೊಟ್ಟರು. ಆದರೆ ಈ ಕೃತಕ ಬುದ್ಧಿಮತ್ತೆ, ಮುಂದಿನ ದಿನಗಳಲ್ಲಿ ಈಡೀ ಶಿಕ್ಷಣ ವ್ಯವಸ್ಥೆಯನ್ನೇ ಬದಲಿಸಲಿದೆ ಎಂದು ಹೇಳಿದ್ದಾರೆ.
ನಮ್ಮ ಶಿಕ್ಷಣ ವ್ಯವಸ್ಥೆ ನಿರ್ಮಾಣವಾದಾಗ ಮಾಹಿತಿ ಎನ್ನುವುದು ಕಡಿಮೆ ಇತ್ತು. ಮಾಹಿತಿಯುಳ್ಳ ಜನರು ಕಡಿಮೆ ಇದ್ದರು. ಆದರೆ ಈಗ ಮಾಹಿತಿಯ ಸಾಗರವೇ ಹರಿಯುತ್ತಿದೆ. ಈ AI ಒಂದನ್ನು ಕೇಳಿದರೆ ಹತ್ತು ಉತ್ತರವನ್ನು ನೀಡುತ್ತದೆ. ಹೀಗಾಗಿ ನಮ್ಮ ಮಕ್ಕಳು ಮೊದಲು ಈ ಕೃತಕ ಬುದ್ಧಿಮತ್ತೆಯನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಮತ್ತು ಪರಿಣಿತಿ ಪಡೆಯುವಂತಾಗಬೇಕು. ಇಲ್ಲದಿದ್ದರೆ ಪದವಿ ಎನ್ನುವುದು ಕೇವಲ ಒಂದು ಕಾಗದದ ಹಾಳೆಯಾಗುತ್ತದೆ ಎಂದಿದ್ದಾರೆ.
ನಿಮ್ಮ ನೌಕರಿಯನ್ನು ತಿನ್ನುತ್ತದೆ!
ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿರುವ ರಾಮ್ ಗೋಪಾಲ್ ವರ್ಮಾ, ವಿದ್ಯಾರ್ಥಿಗಳೇ ನಿಮ್ಮ ಹೋರಾಟ ಈಗ ಕೇವಲ ನೀಟ್ಗಾಗಿ ಅಲ್ಲ, ಬದಲಾಗಿ ಕೃತಕ ಬುದ್ಧಿಮತ್ತೆಯನ್ನು ಕಲಿಯುವತ್ತ ಗಮನಹರಿಸಿ. ಇಲ್ಲದಿದ್ದರೆ ನೀವು ಮಾಡಬೇಕಾದ ಕೆಲಸವನ್ನು AI ಮಾಡುತ್ತದೆ ಎಂದಿದ್ದಾರೆ.
ಅದರಲ್ಲಿಯೂ ಈ ಎಂಬಿಎ, ಇಂಜಿನಿಯರಿಂಗ್, ಮೆಡಿಕಲ್, ಕಾನೂನು ಹಾಗೂ ಡಿಸೈನಿಂಗ್ ವಿಭಾಗದಲ್ಲಿ ಪದವಿ ಪಡೆದವರು ಕಡ್ಡಾಯವಾಗಿ ಕೃತಕ ಬುದ್ಧಿಮತ್ತೆಯನ್ನು ಕಲಿಯಬೇಕು. ಇಲ್ಲದೆ ಹೋದರೆ ಇವರು ನಿರುದ್ಯೋಗಿಗಳಾಗುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.
ಆದ್ದರಿಂದ ನಮ್ಮ ಶಿಕ್ಷಣ ಇಲಾಖೆಯಲ್ಲಿ ಮೊದಲು AI ಕ್ರಾಂತಿ ಆಗಲೇಬೇಕು, ಇಲ್ಲದಿದ್ದರೆ ಮುಂದಿನ 5-10 ವರ್ಷಗಳಲ್ಲಿ ನಿರುದ್ಯೋಗಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ. ಈಗಲೇ ಜಗತ್ತಿನ ಅತ್ಯುನ್ನತ ಕಂಪನಿ ಮಾಲೀಕರೆಲ್ಲಾ, ಕೆಳ ಹಂತದ ಕೆಲಸಗಳನ್ನು ಈಗ AI ಮಾಡಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಕೃತಕ ಬುದ್ಧಿಮತ್ತೆ ಕಲಿಕೆ ಆದಷ್ಟು ಬೇಗ ಪ್ರಾರಂಭವಾಗಬೇಕು ಎಂದು ಒತ್ತಾಯಿಸಿದ್ದಾರೆ, (ಏಜನ್ಸೀಸ್).