S Jaishankar Marco Rubio talks  
ದೇಶ

'ಭಾರತೀಯ ಹಡಗುಗಳ ಮೇಲಿನ ಮಾರಣಾಂತಿಕ ದಾಳಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ': ಅಮೆರಿಕಕ್ಕೆ ಎಸ್ ಜೈಶಂಕರ್ ವಾರ್ನಿಂಗ್!..S Jaishankar

ಪ್ರಮುಖ ಮುಖ್ಯಾಂಶಗಳು

  • ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಜೊತೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಚರ್ಚೆ
  • ವಾಣಿಜ್ಯ ಹಡಗುಗಳ ಮೇಲಿನ ಮಾರಣಾಂತಿಕ ದಾಳಿಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಜೈಶಂಕರ್ ಆಕ್ರೋಶ.
  • ದೆಹಲಿಯಲ್ಲಿರುವ ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಜೇಸನ್ ಮೀಕ್ಸ್​ಗೆ ಭಾರತದ ವಿದೇಶಾಂಗ ಸಚಿವಾಲಯದಿಂದ ಸಮನ್ಸ್.
ನವದೆಹಲಿ:  ಓಮನ್​ ಕೊಲ್ಲಿಯಲ್ಲಿ ತೈಲ ಟ್ಯಾಂಕರ್​ ಮೇಲೆ ಅಮೆರಿಕ ನಡೆಸಿದ ನೌಕಾದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದರು. ಈ ಘಟನೆಯನ್ನು ಸದ್ಯ ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ, ರಾಜತಾಂತ್ರಿಕ ಪ್ರತಿಭಟನೆ ನಡೆಸುವ ಬಗ್ಗೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಎಕ್ಸ್​​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರೊಂದಿಗೆ ಜೂನ್​.12ರಂದು ಕರೆ ಮಾಡಿ, ಈ ಘಟನೆಗೆ ಭಾರತದ ಪರವಾಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ಎಕ್ಸ್​ ಪೋಸ್ಟ್​ನಲ್ಲಿ ಏನಿದೆ?

'ಇಂದು ಸಂಜೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರೊಂದಿಗೆ ಮಾತನಾಡಿದೆ. ಒಮಾನ್ ಗಲ್ಫ್‌ನಲ್ಲಿ ಅಮೆರಿಕ ನೌಕಾಪಡೆ ನಡೆಸಿದ ದಾಳಿಯ ವಿರುದ್ಧ ಭಾರತದ ಪರವಾಗಿ ಮಾತನಾಡಿ, ತೀವ್ರವಾಗಿ ಖಂಡಿಸಿದ್ದೇನೆ. ವಾಣಿಜ್ಯ ಹಡಗುಗಳ ಮೇಲಿನ ಇಂತಹ ಮಾರಣಾಂತಿಕ ಕ್ರಮಗಳು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ'. ಎಂದು ಹೇಳಿರುವುದಾಗಿ ಪೋಸ್ಟ್​ನಲ್ಲಿ ಉಲ್ಲೇಖಿಸಲಾಗಿದೆ. 

ಟ್ರಂಪ್​ ಏನಂದ್ರು?

ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್  ನಲ್ಲಿ ಈ ಕುರಿತು ಪೋಸ್ಟ್ ಮಾಡಿದ್ದು, "ಕಳೆದ ರಾತ್ರಿ ಹೋರ್ಮುಜ್ ಜಲಸಂಧಿಯಿಂದ ಹೊರಟಿದ್ದ ಭಾರತೀಯ ಹಡಗುಗಳ ಮೇಲೆ ಇರಾನ್ ನಡೆಸಲು ಯತ್ನಿಸಿದ ಡ್ರೋನ್ ದಾಳಿಯನ್ನು ತಡೆಗಟ್ಟಲಾಗಿದೆ. ಇಂತಹ ಕ್ರಮ ಸಂಪೂರ್ಣವಾಗಿ ಒಪ್ಪಿಕೊಳ್ಳಲಾಗದು" ಎಂದು ಹೇಳಿದ್ದಾರೆ.

ಇರಾನ್​ ಹೇಳಿದ್ದಿಷ್ಟು

ಟ್ರಂಪ್ ಆರೋಪ ಮಾಡಿದ ಬೆನ್ನಲ್ಲೇ ಇರಾನ್ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಟ್ರಂಪ್ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ. ಇದು ಯಾವುದೇ ಆಧಾರವಿಲ್ಲದ ಆರೋಪವಾಗಿದ್ದು, ಇತ್ತೀಚಿನ ಬೆಳವಣಿಗೆಗಳಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಎಂದು ಇರಾನ್ ಹೇಳಿದೆ.

ಏನಿದು ಘಟನೆ?

ಪಲಾವ್ ಧ್ವಜ ಹೊಂದಿದ್ದ 'ಸೆಟ್ಟೆಬೆಲ್ಲೊ' ತೈಲ ಟ್ಯಾಂಕರ್‌ನಲ್ಲಿ ಒಟ್ಟು 28 ಸಿಬ್ಬಂದಿ ಇದ್ದರು. ಇವರಲ್ಲಿ 24 ಮಂದಿ ಭಾರತೀಯರು ಹಾಗೂ ಇಬ್ಬರು ಪಾಕಿಸ್ತಾನಿ, ಒಬ್ಬ ಉಕ್ರೇನ್ ಮತ್ತು ಒಬ್ಬ ರಷ್ಯಾದ ಪ್ರಜೆ ಸೇರಿದ್ದರು. ಘಟನೆಯ ನಂತರ 21 ಭಾರತೀಯ ನಾವಿಕರನ್ನು ರಕ್ಷಿಸಲಾಗಿತ್ತು.

ಮೂವರು ನಾವಿಕರು ಮೃತಪಟ್ಟಿರುವುದು ದೃಢ

 ಬುಧವಾರದಂದು ಅಮೆರಿಕ ಮಿಲಿಟರಿ ದಾಳಿಗೆ ಒಳಗಾಗಿದ್ದ 'ಎಂಟಿ ಸೆಟ್ಟೆಬೆಲ್ಲೊ' ಹಡಗಿನಲ್ಲಿದ್ದ 24 ಭಾರತೀಯರ ಪೈಕಿ ನಾಪತ್ತೆಯಾಗಿದ್ದ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿರುವುದನ್ನು ಸರ್ಕಾರ ಅಧಿಕೃತವಾಗಿ ಖಚಿತಪಡಿಸಿದೆ. ಉಳಿದ 21 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಸಮನ್ಸ್​ ಜಾರಿ

ಒಮಾನ್​ನಲ್ಲಿ ಭಾರತದ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ಪಡೆ ನಡೆಸುತ್ತಿರುವ ಸರಣಿ ದಾಳಿ ಹಿನ್ನೆಲೆ,  ದೆಹಲಿಯಲ್ಲಿರುವ ಅಮೆರಿಕದ ಪ್ರಭಾರಿ ರಾಜತಾಂತ್ರಿಕ ಅಧಿಕಾರಿ ಜೇಸನ್ ಮೀಕ್ಸ್ ಅವರಿಗೆ ಭಾರತದ ವಿದೇಶಾಂಗ ಸಚಿವಾಲಯ ಸಮನ್ಸ್ ನೀಡಿತ್ತು, (ಏಜೆನ್ಸೀಸ್).