ನವದೆಹಲಿ: ಐಐಟಿ ದೆಹಲಿಯ 57ನೇ ಘಟಿಕೋತ್ಸವ ಶನಿವಾರ(ಆ. 08) ನಡೆದಿದ್ದು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ(PM Modi) ಭಾವವಹಿಸಿದ್ದು, ವಿದ್ಯಾರ್ಥಿಗಳಿಗೆ ಪದವಿಗಳನ್ನು ಹಲವು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು. 587 ಪಿಎಚ್‌ಡಿ ಅಭ್ಯರ್ಥಿಗಳು ಸೇರಿದಂತೆ 3,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿಗಳನ್ನು ಪಡೆದಿದ್ದಾರೆ.
ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, ಐಐಟಿ ವಿದ್ಯಾರ್ಥಿಗಳನ್ನು ಭೇಟಿಯಾಗಲು ನನಗೆ ತುಂಬಾ ಸಂತೋಷವಾಗಿದೆ. ಇಂದಿನಿಂದ ನಿಮ್ಮ ಹೊಸ ಪ್ರಯಾಣ ಆರಂಭವಾಗಿದೆ. ವಿದ್ಯಾರ್ಥಿಗಳು ಕೇವಲ ಪದವಿಗಳನ್ನು ಪಡೆಯುತ್ತಿಲ್ಲ, ಬದಲಾಗಿ ದೇಶದ ಕನಸುಗಳನ್ನು ನನಸಾಗಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿಯೂ ಹಲವು ವಿಚಾರಗಳು, ಕನಸುಗಳು ಮತ್ತು ಗುರಿಗಳಿರುತ್ತವೆ. ಗುರಿಗಳು ವಿಭಿನ್ನವಾಗಿದ್ದರೂ, ಅವರು ತಮ್ಮ ಅಪೇಕ್ಷಿತ ಗಮ್ಯಸ್ಥಾನವನ್ನು ತಲುಪಲು ಶ್ರಮಿಸುವಂತೆ ಸಲಹೆ ನೀಡಿದರು. ಐಐಟಿಗಳಲ್ಲಿ ಪಡೆದ ಶಿಕ್ಷಣ ಮತ್ತು ಕೌಶಲ್ಯಗಳನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳುವಂತೆ ಇದೇ ವೇಳೆ ಅವರು ಕರೆ ನೀಡಿದರು.
ಇನ್ನೂ ಈ ಸಂದರ್ಭದಲ್ಲಿ ಐಐಟಿ ದೆಹಲಿಯ ಸೋನಿಪತ್ ಕ್ಯಾಂಪಸ್‌ನಲ್ಲಿ ಸ್ಥಾಪಿಸಲಾದ 'ಪರಮ್ ಪ್ರಜ್ಞಾ' AI ಆಧಾರಿತ ಹೈಪರ್‌ಪರ್‌ಫಾರ್ಮೆನ್ಸ್ ಸೂಪರ್‌ಕಂಪ್ಯೂಟಿಂಗ್ ಸೌಲಭ್ಯವನ್ನು ವರ್ಚುವಲ್ ಆಗಿ ಉದ್ಘಾಟಿಸಲಾಯಿತು. ಈ ಸೌಲಭ್ಯವು ಕೃತಕ ಬುದ್ಧಿಮತ್ತೆ, ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ದೇಶದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ (ಏಜೆನ್ಸೀಸ್).