ಬದರಿನಾಥ್-ಕೇದಾರನಾಥ್ ದೇವಾಲಯಗಳು 
ದೇಶ

ಬದರಿನಾಥ್-ಕೇದಾರನಾಥ್ ದೇವಾಲಯಗಳಲ್ಲಿ ಹಿಂದೂಯೇತರರಿಗೆ ನಿಷೇಧ; ದೇವಾಲಯ ಆಡಳಿತ ಮಂಡಳಿ ಘೋಷಣೆ | non hindus banned

ಡೆಹ್ರಾಡೂನ್​: ಉತ್ತರಾಖಂಡದ ಪ್ರಸಿದ್ದ ಹಿಂದೂ ಯಾತ್ರಾ ಸ್ಥಳಗಳಾದ ಬದರಿನಾಥ್-ಕೇದಾರನಾಥ್ ದೇವಾಲಯಗಳು ಸೇರಿ ನಾಲ್ಕು ದೇವಾಲಯಗಳಲ್ಲಿ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಲು ಶೀಘ್ರದಲ್ಲೇ ಪ್ರಸ್ತಾವನೆ ಅಂಗೀಕರಿಸಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ(ಬಿಕೆಟಿಸಿ) ಸೋಮವಾರ(ಜ. 26) ಘೋಷಣೆ ಮಾಡಿದೆ.
ಉತ್ತರಾಖಂಡದ ಹಿಮಾಲಯದ ಮಡಿಲಲ್ಲಿರುವ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಇನ್ನು ಮುಂದೆ ಹಿಂದೂಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು. ಜೊತೆಗೆ ಚಾರ್ ಧಾಮ್ ತೀರ್ಥಯಾತ್ರೆಯ ಸರ್ಕ್ಯೂಟ್‌ನ ಭಾಗವಾಗಿರುವ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳಿಗೆ ಹಿಂದೂಯೇತರರನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗುವುದು ಬಿಕೆಟಿಸಿ ಘೋಷಣೆ ಮಾಡಿದೆ.
ದೇವಸ್ಥಾನಗಳ ಪಾವಿತ್ರ್ಯತೆ ಮತ್ತು ಸಂಪ್ರದಾಯಗಳನ್ನು ಪಾಲಿಸುವ ಮತ್ತು ರಕ್ಷಿಸುವ ಭಾಗವಾಗಿ ಹಿಂದೂಯೇತರರನ್ನು ನಿಷೇಧಿಸುವ ಕ್ರಮವನ್ನು ತೆಗೆದುಕೊಳ್ಳಲಾಗ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರಸ್ತಾವನೆ ಕುರಿತು ಮಾಹಿತಿ ನೀಡಿರುವ ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ, ದೇವಾಲಯ ಸಮಿತಿಯ ಅಡಿಯಲ್ಲಿರುವ ಎಲ್ಲಾ ದೇವಾಲಯಗಳಲ್ಲಿ ಹಿಂದೂಯೇತರರಿಗೆ ಪ್ರವೇಶವನ್ನು ನಿಷೇಧಿಸಲಾಗುವುದು. ಈ ಕುರಿತು ಪ್ರಸ್ತಾವನೆಯನ್ನು ಮುಂಬರುವ ದೇವಾಲಯ ಸಮಿತಿ ಮಂಡಳಿ ಸಭೆಯಲ್ಲಿ ಅಂಗೀಕರಿಸಲಾಗುವುದು ಎಂದು ತಿಳಿಸಿದ್ದಾರೆ.
ಚಳಿಗಾಲದ ಮುಚ್ಚುವಿಕೆ ಬಳಿಕ ಏಪ್ರಿಲ್ 23ರಂದು ಬದರಿನಾಥ್ ದೇವಾಲಯದ ಬಾಗಿಲು ತೆರೆಯಲಿದೆ. ಏಪ್ರಿಲ್ 19ರಂದು ಅಕ್ಷಯ ತೃತೀಯ ಸಂದರ್ಭದಲ್ಲಿ ಚಾರ್​ ಧಾಮ್​ನ ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯದ ದ್ವಾರಗಳನ್ನು ತೆರೆಯಲಾಗುವುದು. ಮಹಾ ಶಿವರಾತ್ರಿಯಂದು ಕೇದಾರನಾಥ್ ದೇವಾಲಯದ ದ್ವಾರ ತೆಗೆಯುವ ದಿನಾಂಕ ಘೋಷಿಸಲಾಗುವುದು ಎಂದು ಹೇಳಿದ್ದಾರೆ (ಏಜೆನ್ಸೀಸ್).