ಉದ್ದವ್ ಠಾಕ್ರೆ ಮತ್ತು ಸಂಜಯ್ ರಾವತ್ 
ದೇಶ

ಶಿಂಧೆ ಬಣಕ್ಕೆ ತನ್ನ ಆರು ಸಂಸದರ ವಿಲೀನಕ್ಕೆ ಅನುಮತಿ; ಸ್ಪೀಕರ್ ಓಂ ಬಿರ್ಲಾ ನಿರ್ಧಾರದ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಠಾಕ್ರೆ ಶಿವಸೇನಾ | Shiv Sena

ನವದೆಹಲಿ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯೊಂದಿಗೆ ತನ್ನ ಆರು ಸಂಸದರ ವಿಲೀನವನ್ನು ಅನುಮೋದಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ನಿರ್ಧಾರವನ್ನು ಪ್ರಶ್ನಿಸಿ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ(Shiv Sena) ಮಂಗಳವಾರ(ಜು. 21) ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ.
ಸುಪ್ರೀಂಕೋರ್ಟ್​ನಲ್ಲಿ ಠಾಕ್ರೆ ಶಿವಸೇನಾ ಪರವಾಗಿ ಹಾಜರಾದ ಹಿರಿಯ ವಕೀಲ ದೇವದತ್ತ ಕಾಮತ್, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರನ್ನೊಳಗೊಂಡ ಪೀಠದ ಮುಂದೆ ಬುಧವಾರ ತುರ್ತು ವಿಚಾರಣೆ ನಡೆಸುವಂತೆ ಕೋರಿದರು.
ಜುಲೈ 18ರಂದು ಆರು ಸಂಸದರನ್ನು ಶಿಂಧೆ ನೇತೃತ್ವದ ಬಣದೊಂದಿಗೆ ವಿಲೀನಗೊಳಿಸಲು ಸ್ಪೀಕರ್ ಅನುಮೋದನೆ ನೀಡಿದ್ದಾರೆ. ಸಂಸದರ ವಿಲೀನವನ್ನು ಸ್ಪೀಕರ್ ಗುರುತಿಸಿದ್ದಾರೆ. ತಾವು ಯಾರ ವಿರುದ್ಧ ಸ್ಪರ್ಧಿಸಿ ಚುನಾವಣೆ ಗೆದ್ದಿದ್ದರೋ ಅಂತಹವರೊಂದಿಗೇ ಸಂಸದರು ವಿಲೀನಗೊಳ್ಳುತ್ತಿರುವುದು ಈಗ ರಾಷ್ಟ್ರಮಟ್ಟದ ವಿದ್ಯಮಾನವಾಗಿ ಪರಿಣಮಿಸಿದೆ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ಬುಧವಾರ ನೋಡೋಣ ಎಂದು ವಿಚಾರಣೆಯನ್ನು ಮುಂದೂಡಿದರು.
ಶಿವಸೇನಾ(ಯುಬಿಟಿ) ಬಣದಿಂದ ಸಿಡಿದೆದ್ದು ಹೊರಗೆ ಬಂದಿದ್ದ ಆರು ಸಂಸದರು ತಾವು 2/3 ಬಹುಮತವಿದ್ದು, ಶಿಂಧೆ ಸೇನಾದಲ್ಲಿ ವಿಲೀನಗೊಳ್ಳುವುದಾಗಿ ಸ್ಪೀಕರ್​ಗೆ ಪತ್ರ ಕೊಟ್ಟಿದ್ದರು. ಈ ಅರ್ಜಿಯನ್ನು ಜುಲೈ 18ರಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅನುಮೋದಿಸಿದ್ದರು (ಏಜೆನ್ಸೀಸ್).