ಮುಂಬೈ: ಸ್ಟಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ (Kunal Kamra) ಅವರು ಮುಂಬೈನ ಹ್ಯಾಬಿಟ್ಯಾಟ್ನಲ್ಲಿ ನಡೆದ ಶೋ ಒಂದರಲ್ಲಿ ಏಕನಾಥ್ ಶಿಂಧೆ ಅವರನ್ನು ಗದ್ದರ್(ದ್ರೋಹಿ) ಎಂದು ಕರೆದು ವ್ಯಂಗ್ಯವಾಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿ, ಶಿಂಧೆ ಬೆಂಬಲಿಗರು ಕುನಾಲ್ರ ಕಚೇರಿಯನ್ನು ಧ್ವಂಸ ಮಾಡಿದ್ದ ಘಟನೆ ನಡೆದಿತ್ತು. ಈ ಪ್ರಕರಣವೂ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಮಹಾರಾಷ್ಟ್ರ ಶಾಸಕಾಂಗದ ಹಕ್ಕುಬಾಧ್ಯತೆ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾದ ಅವರು, ತಾವು ನೀಡಿದ ಹೇಳಿಕೆಗೆ ಕ್ಷಮೆಯಾಚಿಸಲು ನಿರಾಕರಿಸಿದ್ದಾರೆ. ಜೊತಗೆ ಬಿಜೆಪಿ ಎಂಎಲ್‌ಸಿ ಪ್ರಸಾದ್ ಲಾಡ್ ಅವರ ಹೇಳಿಕೆ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ಪ್ರಸಾದ್ ಲಾಡ್ ಹೇಳಿದ್ದೇನು?
ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧದ ಹೇಳಿಕೆಗೆ ಸಂಬಂಧಿಸಿದಂತೆ ಹಾಸ್ಯನಟ ಕುನಾಲ್ ಕಮ್ರಾ ಅವರು ವಿಧಾನಭವನದ ಹಕ್ಕುಬಾಧ್ಯತೆ ಸಮಿತಿಯ ಮುಂದೆ ಹಾಜರಾದರು. ಈ ಕುರಿತು ಮಾತನಾಡಿದ ಬಿಜೆಪಿ ಎಂಎಲ್‌ಸಿ ಪ್ರಸಾದ್ ಲಾಡ್ ಮಾತನಾಡಿದ್ದು ಹೀಗೆ..
"ಕುನಾಲ್ ಕಾಮ್ರಾ ಅವರ 4ನೇ ಬಾರಿಯ ವಿಚಾರಣೆ ನಡೆಯಿತು. ಅವರ ಕೊಡುವ ಹೇಳಿಕೆಯ ಸಾಕ್ಷ್ಯವನ್ನು ದಾಖಲಿಸಿಕೊಳ್ಳಬೇಕಾಗಿತ್ತು. ಪ್ರವೀಣ್ ದರೇಕರ್ ಅವರು ಕಾಮ್ರಾ ವಿರುದ್ಧ ದೂರು ನೀಡಿದ್ದರು. ಕುನಾಲ್ ಕಮ್ರಾ ಮತ್ತು ಪ್ರವೀಣ್ ದರೇಕರ್ ಇಬ್ಬರನ್ನೂ ಕ್ರಾಸ್-ಕ್ವೆಶ್ಚನ್ ಮಾಡಲಾಯಿತು. ಕುನಾಲ್ ಕಮ್ರಾ ಅವರಿಗೆ 24 ಪ್ರಶ್ನೆಗಳನ್ನು ಕೇಳಲಾಯಿತು. ಇದರಲ್ಲಿ ಅವರು ತಮ್ಮ ತಪ್ಪುಗಳನ್ನು ವಿವರಿಸಲು ಪ್ರಯತ್ನಿಸಿದರು. ಅವರು ಸಂವಿಧಾನದ ಹಕ್ಕುಗಳ ಬಗ್ಗೆ ಪ್ರಶ್ನಿಸಲು ಪ್ರಯತ್ನಿಸಿದರು ಮತ್ತು ಹಕ್ಕುಬಾಧ್ಯತೆ ಸಮಿತಿಯ ಅಧಿಕಾರಗಳ ಬಗ್ಗೆಯೂ ಕೇಳಲು ಪ್ರಯತ್ನಿಸಿದರು" ಎಂದು ಹೇಳಿದ್ದಾರೆ.
ಕುನಾಲ್ ಟ್ವೀಟ್ನಲ್ಲಿ ಹೀಗಿದೆ..
ಗೌರವಾನ್ವಿತ ಸರ್, ಬಹುಶಃ ಅಲ್ಲಿ ಸಂವಹನದ ಕೊರತೆ ಇರಬಹುದು. ವಿಚಾರಣೆ ನಡೆದ ಸಂದರ್ಭ ನನ್ನ ಕ್ರಾಸ್ ಎಕ್ಸಾಮಿನೇಷನ್‌ನ ಕೊನೆಯ ಮೂರು ಪ್ರಶ್ನೆಗಳು ನನಗೆ ನೆನಪಿರುವಂತೆ ಹೀಗಿವೆ -
ನಿಮಗೆ ಪಶ್ಚಾತ್ತಾಪವಿದೆಯೇ? - ಇಲ್ಲ.
ನೀವು ಹೇಳಿದ್ದಕ್ಕೆ ಕ್ಷಮೆಯಾಚಿಸುತ್ತೀರಾ? - ಇಲ್ಲ.
ಒಂದು ವೇಳೆ ನೀವು ಬೇಷರತ್ ಕ್ಷಮೆಯಾಚಿಸಿದರೆ, ಈ ವಿಷಯವನ್ನು ವಿಭಿನ್ನವಾಗಿ ಪರಿಗಣಿಸಲಾಗುವುದು - ಇಲ್ಲ, ನನ್ನಿಂದ ಅದು ಸಾಧ್ಯವಿಲ್ಲ. ಏಕೆಂದರೆ ಆ ಕ್ಷಮೆಯಾಚನೆ ಪ್ರಾಮಾಣಿಕವಾಗಿರುವುದಿಲ್ಲ. ನಾನು ಕ್ಷಮೆ ಕೇಳಿದರೆ ಅದು ಇತರ ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಕೆಟ್ಟ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತದೆ," ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಏನಿದು ಘಟನೆ?
ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಕುನಾಲ್ ಕಮ್ರಾ ಅವರು 'ದಿಲ್ ತೋ ಪಾಗಲ್ ಹೈ' ಚಿತ್ರದ ಹಾಡಿನ ಪೆರೋಡಿ ಮಾಡುವ ಮೂಲಕ ಏಕನಾಥ್ ಶಿಂಧೆ ಅವರನ್ನು ಟೀಕಿಸಿದ್ದರು. 2022ರಲ್ಲಿ ಶಿವಸೇನೆಯನ್ನು ಇಬ್ಬಾಗ ಮಾಡಿ ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಿದ್ದ ಶಿಂಧೆ ಅವರನ್ನು ಕಮ್ರಾ 'ದ್ರೋಹಿ' ಎಂದು ಕರೆದಿದ್ದರು. ಇದು ಶಿಂಧೆ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಬಿಜೆಪಿ ಎಂಎಲ್‌ಸಿ ಪ್ರವೀಣ್ ದರೇಕರ್ ಕಾಮ್ರಾ ವಿರುದ್ಧ ದೂರು ನೀಡಿದರು. ನೀಡಿದ ದೂರಿನ ಮೇರೆಗೆ ಹಕ್ಕುಬಾಧ್ಯತೆ ಸಮಿತಿಯು ವಿಚಾರಣೆ ಕೈಗೆತ್ತಿಕೊಂಡಿತ್ತು. ಸಮಿತಿಯ ಅಧ್ಯಕ್ಷ ಪ್ರಸಾದ್ ಲಾಡ್ ನೇತೃತ್ವದಲ್ಲಿ ನಡೆದ ವಿಚಾರಣೆ ಮುಂದುವರೆದಿದೆ, (ಏಜೆನ್ಸೀಸ್).