Mamata Banerjee | ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 
ದೇಶ

ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ, ಇದೆಲ್ಲಾ ಬಿಜೆಪಿಯ ರಾಜಕೀಯ ತಂತ್ರ; ಪ್ರಧಾನಿ ಮೋದಿಗೆ ದೀದಿ ತಿರುಗೇಟು! | Mamata Banerjee

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಿನ್ನೆ (ಶನಿವಾರ ಮಾ. 07) ನಡೆದ 9ನೇ ಅಂತರರಾಷ್ಟ್ರೀಯ ಸಂತಾಲ್ ಸಮ್ಮೇಳನದ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂಬ ಆರೋಪ ಈಗ ರಾಷ್ಟ್ರಮಟ್ಟದ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಮಮತಾ ಬ್ಯಾನರ್ಜಿ, ಬಿಜೆಪಿ ಚುನಾವಣಾ ಲಾಭಕ್ಕಾಗಿ ರಾಷ್ಟ್ರಪತಿಗಳ ಕಚೇರಿ ದುರ್ಬಳಕೆಯಾಗುತ್ತಿದೆ ಎಂದರು.

ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ ಎಂದ ದೀದಿ

ಸಿಲಿಗುರಿ ವಿವಾದಕ್ಕೆ ಸಂಬಂಧಿಸಿದಂತೆ ಸುದೀರ್ಘ ಹೇಳಿಕೆ ಬಿಡುಗಡೆ ಮಾಡಿರುವ ಮಮತಾ ಬ್ಯಾನರ್ಜಿ, ರಾಜ್ಯ ಸರ್ಕಾರದ ಮೇಲೆ ಕೇಳಿಬಂದಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಸಿಲಿಗುರಿಯಲ್ಲಿ ನಡೆದದ್ದು ಖಾಸಗಿ ಕಾರ್ಯಕ್ರಮ. ಇದರ ಸಂಪೂರ್ಣ ಜವಾಬ್ದಾರಿ ಆಯೋಜಕರು ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ್ದಾಗಿದೆ. ರಾಜ್ಯ ಸರ್ಕಾರಕ್ಕೆ ಇದರ ವಿವರಗಳ ಬಗ್ಗೆ ಮೊದಲೇ ಮಾಹಿತಿ ಇರಲಿಲ್ಲ ಎಂದು ದೀದಿ ಸ್ಪಷ್ಟಪಡಿಸಿದರು.
ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ರಾಷ್ಟ್ರಪತಿಗಳ ಹೇಳಿಕೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ. ಇದು ಅತ್ಯಂತ ದುರದೃಷ್ಟಕರ ಎಂದಿರುವ ಮಮತಾ, ರಾಷ್ಟ್ರಪತಿಗಳೊಂದಿಗೆ ಮುನಿಸಿದೆ ಎಂಬ ವರದಿಗಳು ಕೇವಲ ಊಹಾಪೋಹ. ರಾಜ್ಯವು ರಾಷ್ಟ್ರಪತಿಗಳ ಕಚೇರಿಗೆ ಸಲ್ಲಬೇಕಾದ ಎಲ್ಲಾ ಸೌಜನ್ಯ ಮತ್ತು ಗೌರವವನ್ನು ಕಾಯ್ದುಕೊಂಡಿದೆ ಎಂದು ಹೇಳಿದರು.

ರಾಷ್ಟ್ರಪತಿಗಳು ಹೇಳಿದ್ದೇನು?

ಕಾರ್ಯಕ್ರಮದಲ್ಲಿ ಮಾತನಾಡಿದ್ದ ದ್ರೌಪದಿ ಮುರ್ಮು ಅವರು ನೇರವಾಗಿಯೇ ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಸಾಮಾನ್ಯವಾಗಿ ರಾಷ್ಟ್ರಪತಿಗಳು ರಾಜ್ಯಕ್ಕೆ ಬಂದಾಗ ಮುಖ್ಯಮಂತ್ರಿಗಳು ಮತ್ತು ಸಚಿವರು ಸ್ವಾಗತಿಸಬೇಕು. ಆದರೆ ಇಲ್ಲಿ ಯಾರೂ ಬರಲಿಲ್ಲ. ಶೌಚಾಲಯಗಳಲ್ಲಿ ನೀರಿಲ್ಲ, ರಸ್ತೆಯಲ್ಲಿ ಕಸ ತುಂಬಿದೆ. ಬಹುಶಃ ಬಂಗಾಳ ಸರ್ಕಾರಕ್ಕೆ ಬುಡಕಟ್ಟು ಜನರ ಅಭಿವೃದ್ಧಿ ಬೇಕಿಲ್ಲ ಅನಿಸುತ್ತಿದೆ, ಅದಕ್ಕಾಗಿಯೇ ಜನರನ್ನು ಈ ಕಾರ್ಯಕ್ರಮಕ್ಕೆ ಬರದಂತೆ ತಡೆಯಲಾಗಿದೆ ಎಂದು ಹೇಳಿದ್ದರು.

ಸಂಜೆ 5 ಗಂಟೆಯೊಳಗೆ ವರದಿ ಸಲ್ಲಿಕೆಗೆ ಆದೇಶ

ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಗೃಹ ಕಾರ್ಯದರ್ಶಿಯವರು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು, ರಾಷ್ಟ್ರಪತಿಗಳ ಶಿಷ್ಟಾಚಾರದಲ್ಲಿ ಸಂಭವಿಸಿದ ಲೋಪದ ಕುರಿತು ಇಂದು ಸಂಜೆ 5 ಗಂಟೆಯೊಳಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ತೆಲಂಗಾಣದಲ್ಲಿ ಪರಿಶಿಷ್ಟ ಪಂಗಡಗಳ ಮೋರ್ಚಾ ಕಾರ್ಯಕರ್ತರು ಮಮತಾ ಬ್ಯಾನರ್ಜಿ ಪ್ರತಿಕೃತಿಯನ್ನು ಸುಟ್ಟು ಹಾಕಿ ಪ್ರತಿಭಟನೆ ನಡೆಸಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂವಿಧಾನ ಮತ್ತು ಬುಡಕಟ್ಟು ನಾಗರಿಕರನ್ನು ಅಗೌರವಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ(ಏಜೆನ್ಸೀಸ್​).