ಸಾಂದರ್ಭಿಕ ಚಿತ್ರ 
ದೇಶ

ಪ್ರಧಾನ್ ರಾಜೀನಾಮೆ ನೀಡದಿದ್ದರೇ ಮಾತುಕತೆಗೆ ಅರ್ಥವಿಲ್ಲ: ಮೂರನೇ ಸುತ್ತಿನ ಮಾತುಕತೆಗೂ ಮುನ್ನ ಸಿಜೆಪಿ ಹೇಳಿಕೆ | CJP statement

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹೊಣೆಗಾರಿಕೆ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ(CJP statement), ಕೇಂದ್ರ ಸರ್ಕಾರದೊಂದಿಗಿನ ಮೂರನೇ ಸುತ್ತಿನ ಮಾತುಕತೆಗೂ ಮುನ್ನ ತನ್ನ ನಿಲುವನ್ನು ಮತ್ತಷ್ಟು ಗಟ್ಟಿಯಾಗಿದ್ದು, ಪ್ರಧಾನ್ ರಾಜೀನಾಮೆ ನೀಡದಿದ್ದರೇ ಮಾತುಕತೆಗೆ ಅರ್ಥವಿಲ್ಲ ಎಂದು ಹೇಳಿದೆ.
ಈ ಕುರಿತು ಶನಿವಾರ(ಜು. 25) ಮಾತುಕತೆಗೂ ಮುನ್ನ ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಸಿಜೆಪಿ ವಕ್ತಾರ ಅಶುತೋಷ್ ರಾಂಕಾ, ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ವಿಷಯ ರಾಜಿ ಮಾಡಿಕೊಳ್ಳಲಾಗದ್ದು, ಸರ್ಕಾರದಿಂದ ಅವರ ರಾಜೀನಾಮೆ ಪಡೆಯಲ್ಲ ಎಂಬ ಉತ್ತರ ಬಂದ್ರೆ, ಹೆಚ್ಚಿನ ಚರ್ಚೆಗೆ ಯಾವುದೇ ಅರ್ಥವಿಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ಮಧ್ಯಾಹ್ನ ಸಂವಿಧಾನ ಕ್ಲಬ್‌ನಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗೆ ಸಿಜೆಪಿ ಪ್ರತಿನಿಧಿಗಳು ಎರಡನೇ ಸುತ್ತಿನ ಮಾತುಕತೆ ನಡೆಸಿದರು. ಇಂದು ಮಧ್ಯಾಹ್ನ ಮೂರನೇ ಮಾತುಕತೆ ನಿಗದಿಯಾಗಿದೆ.
ಸಿಜೆಪಿ ಒಟ್ಟು ಮೂರು ಬೇಡಿಕೆಗಳನ್ನು ಮುಂದಿಟ್ಟಿದೆ. ಒಂದು ಪ್ರಧಾನ್ ರಾಜೀನಾಮೆ, ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದಿರುವ ಭರವಸೆ ಹಾಗೂ ನೀಟ್ ಪತ್ರಿಕೆ ಸೋರಿಕೆಯ ನಂತರ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ಸೇರಿವೆ.
ಶುಕ್ರವಾರದ ಮಾತುಕತೆಯಲ್ಲಿ, ಪ್ರತಿಭಟನಾಕಾರರ ಎರಡು ಪ್ರಮುಖ ಬೇಡಿಕೆಗಳಾದ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಬಾರದು ಮತ್ತು ಪರಿಹಾರವನ್ನು ನೀಡಲು ಒಪ್ಪಿಕೊಂಡಿತ್ತು. ಆದರೆ ಶಿಕ್ಷಣ ಸಚಿವರ ರಾಜೀನಾಮೆ ಇನ್ನೂ ಒಂದು ಕಗ್ಗಂಟಾಗಿಯೇ ಉಳಿದಿದೆ.
ನಿನ್ನೆ ಮಧ್ಯಾಹ್ನ ಸಭೆ ಬಳಿಕ ಮಾತನಾಡಿದ್ದ ಕೇಂದ್ರ ಸಚಿವ ಜೆ.ಪಿ.ನಡ್ಡಾ, ಸಭೆ ಸುಮಾರು ಎರಡು ಗಂಟೆಗಳ ಕಾಲ ನಡೆಯಿತು. ಅವರು ಮೂರು ಪ್ರಮುಖ ಬೇಡಿಕೆಗಳು ಮತ್ತು ಪರೀಕ್ಷೆಗಳಿಗೆ ಐದು ಸುಧಾರಣಾ ಸಲಹೆಗಳನ್ನು ಹೊಂದಿದ್ದರು. ನಾಳೆ ಮಧ್ಯಾಹ್ನ ಅವರನ್ನು ಮತ್ತೆ ಭೇಟಿ ಮಾಡಿ ಸರ್ಕಾರದೊಳಗೆ ನಾವು ನಡೆಸಿದ ಚರ್ಚೆಗಳ ಬಗ್ಗೆ ತಿಳಿಸುತ್ತೇವೆ ಎಂದು ಹೇಳಿದ್ದರು.
ಇನ್ನೂ ಸಿಜೆಪಿ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸುತ್ತಿದ್ದರೂ, ರಾಜೀನಾಮೆ ನೀಡುವುದು ಅತ್ಯಂತ ಸುಲಭವಾದ ನಿರ್ಧಾರ. ಅದು ಜವಾಬ್ದಾರಿಯಿಂದ ತಪ್ಪಿಸಿಕೊಂಡಂತೆ. ಆದ್ದರಿಂದ ಅವರ ರಾಜೀನಾಮೆ ಪಡೆಯುವ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ ಎಂದು ವರದಿಯಾಗಿದೆ (ಏಜೆನ್ಸೀಸ್).