ದೆಹಲಿ ಸಾರಿಗೆ ರದ್ದತಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ 
ದೇಶ

“ಭಾರತದ ಯುವಕರನ್ನು ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ”: ಮೆಟ್ರೋ, ರೈಲು ಬಂದ್‌ಗೆ ಚಿರಾಗ್ ಪಾಸ್ವಾನ್ ಆಕ್ರೋಶ! Chirag Paswan

ದೆಹಲಿ ಪ್ರತಿಭಟನೆ ಹಿನ್ನೆಲೆ ರೈಲು, ಮೆಟ್ರೋ ರದ್ದತಿಗೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ತೀವ್ರ ಆಕ್ರೋಶ. "ಭಾರತದ ಯುವಕರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಕಿಡಿಕಾರಿದ್ದಾರೆ.

ನವದೆಹಲಿ: ದೇಶದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ನೀತಿಯನ್ನು ಕೂಡಲೇ ಕೈಬಿಡುವಂತೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್​ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕೆಂಬ ಆಗ್ರಹವನ್ನು ಮುಂದಿಟ್ಟುಕೊಂಡು, ಕಾಕ್ರೋಚ್​ ಜನತಾ ಪಾರ್ಟಿ (CJP) ದೆಹಲಿಯ ಜಂತರ್​-ಮಂತರ್​ನಲ್ಲಿ ಬೃಹತ್​ ಪ್ರತಿಭಟನೆ ನಡೆಸಲು ಮುಂದಾಗಿದೆ.

ಈ ಹಿನ್ನಲೆಯಲ್ಲಿ ದೆಹಲಿಯತ್ತ ಸಾಗುವ ರೈಲುಗಳ ಪ್ರಯಾಣವನ್ನು ಹಾಗೂ ದೆಹಲಿ ಸಾರಿಗೆಯ ಪ್ರಮುಖ ಕೊಂಡಿಯಾಗಿರುವ ಮೆಟ್ರೋ ರೈಲಿನ ಪ್ರಯಾಣವನ್ನು ರದ್ದು ಪಡಿಸಿದಕ್ಕೆ ಸಂಸದ ಚಿರಾಗ್​ ಪಾಸ್ವಾನ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ಯುವಕರನ್ನು ತಡೆಯಲು ಸಾಧ್ಯವಿಲ್ಲ!

ಆಡಳಿತರೂಢ ಎನ್​ಡಿಎ ಸರ್ಕಾರದಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಕ್ಯಾಬಿನೆಟ್ ಸಚಿವರಾಗಿರುವ ಚಿರಾಗ್​ ಪಾಸ್ವಾನ್​, ರೈಲು, ಮೆಟ್ರೋಗಳ ಸಂಚಾರವನ್ನು ರದ್ದು ಪಡಿಸಿ, ಭಾರತದ ಯುವಕರನ್ನು ತಡೆಯುತ್ತೆವೆ ಎಂಬ ಭ್ರಮೆಯಲ್ಲಿರುವವರು, ಎಷ್ಟು ರೈಲನ್ನು ನಿಲ್ಲಿಸುತ್ತೀರಿ? ಎಷ್ಟು ರಸ್ತೆಗಳನ್ನು ಬಂದ್​ ಮಾಡುತ್ತೀರಿ? ಮೊದಲು ಈ ಭ್ರಮೆಯಿಂದ ಹೊರ ಬನ್ನಿ ಎಂದಿದ್ದಾರೆ.

ನಮ್ಮ ಭಾರತದ ಯುವ ಸಮೂದಾಯ ವಿಶ್ವಕ್ಕೆ ದಾರಿ ತೋರಿಸುತ್ತಿದ್ದಾರೆ. ಅಂತವರನ್ನು ನೀವು ತಡೆಯಲು ಮುಂದಾಗುತ್ತೀದಿರಿ, ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದ ಪಾಸ್ವಾನ್​ ಹೇಳಿದ್ದಾರೆ.

57 ಮೆಟ್ರೋ ನಿಲ್ದಾಣ ಬಂದ್​!

ಈ ಪ್ರತಿಭಟನೆಯಲ್ಲಿ ಸಾವಿರಾರು ಜನ ಭಾಗವಿಸುವ ಕಾರಣ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶವಾಗುವ ಸಂಭವವಿರುವ ಹಿನ್ನಲೆ, ಸುಮಾರು 57 ಮೆಟ್ರೋ ನಿಲ್ದಾಣಗಳಲ್ಲಿ ಸಾರಿಗೆ ಸೇವೆ ಲಭ್ಯವಿರುವುದಿಲ್ಲವೆಂದು ದೆಹಲಿ ಮೆಟ್ರೋ ರೈಲ್​ ಕಾರ್ಪೋರೇಷನ್​ ಘೋಷಿಸಿದೆ.

ಈ 57 ಮೆಟ್ರೋ ನಿಲ್ದಾಣಗಳಲ್ಲಿ, ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ಸೇವೆ ಅಲಭ್ಯವಾಗಲಿದ್ದು, ಶನಿವಾರ ಮುಂದಿನ ಆದೇಶದವೆರೆಗ ಯಾವುದೇ ಮೆಟ್ರೋ ಸೇವೆ ದೊರೆಯುವುದಿಲ್ಲ, ದೆಹಲಿ ನಾಗರಿಕರು ಸಹಕರಿಸಬೇಕಾಗಿ DMRC ಟ್ವೀಟ್ ಮಾಡಿದೆ.

ಇವತ್ತು ಬೆಳಿಗ್ಗೆ ಪತ್ರಿಕಾಗೋಷ್ಟಿ ನಡೆಸಿದ್ದ ಪೊಲೀಸ್​ ಜಂಟಿ ಆಯುಕ್ತೆ ನುಪೂರ್ ಪ್ರಸಾದ್​, ಮೆಟ್ರೋ ಕಾರ್ಪೋರೇಷನ್​ಗೆ ಭದ್ರತೆ ಹಿನ್ನಲೆ, ಮೆಟ್ರೋ ಸಂಚಾರವನ್ನು ಸ್ಥಗಿತಗೊಳಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದರು. ಈಗ ಪೊಲೀಸರ ಮನವಿಗೆ ಪ್ರತಿಕ್ರಿಯಿಸಿರುವ ಮೆಟ್ರೋ ಕಾರ್ಪೋರೇಷನ್​ ಅಧಿಕೃತ ಹೇಳಿಕೆಯನ್ನು ನೀಡಿದೆ.

ದಾರಿ ತಪ್ಪಿಸುವುದನ್ನು ನಿಲ್ಲಿಸಿ!

ಅಂತಯೇ, ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದ ಚಿರಾಗ್​ ಪಾಸ್ವಾನ್​, ನಿಮಗೆ ಒಂದು ಚುನಾವಣಾ ಗೆಲ್ಲುವ ಯೋಗ್ಯತೆ ಇಲ್ಲ, ಈಗ ಸುಮ್ಮನೆ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಿರಿ. ನಿಮಗೆ ಎಸ್​ಐಆರ್​ ಪ್ರಕ್ರಿಯೆ ಮೇಲೆ ಆರೋಪ, ಅನುಮಾನವಿದ್ದರೆ, ಕೇಂದ್ರ ಚುನಾವಣಾ ಆಯೋಗದೊಂದಿಗೆ ಮಾತುಕತೆ ನಡೆಸಿ, ಅದನ್ನು ಬಿಟ್ಟು ಹೀಗೆ ಬೀದಿ ರಂಪಾಟ ಮಾಡಬೇಡಿ ಎಂದಿದ್ದಾರೆ.

ಹಾಗೆಯೇ, ಚುನವಣಾ ಆಯೋಗ ಕೂಡ, ತಮ್ಮ ಮೇಲೆ ಕೇಳಿ ಬರುತ್ತಿರುವ ಆರೋಪಗಳಿಗೆ ಸರಿಯಾಗಿ ಉತ್ತರ ನೀಡಬೇಕು. ಸಾಂವಿಧಾನಿಕ ಸಂಸ್ಥೆಗಳ ಮೇಲೆ ಜನರ ನಂಬಿಕೆ ಕಡಿಮೆಯಾಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ, (ಏಜೆನ್ಸೀಸ್​).