ದೇಶದೆಲ್ಲೆಡೆ ಇಂಧನ, ಗ್ಯಾಸ್ ಕೊರತೆ: ಲಾಕ್‌ಡೌನ್ ವಿಚಾರದಲ್ಲಿ ಮಹತ್ವದ ಹೇಳಿಕೆ ನೀಡಿದ ಕೇಂದ್ರ ಸರ್ಕಾರ! Lockdown
- ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶಾದ್ಯಂತ ಇಂಧನ ಹಾಗೂ ತೈಲ ಪೂರೈಕೆಯಲ್ಲಿ ಅಡಚಣೆ
- ಕಡೆ ಎಲ್ಪಿಜಿ ಸಿಲಿಂಡರ್ಗಳು ಸಿಗದೆ ಹೋಟೆಲ್ಗಳು ಬಂದ್
- ಕೆಲವೆಡೆ ಪೆಟ್ರೋಲ್ ಬಂಕ್ಗಳಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ
- ದೇಶದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ವದಂತಿಗೆ ಕೇಂದ್ರದ ಸ್ಪಷ್ಟನೆ
Lockdown : ಮಧ್ಯಪ್ರಾಚ್ಯ ಯುದ್ಧದಿಂದಾಗಿ ದೇಶಾದ್ಯಂತ ಇಂಧನ ಹಾಗೂ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಅನೇಕ ಕಡೆ ಎಲ್ಪಿಜಿ ಸಿಲಿಂಡರ್ಗಳು ಸಿಗುತ್ತಿಲ್ಲ. ಇದರಿಂದ ಅನೇಕ ಹೋಟೆಲ್ಗಳು ಬಂದ್ ಆಗಿವೆ. ಕೆಲವೆಡೆ ಪೆಟ್ರೋಲ್ ಬಂಕ್ಗಳಲ್ಲಿ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ. ಈ ಪರಿಸ್ಥಿತಿಯಿಂದ ದೇಶದಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ದೇಶದಲ್ಲಿ ಯಾವುದೇ ಲಾಕ್‌ಡೌನ್ ಹೇರುವುದಿಲ್ಲ ಎಂದು ಕೇಂದ್ರ ಸರ್ಕಾರ ಇಂದು ಸ್ಪಷ್ಟನೆ ನೀಡಿದೆ. ಈ ಕುರಿತು ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಟ್ವೀಟ್ ಮಾಡಿದ್ದಾರೆ.
ಪ್ರಸ್ತುತ ಜಾಗತಿಕ ಪರಿಸ್ಥಿತಿ ಅಸ್ಥಿರವಾಗಿದೆ. ಇದರಿಂದ ಇಂಧನ, ಪೂರೈಕೆ ಸರಪಳಿಗಳು ಮತ್ತು ಅಗತ್ಯ ವಸ್ತುಗಳ ಪೂರೈಕೆ ಸುತ್ತ ನಡೆಯುತ್ತಿರುವ ಬೆಳವಣಿಗೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಮ್ಮ ನಾಗರಿಕರಿಗೆ ಇಂಧನ ಮತ್ತು ಇತರ ನಿರ್ಣಾಯಕ ಸರಬರಾಜುಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಯಾವುದೇ ಸವಾಲುಗಳನ್ನು ನಿಭಾಯಿಸಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಜಾಗತಿಕ ಅನಿಶ್ಚಿತತೆಗಳ ನಡುವೆಯೂ ಭಾರತ ನಿರಂತರವಾಗಿ ತನ್ನ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ ಮತ್ತು ನಾವು ಸಕಾಲಿಕ, ಪೂರ್ವಭಾವಿ ಹಾಗೂ ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತೇವೆ. ಭಾರತದಲ್ಲಿ ಲಾಕ್‌ಡೌನ್ ವದಂತಿಗಳು ಸಂಪೂರ್ಣವಾಗಿ ಸುಳ್ಳು. ನಾನು ಸ್ಪಷ್ಟವಾಗಿ ಹೇಳುತ್ತೇನೆ, ಅಂತಹ ಯಾವುದೇ ಪ್ರಸ್ತಾಪವು ಭಾರತ ಸರ್ಕಾರದ ಪರಿಗಣನೆಯಲ್ಲಿಲ್ಲ. ಈ ಸಮಯದಲ್ಲಿ ನಾವು ಶಾಂತವಾಗಿ, ಜವಾಬ್ದಾರಿಯುತವಾಗಿ ಮತ್ತು ಒಗ್ಗಟ್ಟಿನಿಂದ ಇರುವುದು ಮುಖ್ಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ವದಂತಿಗಳನ್ನು ಹರಡಿ, ಭೀತಿ ಸೃಷ್ಟಿಸಲು ಮಾಡುತ್ತಿರುವ ಪ್ರಯತ್ನಗಳು ನಿಜಕ್ಕೂ ಬೇಜವಾಬ್ದಾರಿ ಮತ್ತು ಹಾನಿಕಾರಕವಾಗಿದೆ ಎಂದು ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ಸುದೀರ್ಘ ಟ್ವೀಟ್ನಲ್ಲಿ ದೇಶದ ಜನತೆಗೆ ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ, ಪ್ರಸ್ತುತ ನಡೆಯುತ್ತಿರುವ ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧವು ಜಾಗತಿಕವಾಗಿ "ಇಂಧನ ಬಿಕ್ಕಟ್ಟನ್ನು" ಉಂಟುಮಾಡುತ್ತಿದೆ. ಇಂಧನ ಸಾಗಣೆಗೆ ನಿರ್ಣಾಯಕವಾದ "ಹೊರ್ಮುಜ್ ಜಲಸಂಧಿ"ಯನ್ನು ಇಸ್ರೇಲ್-ಅಮೆರಿಕ ನಡೆಸಿದ ಜಂಟಿ ದಾಳಿಗೆ ಪ್ರತೀಕಾರವಾಗಿ ಇರಾನ್ ಮುಚ್ಚಿದೆ. ಆದರೆ, ಭಾರತ ಸೇರಿದಂತೆ ಕೆಲ ದೇಶಗಳ ಹಡಗುಗಳು ಇಂಧನ ಹೊತ್ತು ಸಾಗಲು ಇರಾನ್ ಅನುಮತಿ ನೀಡಿರುವುದರಿಂದ ಭಾರತ ನಿಟ್ಟುಸಿರು ಬಿಡುವಂತಾಗಿದೆ.
ಸದ್ಯ ದೇಶದಲ್ಲಿ ಇಂಧನವಾಗಲಿ ಅಥವಾ ಎಲ್ಪಿಜಿ ಆಗಲಿ ಕೊರತೆ ಇಲ್ಲ ಮತ್ತು ಸಾಕಷ್ಟು ಮೀಸಲು ಇದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೂ, ದೇಶದ ಹಲವೆಡೆ ಗ್ಯಾಸ್ ಸಿಲಿಂಡರ್ಗಳು ಸಿಗುತ್ತಿಲ್ಲ ಮತ್ತು ಕೆಲ ಪೆಟ್ರೋಲ್ ಬಂಕ್ಗಳಲ್ಲಿ ಔಟ್ ಆಫ್ ಸ್ಟಾಕ್ ಬೋರ್ಡ್ ಹಾಕಿದ್ದಾರೆ. ಕೆಲವರು ಯುದ್ಧದ ಲಾಭವನ್ನು ಪಡೆದುಕೊಳ್ಳಲು ಕೃತಕ ಅಭಾವ ಸೃಷ್ಟಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿಬರುತ್ತಿವೆ. ಈ ಕುರಿತು ಕೇಂದ್ರ ಸರ್ಕಾರವು ಕೂಡ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಿದೆ. ಹೀಗಿದ್ದರೂ ಗ್ಯಾಸ್ ಸಿಲಿಂಡರ್ ಅಭಾವ ಮುಂದುವರಿದೆ, (ಏಜೆನ್ಸೀಸ್).