ನವದೆಹಲಿ: ಇಲ್ಲಿನ ಐತಿಹಾಸಿಕ ರಾಮ್ಲೀಲಾ ಮೈದಾನದಲ್ಲಿ ನವೆಂಬರ್ 1 ರಂದು ಬೃಹತ್ ಸಾರ್ವಜನಿಕ ಸಮಾವೇಶವನ್ನು ನಡೆಸಲು ಕಾಂಗ್ರೆಸ್ (Congress Rally) ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ದೆಹಲಿ ಪೊಲೀಸರು ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಅನುಮತಿ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಹಮ್ಮಿಕೊಂಡಿರುವ ಮತ ಉಳಿಸಿ, ದೇಶ ಉಳಿಸಿ ಅಭಿಯಾನದ ಭಾಗವಾಗಿ ಈ ಮೆಗಾ ಸಮಾವೇಶವನ್ನು ಆಯೋಜಿಸಿದ್ದು, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ದೆಹಲಿ ಪೊಲೀಸರು ಹಲವು ಕಠಿಣ ನಿಯಮಗಳನ್ನು ವಿಧಿಸಿದ್ದಾರೆ. ಸಮಾವೇಶವು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಮಾತ್ರ ನಡೆಯಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಪೊಲೀಸರು ನೀಡಿರುವ ಪ್ರಮಾಣಪತ್ರದ ಪ್ರಕಾರ, ಮೈದಾನದ ಒಡೆತನ ಹೊಂದಿರುವ ಪ್ರಾಧಿಕಾರದಿಂದ ಮುಂಚಿತವಾಗಿ ಅನುಮತಿ ಪಡೆದಿರಬೇಕು ಮತ್ತು ಪೊಲೀಸರು ವಿಧಿಸಿರುವ ಎಲ್ಲಾ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಭೆಯಲ್ಲಿ ಯಾವುದೇ ಹಿಂಸಾಚಾರ, ಸಾರ್ವಜನಿಕ ಅಶಾಂತಿ ಅಥವಾ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ಆಯೋಜಕರ ಮೇಲಿರುತ್ತದೆ. ಸಂಜೆ 5:00 ಗಂಟೆಯೊಳಗೆ ಕಾರ್ಯಕ್ರಮ ಸಂಪೂರ್ಣವಾಗಿ ಮುಕ್ತಾಯಗೊಂಡು, ಭಾಗವಹಿಸಿದ ಎಲ್ಲರೂ ಮೈದಾನದಿಂದ ತೆರಳಲು ಆರಂಭಿಸಬೇಕು.
ಯಾವುದೇ ಕಾರಣಕ್ಕೂ ಕಾರ್ಯಕ್ರಮದ ಸಮಯವನ್ನು ವಿಸ್ತರಿಸಲು ಅವಕಾಶವಿರುವುದಿಲ್ಲ. ಅಲ್ಲದೆ, ರ್ಯಾಲಿಗೂ ಮೊದಲು ಅಥವಾ ನಂತರ ಭಾಗವಹಿಸುವವರು ರಾಮ್ಲೀಲಾ ಮೈದಾನದಲ್ಲಿ ರಾತ್ರಿ ಉಳಿಯುವುದನ್ನು ನಿಷೇಧಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಪೊಲೀಸ್ ಸೂಚನೆಗಳನ್ನು ಪಾಲಿಸದಿದ್ದರೆ ಆಯೋಜಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹಾಗೂ ಅನುಮತಿಯನ್ನು ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಸಂಜೆ 5 ಗಂಟೆಯೊಳಗೆ ರ್ಯಾಲಿ ಮುಕ್ತಾಯ: ನವೆಂಬರ್ 1ರಂದು ನಿಗದಿಯಾಗಿರುವ ಈ ರ್ಯಾಲಿ ಕಟ್ಟುನಿಟ್ಟಾಗಿ ಸಂಜೆ 5:00 ಗಂಟೆಗೆ ಮುಕ್ತಾಯಗೊಳ್ಳಬೇಕು. ಇದರ ನಂತರ, ಭಾಗವಹಿಸುವವರು ತೆರಳುವ ಪ್ರಕ್ರಿಯೆ ಆರಂಭವಾಗಬೇಕು. ಯಾವುದೇ ಪರಿಸ್ಥಿತಿಯಲ್ಲಿ ಕಾರ್ಯಕ್ರಮದ ಅವಧಿಯನ್ನು ವಿಸ್ತರಿಸಲಾಗುವುದಿಲ್ಲ.
ರಾತ್ರಿ ಉಳಿಯಲು ಅನುಮತಿಯಿಲ್ಲ: ಭಾಗವಹಿಸುವವರಿಗೆ ರ್ಯಾಲಿಗೂ ಮೊದಲು ಅಥವಾ ನಂತರ ರಾಮ್ಲೀಲಾ ಮೈದಾನದಲ್ಲಿ ರಾತ್ರಿ ಉಳಿಯಲು ಅವಕಾಶವಿರುವುದಿಲ್ಲ.
ಸಿಸಿಟಿವಿ ಮೂಲಕ ಕಣ್ಗಾವಲು: ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ವೇದಿಕೆ, ಆಸೀನರಾಗುವ ಸ್ಥಳಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೈ-ಡೆಫಿನಿಷನ್ ಕ್ಯಾಮೆರಾಗಳನ್ನು ಅಳವಡಿಸಬೇಕು. ರೆಕಾರ್ಡಿಂಗ್ ಸೌಲಭ್ಯ ಹಾಗೂ ಕನಿಷ್ಠ ಐದು ಮಾನಿಟರ್ಗಳನ್ನು ಹೊಂದಿರುವ ನಿಯಂತ್ರಣ ಕೋಣೆಯನ್ನು ಕೂಡ ಸ್ಥಾಪಿಸಬೇಕು.
ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ: ರ್ಯಾಲಿಗೆ ಆಗಮಿಸುವವರಿಗಾಗಿ ಸಾಕಷ್ಟು ನೀರಿನ ಟ್ಯಾಂಕರ್ಗಳು ಮತ್ತು ಶೌಚಾಲಯ ಸೌಲಭ್ಯಗಳನ್ನು ಕಲ್ಪಿಸಬೇಕು. ಮಹಿಳೆಯರಿಗಾಗಿ ಪ್ರತ್ಯೇಕ ಶೌಚಾಲಯ ಬ್ಲಾಕ್ಗಳನ್ನು ವ್ಯವಸ್ಥೆ ಮಾಡಬೇಕು.
ಸ್ವಯಂಸೇವಕರ ನಿಯೋಜನೆ: ರ್ಯಾಲಿ ವ್ಯವಸ್ಥಿತವಾಗಿ ನಡೆಯುವುದನ್ನು ಖಚಿತಪಡಿಸಲು ಸಾಕಷ್ಟು ಸಂಖ್ಯೆಯಲ್ಲಿ ಸ್ವಯಂಸೇವಕರನ್ನು ನಿಯೋಜಿಸಬೇಕು. ಎಲ್ಲಾ ಸ್ವಯಂಸೇವಕರು ಸಮವಸ್ತ್ರ ಅಥವಾ ಬ್ಯಾಡ್ಜ್ಗಳ ಮೂಲಕ ಗುರುತಿಸುವಂತಿರಬೇಕು.
ಹಿಂಸಾಚಾರ ಮತ್ತು ಅಶಾಂತಿಗೆ ನಿಷೇಧ: ರ್ಯಾಲಿ ಶಾಂತಿಯುತವಾಗಿ ಮುಂದುವರಿಯುವುದನ್ನು ಆಯೋಜಕರು ಖಚಿತಪಡಿಸಿಕೊಳ್ಳಬೇಕು. ಯಾವುದೇ ರೀತಿಯ ಹಿಂಸಾಚಾರ, ಸಾರ್ವಜನಿಕ ಅಶಾಂತಿ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ ಚಟುವಟಿಕೆಗಳನ್ನು ಸಹಿಸುವುದಿಲ್ಲ.
ಜಾತಿ ಅಥವಾ ಧರ್ಮದ ಕುರಿತು ಪ್ರಚೋದನಕಾರಿ ಭಾಷಣಗಳಿಲ್ಲ: ಜಾತಿ, ಧರ್ಮ ಅಥವಾ ಚರ್ಮದ ಬಣ್ಣದ ಆಧಾರದ ಮೇಲೆ ಜನರ ನಡುವೆ ಉದ್ವಿಗ್ನತೆಯನ್ನು ಉಂಟುಮಾಡುವ ಅಥವಾ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಯಾವುದೇ ಭಾಷಣಗಳನ್ನು ವೇದಿಕೆಯಿಂದ ಮಾಡಬಾರದು.
ಪ್ರಚೋದನಕಾರಿ ಭಾಷಣಗಳ ವಿರುದ್ಧ ತಕ್ಷಣದ ಕ್ರಮ: ಯಾವುದೇ ಸ್ಪೀಕರ್ ಪ್ರಚೋದನಕಾರಿ ಅಥವಾ ಬೆದರಿಕೆ ಒಡ್ಡುವ ಭಾಷಣ ಮಾಡಿದರೆ, ಆಯೋಜಕರು ತಕ್ಷಣವೇ ಮೈಕ್ರೋಫೋನ್ ಆಫ್ ಮಾಡಬೇಕು ಮತ್ತು ಭಾಷಣಕಾರರನ್ನು ವೇದಿಕೆಯಿಂದ ಕೆಳಗಿಳಿಸಬೇಕು.
ರಾಮ್ಲೀಲಾ ಮೈದಾನ ಮೀರಿ ಯಾವುದೇ ಮೆರವಣಿಗೆ ಇಲ್ಲ: ರ್ಯಾಲಿಯ ಸಮಯದಲ್ಲಿ ರಾಮ್ಲೀಲಾ ಮೈದಾನದಿಂದ ಬೇರೆ ಯಾವುದೇ ಸ್ಥಳಕ್ಕೆ ಮೆರವಣಿಗೆ ನಡೆಸಲು ಅನುಮತಿ ಇರುವುದಿಲ್ಲ.
ನಿಗದಿತ ಪ್ರದೇಶಗಳಲ್ಲಿ ಮಾತ್ರ ವಾಹನಗಳ ನಿಲುಗಡೆ: ರ್ಯಾಲಿಗಾಗಿ ಆಗಮಿಸುವ ಬಸ್ಗಳು, ಕಾರುಗಳು, ಟೆಂಪೋಗಳು ಮತ್ತು ಇತರ ವಾಹನಗಳನ್ನು ಟ್ರಾಫಿಕ್ ಪೊಲೀಸರು ಸೂಚಿಸಿದ ಪ್ರದೇಶಗಳಲ್ಲಿ ಮಾತ್ರ ನಿಲ್ಲಿಸಬೇಕು.
ಪೊಲೀಸ್ ಸೂಚನೆಗಳ ಪಾಲನೆ: ಆಯೋಜಕರು ದೆಹಲಿ ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಬೇಕು.
ನಿಯಮ ಉಲ್ಲಂಘನೆಗೆ ಕಾನೂನು ಕ್ರಮ: ಷರತ್ತುಗಳಲ್ಲಿ ಯಾವುದನ್ನಾದರೂ ಉಲ್ಲಂಘಿಸಿದರೆ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು.
ಸಂಪೂರ್ಣ ಕಾರ್ಯಕ್ರಮದ ವಿವರಗಳನ್ನು ಒದಗಿಸುವುದು: ಆಯೋಜಕರು ಆಹ್ವಾನಿತರು ಮತ್ತು ಸ್ವಯಂಸೇವಕರ ಪಟ್ಟಿ, ಕಾರ್ಯಕ್ರಮದ ನಿಮಿಷವಾರು ವೇಳಾಪಟ್ಟಿ ಹಾಗೂ ಬಸ್ಗಳ ನೋಂದಣಿ ವಿವರಗಳೊಂದಿಗೆ ಒಟ್ಟು ವಾಹನಗಳ ಸಂಖ್ಯೆಯನ್ನು ಪೊಲೀಸರಿಗೆ ಒದಗಿಸಬೇಕು.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ: ಅನ್ವಯವಾಗುವ ಎಲ್ಲಾ ಕಾನೂನು ಮತ್ತು ನಿಯಮಗಳನ್ನು ಆಯೋಜಕರು ಕಡ್ಡಾಯವಾಗಿ ಪಾಲಿಸಬೇಕು. ಮೇಲಾಗಿ, ಆಗಮಿಸುವ ಜನರನ್ನು ನಿರ್ವಹಿಸಲು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಲು ಅಗತ್ಯ ವ್ಯವಸ್ಥೆಗಳನ್ನು ಮಾಡುವುದು ಅವರ ಜವಾಬ್ದಾರಿಯಾಗಿದೆ(ಏಜೆನ್ಸೀಸ್).