ದೇಶ

ಹಿಂಸಾತ್ಮಕವಾಗಿ ಆಡಳಿತ ಬದಲಾವಣೆ ಬಯಸುವವರಿಗೆ ಸರ್ಕಾರಿ ನೌಕರಿ ಸಿಗಲ್ಲ!...ಯುಪಿ ಸರ್ಕಾರದಿಂದ ಮಹತ್ವದ ಆದೇಶ: ಪ್ರತಿಪಕ್ಷಗಳ ವಿರೋಧ | Uttar Pradesh Government

ಲಖನೌ: ಉತ್ತರ ಪ್ರದೇಶದಲ್ಲಿ ಸರ್ಕಾರಿ ನೇಮಕಾತಿಗಳಿಗಾಗಿ ರಾಜ್ಯ ಸರ್ಕಾರವು ತನ್ನ ಪಾತ್ರ ಪರಿಶೀಲನಾ ನಿಯಮಗಳನ್ನು (Character Verification Rules) ಮತ್ತಷ್ಟು ಕಠಿಣಗೊಳಿಸಿದ್ದು, ಇದರನ್ವಯ, ಹಿಂಸಾತ್ಮಕ ಆಡಳಿತ ಬದಲಾವಣೆಯ ಘೋಷಣೆಯ ಪ್ರಕರಣಗಳಲ್ಲಿ ಗುರುತಿಸಿಕೊಂಡಿರುವವರಿಗೆ ಉದ್ಯೋಗ ಅವಕಾಶವನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಸಾಧ್ಯತೆಯಿದೆ.

ಯೋಗಿ ಆದಿತ್ಯನಾಥ್ ನೇತೃತ್ವದ ಯುಪಿ ಸರ್ಕಾರದ ಈ ಮಹತ್ವದ ನಿರ್ಧಾರವು, ಇತ್ತೀಚಿನ ಪ್ರತಿಭಟನೆಯೊಂದರ ವೇಳೆ ಕೇಳಿಬಂದ ಆಡಳಿತ ಬದಲಾವಣೆಯ ವಿವಾದದ ಬೆನ್ನಲ್ಲೇ ಹೊರಬಂದಿದ್ದು, ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ.

ರಾಜ್ಯದ ನೇಮಕಾತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ. ದೇವರಾಜ್ ಈ ಹೊಸ ನಿರ್ದೇಶನವನ್ನು ಹೊರಡಿಸಿದ್ದು, ಕೇವಲ ರಾಜಕೀಯ ಸಿದ್ಧಾಂತಗಳ ಕಾರಣಕ್ಕಾಗಲಿ ಅಥವಾ ಅಭ್ಯರ್ಥಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂಬ ಕಾರಣಕ್ಕಾಗಲಿ ಯಾವುದೇ ಅಭ್ಯರ್ಥಿಯನ್ನು ಸರ್ಕಾರಿ ನೌಕರಿಗೆ ಅನರ್ಹಗೊಳಿಸಲು ಬರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಸರ್ಕಾರಿ ಆದೇಶದ ಪ್ರಕಾರ, ಯಾವುದೇ ವ್ಯಕ್ತಿಯು ಕೇವಲ ತಮ್ಮದೇ ಆದ ರಾಜಕೀಯ ನಂಬಿಕೆಗಳು ಅಥವಾ ಸಿದ್ಧಾಂತಗಳನ್ನು ಹೊಂದಿದ್ದಾರೆ ಎಂಬ ಮಾತ್ರಕ್ಕೆ ಅವರನ್ನು ಸರ್ಕಾರಿ ಉದ್ಯೋಗದಿಂದ ಹೊರಗಿಡುವಂತಿಲ್ಲ ಮತ್ತು ರಾಜಕೀಯ ವಿಚಾರಗಳ ಆಧಾರದ ಮೇಲೆ ಯಾರಿಗೂ ಉದ್ಯೋಗ ನಿರಾಕರಿಸುವ ಹಾಗಿಲ್ಲ ಎಂದು ಸರ್ಕಾರ ತಿಳಿಸಿದೆ.

ಆದರೆ, ಅಸ್ತಿತ್ವದಲ್ಲಿರುವ ಸಾಮಾಜಿಕ ವ್ಯವಸ್ಥೆಯನ್ನು ಹಿಂಸಾತ್ಮಕ ಮಾರ್ಗಗಳ ಮೂಲಕ ಬದಲಾಯಿಸುವುದೇ ತಮ್ಮ ಸಂಘಟನೆಯ ಮೂಲ ಉದ್ದೇಶವಾಗಿದೆ ಎಂದು ಬಹಿರಂಗವಾಗಿ ಘೋಷಿಸಿಕೊಂಡಿರುವ ಅಥವಾ ಅಂತಹ ಸಂಘಟನೆಗಳೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳು ಸರ್ಕಾರಿ ಸೇವೆಯಲ್ಲಿ ನೇಮಕಗೊಳ್ಳಲು ಸಂಪೂರ್ಣ ಅನರ್ಹರು ಎಂದು ಕಠಿಣ ಎಚ್ಚರಿಕೆ ನೀಡಲಾಗಿದೆ.

ಅಲ್ಲದೆ, ವ್ಯಕ್ತಿಯು ತನ್ನ 21ನೇ ವಯಸ್ಸನ್ನು ಪೂರೈಸಿದ ನಂತರ ಮತ್ತು ಪರಿಶೀಲನಾ ದಿನಾಂಕಕ್ಕೆ ಮುಂಚಿನ ಮೂರು ವರ್ಷಗಳ ಅವಧಿಯಲ್ಲಿ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರೆ, ಆ ವ್ಯಕ್ತಿ ಇನ್ನೂ ಅಂತಹ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ ಎಂದೇ ಭಾವಿಸಬಹುದು. ಅದಷ್ಟೆ ಅಲ್ಲದೇ ಆ ನಿರ್ದಿಷ್ಟ ಅವಧಿಯಲ್ಲಿ ವ್ಯಕ್ತಿಯ ನಡವಳಿಕೆಯಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬಂದಿದೆ ಎಂಬುದಕ್ಕೆ ಬಲವಾದ ಸಾಕ್ಷಿಗಳಿದ್ದರೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಬಾಕಿ ಇರುವ ತನಿಖೆ ಅನರ್ಹತೆಗೆ ಕಾರಣವಲ್ಲ!

ಕೇವಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂಬ ಕಾರಣಕ್ಕಾಗಲಿ ಅಥವಾ ತನಿಖೆ ಬಾಕಿ ಇದೆ ಎಂಬ ಕಾರಣಕ್ಕಾಗಲಿ ಯಾವುದೇ ಅಭ್ಯರ್ಥಿಯನ್ನು ನೇರವಾಗಿ ಸರ್ಕಾರಿ ನೌಕರಿಯಿಂದ ಅನರ್ಹಗೊಳಿಸುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಕೆಲವು ದಿನಗಳ ಹಿಂದೆ ಸರ್ಕಾರಿ ನೇಮಕಾತಿಗಳಲ್ಲಿ ಪಾತ್ರ ಪರಿಶೀಲನೆಗೆ ಸಂಬಂಧಿಸಿದಂತೆ ಹೊಸ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಇದರ ಬೆನ್ನಲ್ಲೇ ಈ ಕುರಿತು ಕೆಲವು ಗೊಂದಲಗಳು ಮೂಡಿದ್ದವು. ಇದನ್ನು ನಿವಾರಿಸುವ ಸಲುವಾಗಿ ಸರ್ಕಾರ ಮತ್ತಷ್ಟು ಸ್ಪಷ್ಟನೆ ನೀಡಿದ್ದು, ಯಾವುದೇ ಮುನ್ಸೂಚನೆ ಇಲ್ಲದೆ ಕೇವಲ ನಡೆಯುತ್ತಿರುವ ತನಿಖೆ ಅಥವಾ ಪೊಲೀಸ್ ಕೇಸ್‌ನ ಆಧಾರದ ಮೇಲಷ್ಟೇ ಯಾರೊಬ್ಬರ ಉದ್ಯೋಗದ ಅರ್ಜಿಯನ್ನು ನೇರವಾಗಿ ತಿರಸ್ಕರಿಸುವಂತಿಲ್ಲ ಎಂದು ತಿಳಿಸಿದೆ.

30 ದಿನಗಳೊಳಗೆ ಪರಿಶೀಲನಾ ವರದಿ ಸಲ್ಲಿಕೆ!

ಪರಿಷ್ಕೃತ ಕಾರ್ಯವಿಧಾನದ ಪ್ರಕಾರ, ಪೊಲೀಸರು ಕೇವಲ 30 ದಿನಗಳ ಒಳಗೆ ಪಾತ್ರ ಪರಿಶೀಲನಾ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ. ರಾಜ್ಯ ಸರ್ಕಾರಿ ಇಲಾಖೆಗಳು ಮತ್ತು ಈ ಆದೇಶದ ವ್ಯಾಪ್ತಿಗೆ ಬರುವ ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ನೇರ ನೇಮಕಾತಿ ಮೂಲಕ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಾಲಮಿತಿಯೊಳಗೆ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಲು ಈ ಕ್ರಮವನ್ನು ತರಲಾಗಿದೆ.

ಅಲ್ಲದೆ, ಈಗಾಗಲೇ ಸರ್ಕಾರಿ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಹೊಸದಾಗಿ ಇಂತಹ ಯಾವುದೇ ಪಾತ್ರ ಪರಿಶೀಲನಾ ಪ್ರಕ್ರಿಯೆಗೆ ಒಳಗಾಗುವ ಅಗತ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ, ಅಗತ್ಯವಿದ್ದಲ್ಲಿ ಅವರ ಹಿಂದಿನ ಇಲಾಖೆಗಳಿಂದ ಅವರ ನಡವಳಿಕೆ ಮತ್ತು ಸೇವಾ ದಾಖಲೆಗಳ ಕುರಿತಾದ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಸರ್ಕಾರ ಹೇಳಿದೆ(ಏಜೆನ್ಸೀಸ್​).