Shashi Tharoor | ಕಾಂಗ್ರೆಸ್​​ ಸಂಸದ ತರೂರ್  
ದೇಶ

ನೇಪಾಳಕ್ಕೆ ಭಾರತದ ನೆರವು ಸ್ವಾಗತಾರ್ಹ, ಆದರೆ 2016ರ ಶೈಲಿಯ ಅಹಂಕಾರ ಬೇಡ!: ಮಾಧ್ಯಮಗಳಿಗೆ ಶಶಿ ತರೂರ್ ಕಿವಿಮಾತು! | Shashi Tharoor

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಸಂಕಷ್ಟಕ್ಕೊಳಗಾದ ನೆರೆದೇಶಕ್ಕೆ ಭಾರತ ಸರ್ಕಾರ ತಕ್ಷಣವೇ ನೀಡಿರುವ ಪರಿಹಾರದ ನೆರವನ್ನು ಕಾಂಗ್ರೇಸ್ ಸಂಸದ ಶಶಿ ತರೂರ್ (Shashi Tharoor) ಸ್ವಾಗತಿಸಿದ್ದು, ಆದರೆ, ಭಾರತೀಯ ಮಾಧ್ಯಮಗಳು 2016ರ ಮಾದರಿಯಲ್ಲಿ ನೀಡುತ್ತಿರುವ ನೆರವಿನ ಬಗ್ಗೆ ಅಹಂಕಾರದ ಪ್ರಚಾರ ಮಾಡುವುದರ ವಿರುದ್ಧ ಅವರು ಎಚ್ಚರಿಕೆ ನೀಡಿದ್ದಾರೆ.

ಕಾಠ್ಮಂಡುವಿನಲ್ಲಿ ನಡೆದ ಎನ್‌ಡಿಟಿವಿ ವರ್ಲ್ಡ್ ಅನ್ವೇಷಣ ಶೃಂಗಸಭೆಯಲ್ಲಿ ಮಾತನಾಡಿದ ಶಶಿ ತರೂರ್, 2016ರ ಘಟನೆಯು ಭಾರತ ಮತ್ತು ನೇಪಾಳದ ರಾಜತಾಂತ್ರಿಕ ಬಾಂಧವ್ಯದಲ್ಲೇ ಅತ್ಯಂತ ಕರಾಳ ಕ್ಷಣವಾಗಿತ್ತು ಎಂದು ಸ್ಮರಿಸಿದರು. ನೇಪಾಳದ ವಿಷಯದಲ್ಲಿ ಭಾರತ ತನ್ನ ನಡೆ ಹಾಗೂ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು ಎಂದು ತಾವು ಸದಾ ಪ್ರತಿಪಾದಿಸುತ್ತಿರುವುದಾಗಿ ಹೇಳಿದರು.
2016ರಲ್ಲಿ ನೇಪಾಳದಲ್ಲಿ ಭೀಕರ ಭೂಕಂಪ ಸಂಭವಿಸಿದಾಗ, ಭಾರತೀಯ ಮಾಧ್ಯಮಗಳ ಒಂದು ವಿಭಾಗವು ಪರಿಹಾರ ಕಾರ್ಯಾಚರಣೆಯನ್ನು ಬಿಂಬಿಸಿದ ರೀತಿ ನೇಪಾಳಿ ಜನರಲ್ಲಿ ತೀವ್ರ ಆಕ್ರೋಶ ಮತ್ತು ಅಸಮಾಧಾನಕ್ಕೆ ಕಾರಣವಾಗಿತ್ತು. ಅಂದಿನ ಮಾಧ್ಯಮಗಳ ವರದಿ ಶೈಲಿಯನ್ನು ಸಮಸ್ಯಾತ್ಮಕ ಎಂದು ಕರೆದ ತರೂರ್, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರು ತಾವೇ ನೀಡುತ್ತಿರುವ ನೆರವಿನ ಬಗ್ಗೆ ಅವರಿಗೆ ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ ಎಂದರು.
ಭೂಕಂಪದ ಸಮಯದಲ್ಲಿ ಭಾರತವು ಶ್ಲಾಘನೀಯ ನೆರವು ನೀಡಿತ್ತು. ಆದರೆ ಅದನ್ನು ಮಾಧ್ಯಮಗಳು ಬಿಂಬಿಸಿದ ರೀತಿ ಹಾಗೂ ಅಹಂಕಾರದ ಪ್ರದರ್ಶನವು ಅತ್ಯಂತ ಕೆಟ್ಟ ಅಭಿರುಚಿಯಿಂದ ಕೂಡಿತ್ತು. ಅದು ಬಾಂಧವ್ಯದ ಕನಿಷ್ಠ ಮಟ್ಟವಾಗಿತ್ತು. ಭಾರತ ನೀಡಿದ ನೆರವು ನೈಜವಾಗಿದ್ದರೂ, ಮಾಧ್ಯಮಗಳ ಕವರೇಜ್ ಸಮಸ್ಯಾತ್ಮಕವಾಗಿತ್ತು. ಸರ್ಕಾರದಷ್ಟೇ ಮಾಧ್ಯಮಗಳಿಗೂ ಈ ದ್ವಿಪಕ್ಷೀಯ ಸಂಬಂಧದ ಬಗ್ಗೆ ಸೂಕ್ಷ್ಮತೆ ಇರಬೇಕಾಗುತ್ತದೆ ಎಂದು ತರೂರ್ ಅಭಿಪ್ರಾಯಪಟ್ಟರು.
ದಿಢೀರ್ ಪ್ರವಾಹದ ದುರಂತಕ್ಕೆ ಭಾರತ ಸರ್ಕಾರ ತಕ್ಷಣವೇ ಸ್ಪಂದಿಸಿರುವುದನ್ನು ಶ್ಲಾಘಿಸಿದ ತರೂರ್, ನೆರೆಹೊರೆಯವರು ಮಾಡುವ ಕೆಲಸವೇ ಇದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೂ ಹೆಚ್ಚಿನ ಪರಿಹಾರ ಸಿಗಲಿದೆ ಹಾಗೂ ಸರ್ಕಾರ ಅಗತ್ಯವಿರುವುದನ್ನೆಲ್ಲಾ ಮಾಡಲಿದೆ ಎಂಬ ಭರವಸೆ ನನಗಿದೆ. ನಾವು ನೇಪಾಳಕ್ಕೆ ಅತ್ಯಂತ ನಿಕಟ ನೆರೆಹೊರೆಯವರಾಗಿದ್ದು, ಅವರೊಂದಿಗೆ ಗಟ್ಟಿಯಾಗಿ ನಿಲ್ಲುತ್ತೇವೆ ಎಂದರು.

ಹಿಮಾಲಯನ್ ಬ್ಲಂಡರ್ ಎಂದ ತರೂರ್

ನೇಪಾಳದ ವಿಚಾರದಲ್ಲಿ ಭಾರತದ ಮನೋಭಾವ ಬದಲಾಗಬೇಕು ಎಂದ ಕಾಂಗ್ರೆಸ್​ ಸಂಸದರು, ನವದೆಹಲಿಯು ನೇಪಾಳವನ್ನು ಒಂದು ಸ್ವತಂತ್ರ, ಸಾರ್ವಭೌಮ ಮತ್ತು ಸಮಾನ ದೇಶವಾಗಿ ಕಾಣುವುದು ಅತ್ಯಂತ ಮುಖ್ಯ. 2016ರಲ್ಲಿ ನೇಪಾಳದ ಮೇಲೆ ಹೇರಲಾದ ಘೋಷಿತವಲ್ಲದ ಆರ್ಥಿಕ ದಿಗ್ಬಂಧನವನ್ನು ಹಿಮಾಲಯನ್ ಬ್ಲಂಡರ್ ಎಂದು ಕರೆದ ತರೂರ್, ಅದು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ತೀವ್ರ ಹಾನಿ ಉಂಟುಮಾಡಿತ್ತು ಎಂದರು.
ನೇಪಾಳದ ಕಡೆಗಿನ ಭಾರತದ ಧೋರಣೆ ಬದಲಾಗಬೇಕು ಎಂದು ನಾನು ಸದಾ ವಾದಿಸುತ್ತ ಬಂದಿದ್ದೇನೆ. 2016ರ ಆರ್ಥಿಕ ದಿಗ್ಬಂಧನವನ್ನು ನಾನು ಬಹಿರಂಗವಾಗಿಯೇ ಟೀಕಿಸಿದ್ದೆ. ಅದೊಂದು ಬೃಹತ್ ಪ್ರಮಾದವಾಗಿತ್ತು. ಭಾರತ ಸರ್ಕಾರಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದರೂ, ಅದು ನಮ್ಮ ಸಂಬಂಧವನ್ನು ಹಾಳುಗೆಡವಿತು. ಸಾರ್ವಭೌಮ ಮತ್ತು ಸಮಾನ ದೇಶಕ್ಕೆ ನೀಡಬೇಕಾದ ಗೌರವವನ್ನು ನಾವು ನೇಪಾಳಕ್ಕೆ ನೀಡಬೇಕಿದೆ ಎಂದು ತಿಳಿಸಿದರು.
ಸಾಂಸ್ಕೃತಿಕ ಹಾಗೂ ಐತಿಹಾಸಿಕ ಬಾಂಧವ್ಯಗಳು ಮುಖ್ಯವಾದರೂ, ಸಂಬಂಧಗಳು ಅದನ್ನೂ ಮೀರ ಬೆಳೆಯಬೇಕು ಎಂದ ಅವರು, ರೋಟಿ-ಬೇಟಿ (ಪರಸ್ಪರ ಕೌಟುಂಬಿಕ) ಸಂಬಂಧ ಮುಖ್ಯ ನಿಜ, ಆದರೆ ರಾಜತಾಂತ್ರಿಕ ಬಾಂಧವ್ಯ ಅದಕ್ಕಿಂತಲೂ ಮುಂದೆ ಸಾಗಬೇಕು. ಗೌರವಯುತ ಮಾತುಕತೆಯ ಪ್ರಕ್ರಿಯೆಯು ಸಂಬಂಧವನ್ನು ಮುನ್ನಡೆಸಲು ಮೂಲಭೂತವಾಗಿದೆ. ಅವರ ಅಭಿಪ್ರಾಯಗಳು ನಮಗೆ ಮುಖ್ಯ ಎಂಬುದನ್ನು ನಾವು ತೋರಿಸಿಕೊಡಬೇಕು ಎಂದರು.
ಅದೇ ಸಮಯದಲ್ಲಿ, ಪ್ರಸ್ತುತ ಇರುವ ದ್ವಿಪಕ್ಷೀಯ ಸಂಬಂಧವನ್ನು ಶ್ಲಾಘಿಸಿದ ಶಶಿ ತರೂರ್, ಕೆಲವು ವರ್ಷಗಳ ಹಿಂದಕ್ಕೆ ಹೋಲಿಸಿದರೆ ಇಂದು ತಮಗೆ ಯಾವುದೇ ಆತಂಕವಿಲ್ಲ ಎಂದರು. ನಾವು ಇಂದು ಉತ್ತಮ ಸ್ಥಾನದಲ್ಲಿದ್ದೇವೆ. ಕೆಲವು ವರ್ಷಗಳಿಗೆ ಹೋಲಿಸಿದರೆ ಸಂಬಂಧದ ಕುರಿತು ನನಗೆ ಈಗ ಚಿಂತೆ ಕಡಿಮೆಯಾಗಿದೆ. ಪ್ರಸ್ತುತ ಎರಡೂ ದೇಶಗಳ ನಾಯಕರ ಧೋರಣೆ ಸಕಾರಾತ್ಮಕವಾಗಿದ್ದು, ಬುಧವಾರದ ಪ್ರವಾಹದ ನಂತರ ಭಾರತ ತಕ್ಷಣವೇ ಕಳುಹಿಸಿದ ಪರಿಹಾರ ಸಾಮಗ್ರಿಗಳೇ ಇದಕ್ಕೆ ಇತ್ತೀಚಿನ ಸಾಕ್ಷಿಯಾಗಿದೆ. ಎರಡೂ ದೇಶಗಳ ಹೆಚ್ಚಿನ ಜನರು ಈಗ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ಕಾಂಗ್ರೆಸ್​ ನಾಯಕ ತಿಳಿಸಿದ್ದಾರೆ(ಏಜೆನ್ಸೀಸ್​).