ನಿತೀಶ್ ಕುಮಾರ್ ತಮ್ಮ ರಾಜೀನಾಮೆ ಪತ್ರ ಸಲ್ಲಿಸುತ್ತಿರುವುದು.
ಪಾಟ್ನಾ: ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಕಳೆದ 20ಕ್ಕೂ ಹೆಚ್ಚು ವರ್ಷಗಳ ಕಾಲ ಬಿಹಾರ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಅವರು(Nitish Kumar resigns), ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಕಾರಣ ಇಂದು(ಏ. 14) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಧ್ಯಾಹ್ನ 3.15ರ ಸುಮಾರಿಗೆ ಬಿಹಾರದ ಲೋಕಭವನದಲ್ಲಿ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಬಳಿಕ ತಮ್ಮಿಂದ ಅಧಿಕಾರ ವಹಿಸಿಕೊಳ್ಳಲಿರುವ ಹೊಸ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಇನ್ನೂ ರಾಜೀನಾಮೆ ಸಲ್ಲಿಸಿದ ಬಳಿಕ ಎಕ್ಸ್ನಲ್ಲಿ ಪ್ರತಿಕ್ತಿಯೆ ನೀಡಿರುವ ನಿತೀಶ್ ಕುಮಾರ್, ಇಂದು ನಾನು ಸಿಎಂ ಹುದ್ದೆಯನ್ನು ತೊರೆಯಲು ನಿರ್ಧರಿಸಿದ್ದೆ, ಹೀಗಾಗಿ ಬೆಳಗ್ಗೆ ಸಂಪುಟ ಸಭೆಯ ನಂತರ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇನೆ. ಈಗ ಹೊಸ ಸರ್ಕಾರ ಮುಂದಿನ ಕೆಲಸವನ್ನು ನೋಡಿಕೊಳ್ಳುತ್ತದೆ. ಹೊಸ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ಇರುತ್ತದೆ. ಮುಂದೆಯೂ ಸಹ, ಬಹಳಷ್ಟು ಉತ್ತಮ ಕೆಲಸಗಳನ್ನು ಮಾಡಲಾಗುವುದು ಮತ್ತು ಬಿಹಾರವು ಹೆಚ್ಚಿನ ಪ್ರಗತಿ ಸಾಧಿಸುತ್ತದೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಬಿಜೆಪಿ ಮುಂದಿನ ಸರ್ಕಾರ ರಚಿಸಲಿದ್ದು, ಉತ್ತರಾಧಿಕಾರಿ ಹೆಸರು ಘೋಷಣೆ ಚಟುವಟಿಕೆಯನ್ನು ಮುಂದುವರಿಸಿದೆ. ಪಾಟ್ನಾದ ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಸಭೆ ನಡೆಯುತ್ತಿದ್ದು, ಹೆಸರನ್ನು ಅಂತಿಮಗೊಳಿಸಲಿದ್ದು, ಸಂಜೆ 4 ಗಂಟೆ ನಡೆಯುವ ಎನ್ಡಿಎ ಸಭೆಯಲ್ಲಿ ಸಿಎಂ ಅಭ್ಯರ್ಥಿ ಹೆಸರು ಘೋಷಿಸುವ ಸಾಧ್ಯತೆ ಇದೆ. ನಾಳೆ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಸಾಮ್ರಾಟ್ ಚೌಧರಿ ಹೆಸರು ನೂತನ ಸಿಎಂ ಸಾಧ್ಯತೆ
ಜೆಡಿಯು ನೇತೃತ್ವದ ಸರ್ಕಾರದಲ್ಲಿ ಬಹಳ ಹಿಂದಿನಿಂದಲೂ ಕಿರಿಯ ಪಾಲುದಾರನಾಗಿದ್ದ ಬಿಜೆಪಿ, ಈ ಬಾರಿ ಮೊದಲ ಬಾರಿಗೆ ತನ್ನದೇ ಮುಖ್ಯಮಂತ್ರಿಯನ್ನು ಹೊಂದಲಿದೆ. ಹಾಲಿ ಡಿಸಿಎಂ ಸಾಮ್ರಾಟ್ ಚೌಧರಿ ಹೆಸರು ಸಿಎಂ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದು, ಸ್ವತಃ ಸಿಎಂ ನಿತೀಶ್ ಕುಮಾರ್ ಅವರೇ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ.
57 ವರ್ಷದ ಸಾಮ್ರಾಟ್ ಚೌಧರಿ, ರಾಜ್ಯದ ಪ್ರಮುಖ ಇತರ ಹಿಂದುಳಿದ ವರ್ಗ (ಒಬಿಸಿ) ಸಮುದಾಯವಾದ ಕೊಯೇರಿ ಅಥವಾ ಕುಶ್ವಾಹ ಜಾತಿಗೆ ಸೇರಿದವರಾಗಿದ್ದು, ಹಿಂದುಳಿದ ಜಾತಿಗಳಲ್ಲಿ ಯಾದವರ ನಂತರ ಕುಶ್ವಾಹ ಸಮುದಾಯವು ಅತಿ ದೊಡ್ಡದಾಗಿದೆ. ಮೂಲಗಳ ಪ್ರಕಾರ ಜೆಡಿಯು ಈ ಜಾತಿಯ ಗುಂಪಿನಿಂದಲೇ ಮುಖ್ಯಮಂತ್ರಿಯನ್ನು ನೇಮಿಸುವಂತೆ ಬಿಜೆಪಿಯನ್ನು ಕೇಳಿಕೊಂಡಿದೆ ಎನ್ನಲಾಗಿದೆ (ಏಜೆನ್ಸೀಸ್).