Rohini Acharya | ರೋಹಿಣಿ ಆಚಾರ್ಯ 
ದೇಶ

ನಿತೀಶ್ ಈಗ ಬಿಜೆಪಿಯ ಕೈಗೊಂಬೆ.. ಈ ಗತಿಗೆ 2 ವರ್ಷದ ಹಿಂದಿನ ಆ ನಿರ್ಧಾರವೇ ಕಾರಣ ಎಂದ ಲಾಲು ಪುತ್ರಿ! | Rohini Acharya

ಪಟನಾ: ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ (Rohini Acharya) ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದು, ಪದೇ ಪದೇ ಮಿತ್ರಪಕ್ಷಗಳಿಗೆ ದ್ರೋಹ ಬಗೆಯುವ ನಿತೀಶ್​, ಇಂದು ತಮ್ಮದೇ ನಿರ್ಧಾರಗಳ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರೋಹಿಣಿ, ನಿತೀಶ್​ರನ್ನು ಬಿಜೆಪಿಯ ಕೈಗೊಂಬೆ ಎಂದು ಕರೆದಿದ್ದಾರೆ. ಕೇಸರಿ ಪಕ್ಷ ನಿತೀಶ್ ಕುಮಾರ್ ಅವರನ್ನು ಕೆಟ್ಟದಾಗಿ ನಡೆಸಿಕೊಂಡಿದೆ. ಅಷ್ಟೇ ಅಲ್ಲದೆ, ಅವರನ್ನು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಬಲವಂತಪಡಿಸುವ ಮೂಲಕ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಿತೀಶ್ ಕುಮಾರ್ ಜಿ, ನಿಮ್ಮ ಸ್ವಂತ ಹೀನ ಸ್ಥಿತಿಗೆ ನೀವೇ ಜವಾಬ್ದಾರರು. ಮಿತ್ರಪಕ್ಷಗಳಿಗೆ ನಿರಂತರ ದ್ರೋಹ ಬಗೆದ ಕಾರಣ ನೀವೇ ನಿಮ್ಮನ್ನು ಪ್ರಪಾತಕ್ಕೆ ತಳ್ಳಿಕೊಂಡಿದ್ದೀರಿ. ಇಂದು ನಿಮಗೆ ಏನಾಗುತ್ತಿದೆಯೋ, ಅದನ್ನು ಅನುಭವಿಸಲು ನೀವು ಅರ್ಹರು ಎಂದು ರೋಹಿಣಿ ಆಚಾರ್ಯ ಟೀಕಿಸಿದ್ದಾರೆ.
ಕಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಸೋಲಿನ ನಂತರ ರಾಜಕೀಯದಿಂದ ದೂರವಿದ್ದ ರೋಹಿಣಿ ಆಚಾರ್ಯ, ಈಗ ನಿತೀಶ್ ಅವರ ನಿರ್ಗಮನದ ಹೊತ್ತಲ್ಲೇ ಮತ್ತೆ ಗುಡುಗಿರುವುದು ಬಿಹಾರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.
2024 ರ ಜನವರಿ 28 ರಂದು ನಿತೀಶ್ ಕುಮಾರ್ ಮಹಾಘಟಬಂಧನ್ ತೊರೆದು ಪಲ್ಟಿ ಹೊಡೆದಾಗಲೇ ಅವರ ರಾಜಕೀಯ ಭವಿಷ್ಯ ನಿರ್ಧರಿತವಾಗಿತ್ತು, ಕುರ್ಚಿಯ ಮೇಲಿನ ಅತಿಯಾದ ವ್ಯಾಮೋಹವೇ ಅವರನ್ನು ಇಂದು ಬಿಜೆಪಿಯ ಕೈಗೊಂಬೆಯನ್ನಾಗಿ ಮಾಡಿದೆ. ತನ್ನ ಮಿತ್ರಪಕ್ಷಗಳ ರಾಜಕೀಯ ಸಮಾಧಿಗಳನ್ನು ತೋಡಿ ಹೂಳುವುದರಲ್ಲಿ ಬಿಜೆಪಿ ಕುಖ್ಯಾತವಾಗಿದೆ. ಅಂತಹ ಪಕ್ಷದ ಮಡಿಲಲ್ಲಿ ನಿತೀಶ್ ಹೋಗಿ ಕುಳಿತಿದ್ದಾರೆ ಎಂದು ರೋಹಿಣಿ ಆಚಾರ್ಯ ವ್ಯಂಗ್ಯವಾಡಿದ್ದಾರೆ.

ಮಹಾರಾಷ್ಟ್ರ ಮಾಡೆಲ್​

2022ರಲ್ಲಿ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಮೂಲಕ ಶಿವಸೇನೆಯನ್ನು ವಿಭಜಿಸಿ ಉದ್ಧವ್ ಠಾಕ್ರೆ ಸರ್ಕಾರವನ್ನು ಬಿಜೆಪಿ ಹೇಗೆ ಪತನಗೊಳಿಸಿತು ಎಂಬುದನ್ನು ನಿತೀಶ್ ಗಮನಿಸಬೇಕಿತ್ತು. ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ಹೇಗೆ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಮಹಾರಾಷ್ಟ್ರವೇ ಸಾಕ್ಷಿ ಎಂದು ರೋಹಿಣಿ ನೆನಪಿಸಿದ್ದಾರೆ.

ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ್ರಾ ನಿತೀಶ್​

ಬಿಜೆಪಿಯೊಂದಿಗೆ ಮತ್ತೆ ಕೈಜೋಡಿಸಬೇಡಿ ಎಂದು ನಿತೀಶ್ ಕುಮಾರ್ ಅವರ ಹಳೆಯ ಸಮಾಜವಾದಿ ಒಡನಾಡಿಗಳು ಎಚ್ಚರಿಸಿದ್ದರು. ಆದರೆ, ಆ ಎಲ್ಲಾ ಎಚ್ಚರಿಕೆಗಳನ್ನು ಗಾಳಿಗೆ ತೂರಿದ ನಿತೀಶ್ ಕುಮಾರ್, ಇಂದು ಸ್ವತಃ ತಾವೇ ಅಗೆದ ಸಮಾಧಿಯೊಳಗೆ ಬಿದ್ದಿದ್ದಾರೆ ಎಂದು ರೋಹಿಣಿ ಆಚಾರ್ಯ ಟೀಕಿಸಿದ್ದಾರೆ(ಏಜೆನ್ಸೀಸ್​).