Nitish Kumar files Nomination | ರಾಜ್ಯಸಭಾ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸಿದ ಸಿಎಂ ನಿತೀಶ್ ಕುಮಾರ್
ಪಟನಾ: ಬಿಹಾರ ಸಿಎಂ ನಿತೀಶ್ ಕುಮಾರ್ ಗುರುವಾರ (ಮಾ.5) ರಾಜ್ಯಸಭಾ ಚುನಾವಣೆಗೆ ತಮ್ಮ ನಾಮಪತ್ರವನ್ನು (Nitish Kumar files Nomination) ಸಲ್ಲಿಸಿದ್ದು, ಈ ಮೂಲಕ ನಿನ್ನೆಯಿಂದ ಹಬ್ಬಿದ್ದ ಊಹಾಪೋಹಗಳಿಗೆ ತೆರೆಬಿದ್ದಿದಂತಾಗಿದೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವುದು ಸದ್ಯದ ಕುತೂಹಲ.
ನಾಮಪತ್ರ ಸಲ್ಲಿಕೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಷಾ, ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತು ಎನ್‌ಡಿಎ ಮೈತ್ರಿಕೂಟದ ಅನೇಕ ನಾಯಕರು ಉಪಸ್ಥಿತರಿದ್ದರು.
ಮಾರ್ಚ್ 16 ರ ರಾಜ್ಯಸಭಾ ಚುನಾವಣೆಯವರೆಗೂ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಜೆಡಿಯು ಮೂಲಗಳು ತಿಳಿಸಿವೆ. ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಅವರು ತಮ್ಮ ಸುದೀರ್ಘ ರಾಜಕೀಯ ಜೀವನಕ್ಕೆ ಮತ್ತೊಂದು ಮೈಲಿಗಲ್ಲನ್ನು ಸೇರ್ಪಡೆಗೊಳಿಸಲಿದ್ದಾರೆ. ನಿತೀಶ್ ಈ ಹಿಂದೆ ಬಿಹಾರ ವಿಧಾನಸಭೆ, ವಿಧಾನ ಪರಿಷತ್ತು ಮತ್ತು ಲೋಕಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಈಗ ಸಂಸತ್ತಿನ ಮೇಲ್ಮನೆಗೆ ಪ್ರವೇಶಿಸುವುದರಿಂದ ಅವರು ಬಿಹಾರ ವಿಧಾನಸಭೆಯ ಎರಡೂ ಸದನಗಳು ಮತ್ತು ಸಂಸತ್ತಿನ ಎರಡೂ ಸದನಗಳ ನಾಲ್ಕು ಶಾಸಕಾಂಗ ವೇದಿಕೆಗಳ ಭಾಗವಾಗಿದ್ದ ಅಪರೂಪದ ನಾಯಕರಲ್ಲಿ ಸ್ಥಾನ ಪಡೆಯಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಜೆಡಿಯು ತಡರಾತ್ರಿ ಸರಣಿ ಸಭೆಗಳನ್ನು ನಡೆಸಿದ್ದು, ಈ ವೇಳೆ ನೂತನ ಸರ್ಕಾರ ರಚನೆಯ ರೂಪುರೇಷೆಗಳ ಚರ್ಚೆಯಾಗಿರುವ ಸಾಧ್ಯತೆ ಇದೆ.
ರಾಜ್ಯಸಭಾ ಫೈಟ್
ಬಿಹಾರದ ಐದು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಗುರುವಾರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿವೆ. ಬಿಜೆಪಿಯಿಂದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಮತ್ತು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವೇಶ್ ಕುಮಾರ್ ಅವರನ್ನು ಅಭ್ಯರ್ಥಿಗಳಾಗಿಸಿದೆ.
ರಾಷ್ಟ್ರೀಯ ಲೋಕ ಮೋರ್ಚಾದ ಅಧ್ಯಕ್ಷ ಉಪೇಂದ್ರ ಕುಶ್ವಾಹ ಕೂಡ ಮತ್ತೊಂದು ಅವಧಿಗೆ ಮೈತ್ರಿಕೂಟದ ಬೆಂಬಲದೊಂದಿಗೆ ಸ್ಪರ್ಧಿಸುತ್ತಿದ್ದು, ಜೆಡಿಯುನಿಂದ ಕೇಂದ್ರ ಸಚಿವ ರಾಮನಾಥ್ ಠಾಕೂರ್ ಸಹ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ನಿತೀಶ್ ಕುಮಾರ್ ಪೋಸ್ಟ್
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ನಿತೀಶ್, ಎರಡು ದಶಕಗಳಿಗೂ ಹೆಚ್ಚು ಕಾಲ ರಾಜ್ಯಕ್ಕೆ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟಿದ್ದಕ್ಕಾಗಿ ರಾಜ್ಯದ ಜನರಿಗೆ ಧನ್ಯವಾದ ಅರ್ಪಿಸಿದರು. ಎರಡು ದಶಕಗಳಿಗೂ ಹೆಚ್ಚು ಕಾಲ, ನೀವು ನಿರಂತರವಾಗಿ ನನ್ನ ಮೇಲೆ ನಿಮ್ಮ ನಂಬಿಕೆ ಮತ್ತು ಬೆಂಬಲವನ್ನು ಇರಿಸಿದ್ದೀರಿ. ಆ ನಂಬಿಕೆಯ ಬಲದ ಮೇಲೆ ನಾವು ಬಿಹಾರ ಮತ್ತು ನಿಮ್ಮೆಲ್ಲರಿಗೂ ಸಂಪೂರ್ಣ ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದ್ದೇನೆ ಎಂದು ನಿತೀಶ್ ಕುಮಾರ್ ಬರೆದುಕೊಂಡಿದ್ದಾರೆ.
ಈ ಹಿಂದೆಯೂ ಸಹ ಅನೇಕ ಸಲ ನಿಮಗೆ ನನ್ನ ಕೃತಜ್ಞತೆ ಸಲ್ಲಿಸಿದ್ದೇನೆ, ನನ್ನ ಸಂಸದೀಯ ಪ್ರಯಾಣದ ಆರಂಭದಿಂದಲೂ, ಬಿಹಾರ ವಿಧಾನಸಭೆಯ ಎರಡೂ ಸದನಗಳ ಮತ್ತು ಸಂಸತ್ತಿನ ಎರಡೂ ಸದನಗಳ ಸದಸ್ಯನಾಗಬೇಕೆಂಬ ಬಯಕೆ ಮನಸ್ಸಲ್ಲಿ ಮನೆ ಮಾಡಿತ್ತು, ಅದಕ್ಕನುಗುಣವಾಗಿ ಈ ಬಾರಿಯ ರಾಜ್ಯಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು(ಏಜೆನ್ಸೀಸ್).