Sagar Tragedy > ಮಧ್ಯಪ್ರದೇಶದ ಸಾಗರ್‌ನಲ್ಲಿ ನಕಲಿ ಮದ್ಯ ಸೇವಿಸಿ 9 ಮಂದಿ ಸಾವು (ಪ್ರಾತಿನಿಧಿಕ ಚಿತ್ರ) 
ದೇಶ

ಮಧ್ಯಪ್ರದೇಶದ ಸಾಗರ್‌ನಲ್ಲಿ ನಕಲಿ ಮದ್ಯ ಸೇವಿಸಿ 9 ಮಂದಿ ಸಾವು: ಪೊಲೀಸರಿಂದ ತನಿಖೆ ಚುರುಕು | Sagar Tragedy

ಇಂದೋರ್: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ( Sagar Tragedy) ನಕಲಿ ಮದ್ಯ ಸೇವಿಸಿ ಸುಮಾರು 11 ಜನರು ಸಾವನ್ನಪ್ಪಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ, ಗ್ರಾಮಗಳಲ್ಲಿ ವೈದ್ಯಕೀಯ ತಪಾಸಣೆ ಹಾಗೂ ತನಿಖೆಯನ್ನು ಚುರುಕುಗೊಳಿಸಿದೆ.
ಘಟನೆಯ ಕುರಿತಂತೆ ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ಮಾತನಾಡಿ, ಅಕ್ರಮ ಮದ್ಯ ಸೇವನೆಯಿಂದ ಜನರು ಅಸ್ವಸ್ಥಗೊಂಡು ಮೃತಪಡುತ್ತಿರುವ ವರದಿಗಳು ಬೆಳಿಗ್ಗೆಯಿಂದ ಬೃಂದಾವನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಿವಿಲ್ ಆಸ್ಪತ್ರೆಯಲ್ಲಿ ಸಮಗ್ರ ತನಿಖೆ ಹಾಗೂ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸೋಂಕಿತ ಅಥವಾ ಸಂಶಯಾಸ್ಪದ ಲಕ್ಷಣಗಳಿರುವ ಜನರನ್ನು ಪತ್ತೆಹಚ್ಚಲು ವೈದ್ಯರ ತಂಡಗಳು ಮತ್ತು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ನೌರಾ ಮತ್ತು ಘುಗ್ರು ಎಂಬ ಎರಡು ಗ್ರಾಮಗಳಲ್ಲಿ ಬೀಡುಬಿಟ್ಟಿದ್ದಾರೆ. ಕಳೆದ ಎರಡು ದಿನಗಳಲ್ಲಿ ಯಾವುದೇ ರೀತಿಯ ಮದ್ಯ ಸೇವಿಸಿದವರು ಅಥವಾ ಅನಾರೋಗ್ಯದ ಲಕ್ಷಣ ಹೊಂದಿರುವವರು ತಕ್ಷಣವೇ ಸಿವಿಲ್ ಆಸ್ಪತ್ರೆ ಅಥವಾ ಹತ್ತಿರದ ಆರೋಗ್ಯ ಕೇಂದ್ರಕ್ಕೆ ತೆರಳಿ ವೈದ್ಯಕೀಯ ತಪಾಸಣೆಗೆ ಒಳಗಾಗುವಂತೆ ಜಿಲ್ಲಾಧಿಕಾರಿ ವಿನಂತಿಸಿದ್ದಾರೆ. ತನಿಖೆ ಮತ್ತು ವೈದ್ಯಕೀಯ ವರದಿಗಳ ಆಧಾರದ ಮೇಲೆ ಮುಂದಿನ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.

70 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ವಿಸ್ಕಿ ಜಪ್ತಿ!...

ಇನ್ನೊಂದೆಡೆ, ಮಧ್ಯಪ್ರದೇಶದ ಅಬಕಾರಿ ಇಲಾಖೆಯು ಮದ್ಯ ನಿಷೇಧವಿರುವ ನೆರೆಯ ಗುಜರಾತ್‌ಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬೃಹತ್ ವಿಸ್ಕಿ ಶೇಖರಣೆಯನ್ನು ಜಪ್ತಿ ಮಾಡಿದೆ. ಇಂದೋರ್ ಬೈಪಾಸ್‌ನಲ್ಲಿ ತಡರಾತ್ರಿ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಕಂಟೇನರ್ ಟ್ರಕ್‌ನಿಂದ ಸುಮಾರು 70 ಲಕ್ಷ ರೂಪಾಯಿ ಮೌಲ್ಯದ 500 ಬಾಕ್ಸ್ ವಿಸ್ಕಿಯನ್ನು ವಶಪಡಿಸಿಕೊಂಡಿದ್ದು, ಚಾಲಕನನ್ನು ಬಂಧಿಸಿದ್ದಾರೆ.
ಪರಿಶೀಲನೆ ವೇಳೆ ಚಾಲಕ ಸೂಕ್ತ ಸಾರಿಗೆ ಪರವಾನಗಿ ತೋರಿಸಲು ವಿಫಲನಾಗಿದ್ದ. ವಶಪಡಿಸಿಕೊಂಡ ವಿಸ್ಕಿ ಬಾಕ್ಸ್‌ಗಳ ಮೇಲೆ ಚಂಡೀಗಢದಲ್ಲಿ ಮಾತ್ರ ಮಾರಾಟಕ್ಕೆ ಎಂದು ನಮೂದಿಸಲಾಗಿತ್ತು ಎಂದು ಸಹಾಯಕ ಜಿಲ್ಲಾ ಅಬಕಾರಿ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ತಿಳಿಸಿದ್ದಾರೆ. ಪೊಲೀಸ್ ಮತ್ತು ಅಬಕಾರಿ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಕಳ್ಳಸಾಗಣೆದಾರರು ಮಾರ್ಗ ಮತ್ತು ಚಾಲಕರನ್ನು ಆಗಾಗ್ಗೆ ಬದಲಾಯಿಸುತ್ತಾರೆ. ಈ ಜಾಲದ ಕುರಿತು ಸದ್ಯ ಸುದೀರ್ಘ ತನಿಖೆ ನಡೆಯುತ್ತಿದೆ(ಏಜೆನ್ಸೀಸ್​).