ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್
ಗುವಾಹಟಿ: ಕೆಲವೇ ತಿಂಗಳಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭೆ ಚುನಾವಣೆ ನಿಜವಾದ ಕಾಂಗ್ರೆಸ್ ಮತ್ತು ಹಳೆಯ ಕಾಂಗ್ರೆಸ್ ನಡುವಿನ ಹೋರಾಟ ಎಂದು ಬುಧವಾರ(ಫೆ. 18) ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಮತ್ತು ಲೋಕಸಭೆ ವಿರೋಧ ಪಕ್ಷದ ಉಪ ನಾಯಕ ಗೌರವ್ ಗೊಗೊಯ್(Gaurav Gogoi) ಬಣ್ಣಿಸಿದ್ದಾರೆ.
ಗುವಾಹಟಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಆಡಳಿತಾರೂಢ ಬಿಜೆಪಿಗೆ ಸೇರಿದವರು ತಮ್ಮ ರಾಜಕೀಯ ಪ್ರಯಾಣದಲ್ಲಿ ಅತ್ಯಲ್ಪವಾಗಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್ಗೆ ಕೈಕೊಟ್ಟು ಬಿಜೆಪಿ ಸೇರಲು ಮುಂದಾಗಿರುವ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಅವರಿಗೂ ಕೂಡ ಇದೇ ಗತಿ ಬರಲಿದೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಸೇರಿ ಈಗ ಅತ್ಯಲ್ಪರಾಗಿರುವವರಲ್ಲಿ ಸರ್ಬಾನಂದ ಸೋನೋವಾಲ್ ಮತ್ತು ಇನ್ನೂ ಅನೇಕರ ಉದಾಹರಣೆಯನ್ನು ನೀವು ನೋಡಬಹುದು. ಎಜಿಪಿ ಪಕ್ಷ ಅಳಿವಿನ ಅಂಚಿನಲ್ಲಿದೆ. ಭೂಪೇನ್ ಬೋರಾ ಬಿಜೆಪಿಗೆ ಸೇರುವ ಬಗ್ಗೆ ನಾನು ನಿರ್ದಿಷ್ಟವಾಗಿ ಮಾತನಾಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಪ್ರಸ್ತುತ ಬಿಜೆಪಿಯಲ್ಲಿ ಹಳೆಯ ಕಾಂಗ್ರೆಸ್ ನಾಯಕರು ತುಂಬಿದ್ದಾರೆ, ಅವರು ರಾಜ್ಯದಲ್ಲಿ ಕಾಂಗ್ರೆಸ್‌ನ 15 ವರ್ಷಗಳ ಆಳ್ವಿಕೆಯಲ್ಲಿ ಅತ್ಯಂತ ಭ್ರಷ್ಟರಾಗಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿಜವಾದ ಕಾಂಗ್ರೆಸ್ ಮತ್ತು ಹಳೆಯ ಕಾಂಗ್ರೆಸ್ ನಡುವೆ ಹೋರಾಟ ನಡೆಯಲಿದೆ ಎಂದು ಪ್ರತಿಪಾದಿಸಿದ್ದಾರೆ.
ಇನ್ನೂ ಸಿಎಂ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಬಿಜೆಪಿ ನಾಯಕ ಮತ್ತು ಅಸ್ಸಾಂನ ಜಿನ್ನಾ, ರಾಜಕಾರಣಿಗಳಿಗೆ ಹಿಂದೂ ಪ್ರಮಾಣಪತ್ರವನ್ನು ನೀಡುವುದನ್ನು ಬಿಡಬೇಕು ಎಂದಿದ್ದಾರೆ. ಕಾಂಗ್ರೆಸ್ ಒಂದು ಸಾಗರದಂತೆ, ನಾವೆಲ್ಲರೂ ಅದರಲ್ಲಿರುವ ನೀರಿನ ಹನಿಗಳು ಮಾತ್ರ. ನಮ್ಮ ಪಿತೃಗಳು ಮತ್ತು ಪೂರ್ವಜರು ಅಸ್ತಿತ್ವಕ್ಕೆ ಬರುವ ಮೊದಲೇ ಕಾಂಗ್ರೆಸ್ ಇತ್ತು. ಭೂಪೇನ್ ಬೋರಾ ಅವರ ನಿರ್ಗಮನ ಚುನಾವಣೆಯಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ (ಏಜೆನ್ಸೀಸ್).