ಸಾಂದರ್ಭಿಕ ಚಿತ್ರ 
ದೇಶ

ನವವಧುವಿನ ಸಿನಿಮಾ ಸ್ಟೈಲ್ ಕಿಡ್ನಾಪ್: ಪತಿಗೆ ಗನ್ ತೋರಿಸಿ ಪತ್ನಿಯನ್ನು ಹೊತ್ತೊಯ್ದ ಮಾಜಿ ಪ್ರಿಯಕರ! Bride kidnapping

ಪ್ರಮುಖ ಮುಖ್ಯಾಂಶಗಳು

  • ನವವಧುವನ್ನು ಅಪಹರಿಸಿದ ಮಾಜಿ ಪ್ರೀಯಕರ
  • ಪತಿ ಹಣೆಗೆ ಬಂದೂಕನ್ನು ತೋರಿಸಿ ಪ್ರೀಯತಮೆಯನ್ನು ಹೊತ್ತೊಯ್ದ ಭೂಪ
  • ಪೊಲೀಸರಿಂದ ಮುಂದುವರಿದ ಕಾರ್ಯಾಚರಣೆ
ಒಡಿಶಾ: ಮದುವೆ ಮುಗಿಸಿ ಹೊಸ ಜೀವನದ ಕನಸು ಕಾಣುತ್ತಾ ಪತಿಯೊಂದಿಗೆ ಅತ್ತೆ ಮನೆಗೆ ಹೊರಟಿದ್ದಳು ಆ ನವವಧು. ಆದರೆ, ಸಿನಿಮಾದಲ್ಲಿ ವಿಲನ್ ಎಂಟ್ರಿಯಂತೆ ಬಂದ ಮಾಜಿ ಪ್ರಿಯಕರನೊಬ್ಬ, ಪತಿಗೆ ಬಂದೂಕು ತೋರಿಸಿ ಎಲ್ಲರೆದುರೇ ವಧುವನ್ನು ಅಪಹರಿಸಿರುವ (Bride kidnapping) ಘಟನೆ ಒಡಿಶಾದ ಬೋಲಂಗಿರ್ ಜಿಲ್ಲೆಯಲ್ಲಿ ನಡೆದಿದೆ.

ಅಪಹರಣ ಹೇಗೆ ನಡೆಯಿತು?

ಬೋಲಂಗಿರ್ ಜಿಲ್ಲೆಯ ಹರಿಬಂಧು ಪಟೇಲ್ ಎಂಬ ಯುವಕ ಕಾಂತಾಮಲ್ ಪ್ರದೇಶದ ಯುವತಿಯನ್ನು ವರಿಸಿದ್ದ. ಭಾನುವಾರ (ಫೆ.22) ಮುಂಜಾನೆ ಮದುವೆ ಶಾಸ್ತ್ರಗಳೆಲ್ಲಾ ಮುಗಿದು, ವಧು-ವರರು ಕುಟುಂಬದವರೊಂದಿಗೆ ಕಾರಿನಲ್ಲಿ ವರನ ಮನೆಗೆ ಹಿಂತಿರುಗುತ್ತಿದ್ದರು. ದಾರಿ ಮಧ್ಯೆ ತರ್ಭಾ ರಸ್ತೆಯ ಬಡಬಂಧ ಎಂಬ ನಿರ್ಜನ ಪ್ರದೇಶಕ್ಕೆ ಬರುತ್ತಿದ್ದಂತೆ ಮೂವರು ವ್ಯಕ್ತಿಗಳು ಇವರ ವಾಹನವನ್ನು ಅಡ್ಡಗಟ್ಟಿದ್ದಾರೆ.
ಕಾರಿನಿಂದ ಇಳಿಯುತ್ತಿದ್ದಂತೆ ಆರೋಪಿಗಳು ವರ ಹರಿಬಂಧು ಪಟೇಲ್‌ಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ. ಅಸಹಾಯಕ ಪತಿ ಮತ್ತು ಮನೆಯವರ ಕಣ್ಣೆದುರೇ ವಧುವನ್ನು ಬಲವಂತವಾಗಿ ತನ್ನ ವಾಹನಕ್ಕೆ ಎಳೆದುಕೊಂಡ ಮಾಜಿ ಪ್ರಿಯಕರ, ಅಲ್ಲಿಂದ ಪರಾರಿಯಾಗಿದ್ದಾನೆ.

ಕಂಗಾಲಾದ ಪತಿಯಿಂದ ಪೊಲೀಸರಿಗೆ ದೂರು

ತನ್ನ ಕಣ್ಣೆದುರೇ ಹೆಂಡತಿಯನ್ನು ಅಪಹರಿಸಿದ್ದನ್ನು ಕಂಡು ದಿಗಿಲುಗೊಂಡ ಹರಿಬಂಧು ಪಟೇಲ್, ತಕ್ಷಣವೇ ತರ್ಭಾ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದಾರೆ. ನನ್ನ ಹೆಂಡತಿಯನ್ನು ಗನ್ ತೋರಿಸಿ ಅಪಹರಿಸಿದ್ದಾರೆ, ನಮಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಪೊಲೀಸರಿಂದ ಮುಂದುವರಿದ ಕಾರ್ಯಾಚರಣೆ

ಈ ಕುರಿತು ಪ್ರತಿಕ್ರಿಯಿಸಿರುವ ತರ್ಭಾ ಪೊಲೀಸ್ ಇನ್ಸ್‌ಪೆಕ್ಟರ್ ಅನಿತಾ ಕಿಡೋ, ವರನ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದು ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ನಡೆದ ಅಪಹರಣ ಎಂದು ಶಂಕಿಸಲಾಗಿದೆ. ಮಹಿಳೆಯನ್ನು ರಕ್ಷಿಸಲು ಮತ್ತು ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ,(ಏಜನ್ಸೀಸ್​).