ಲಖನೌ: ಮದುವೆಯಾದ ಕೆಲವೇ ತಿಂಗಳುಗಳಲ್ಲೇ ನವವಿವಾಹಿತೆಯೊಬ್ಬಳು ( Newlywed Death ) ಹೋಟೆಲ್ ಕೊಠಡಿಯ ಬಾಗಿಲಲ್ಲೇ ದಿಢೀರನೆ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.
ಮೃತಳನ್ನು ಮಧ್ಯಪ್ರದೇಶದ ವಿದಿಶಾ ಮೂಲದ ಮುಸ್ಕಾನ್ ಸಿಮೋಲಿಯಾ (28) ಎಂದು ಗುರುತಿಸಲಾಗಿದೆ. ಆಕೆಯ ಪತಿ ನೀಲೇಶ್ ವೃತ್ತಿಯಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿದ್ದು, ಹೋಟೆಲ್ನ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದ ಬೆನ್ನಲ್ಲೇ ಮಗಳ ಸಾವಿನಲ್ಲಿ ಗಂಡನ ಕೈವಾಡವಿದೆ ಹಾಗೂ ಇದು ಯೋಜಿತ ಕೊಲೆ ಎಂದು ಮೃತಳ ಪಾಲಕರು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಜೂನ್ 29 ರಂದು ಮುಸ್ಕಾನ್ ಮತ್ತು ನೀಲೇಶ್ ಅವರ ವಿವಾಹ ನೆರವೇರಿತ್ತು. ರೈಲ್ವೆ ಜೂನಿಯರ್ ಎಂಜಿನಿಯರ್ ಪರೀಕ್ಷೆಗೆ ಸಿದ್ಧತೆ ನಡೆಸಲು ಮುಸ್ಕಾನ್ ಅಕ್ಟೋಬರ್ 10 ರಂದು ತವರು ಮನೆಗೆ ಬಂದಿದ್ದರು. ಆದರೆ, ಅಕ್ಟೋಬರ್ 23 ರಂದು ಪತಿ ನೀಲೇಶ್, ತಮ್ಮ ಮನೆಗೆ ಕರೆದೊಯ್ಯುವುದಾಗಿ ಹೇಳಿ ಮುಸ್ಕಾನ್ ಅವರನ್ನು ಕರೆದುಕೊಂಡು ಹೋಗಿದ್ದ. ಆದರೆ, ತಮ್ಮ ಮನೆಗೆ ಹೋಗುವ ಬದಲಿಗೆ ಝಾನ್ಸಿಯ ಸಿಪ್ರಿಯಲ್ಲಿರುವ ಹೋಟೆಲ್ ಒಂದರಲ್ಲಿ ಕೊಠಡಿ ಬುಕ್ ಮಾಡಿದ್ದ. ಮರುದಿನ ಬೆಳಗ್ಗೆ ಮುಸ್ಕಾನ್ ದೇಹಸ್ಥಿತಿ ಹದಗೆಟ್ಟಿದೆ ಎಂದು ನೀಲೇಶ್ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರೂ, ಆಸ್ಪತ್ರೆಗೆ ತಲುಪುವಷ್ಟರಲ್ಲೇ ಮುಸ್ಕಾನ್ ಕೊನೆಯುಸಿರೆಳೆದಿದ್ದರು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಹೋಟೆಲ್ನ ಕೊಠಡಿಯ ಮುಂಭಾಗದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಅದರಲ್ಲಿ ಹಲವು ಅನುಮಾನಸ್ಪದ ದೃಶ್ಯಗಳು ಸೆರೆಯಾಗಿವೆ. ಹೋಟೆಲ್ ಸಿಬ್ಬಂದಿ ಹಾಗೂ ನೀಲೇಶ್ ಮುಂದೆ ನಡೆಯುತ್ತಿದ್ದರೆ, ಮುಸ್ಕಾನ್ ಅವರ ಹಿಂದೆ ನಡೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಕೊಠಡಿಯ ಬಾಗಿಲ ಬಳಿ ತಲುಪಿದ ತಕ್ಷಣ, ಹೋಟೆಲ್ ಸಿಬ್ಬಂದಿ ಮತ್ತು ನೀಲೇಶ್ ಒಳಗಡೆ ಹೋಗುತ್ತಾರೆ. ಆದರೆ ಬಾಗಿಲ ಬಳಿ ಕ್ಷಣಕಾಲ ನಿಲ್ಲುವ ಮುಸ್ಕಾನ್, ದಿಢೀರನೆ ಹಿಂಭಾಗಕ್ಕೆ ಕುಸಿದುಬೀಳುತ್ತಾರೆ. ತಕ್ಷಣವೇ ನೀಲೇಶ್ ಆಕೆಯನ್ನು ಎತ್ತಿಕೊಂಡು ಕೊಠಡಿಯೊಳಗೆ ಕರೆದೊಯ್ಯುವುದು ವಿಡಿಯೋದಲ್ಲಿದೆ.
ಈ ದೃಶ್ಯಾವಳಿಗಳನ್ನು ಕಂಡು ಆಕ್ರೋಶಗೊಂಡಿರುವ ಮುಸ್ಕಾನ್ ತಂದೆ ರಾಮ್ಜಿ ಲಾಲ್, ಇದು ಅಪಘಾತ ಅಥವಾ ಸಾಮಾನ್ಯ ಸಾವಲ್ಲ, ಬದಲಿಗೆ ಮಗಳ ಕೊಲೆ ಎಂದು ಆರೋಪಿಸಿದ್ದಾರೆ. ಪತಿ ನೀಲೇಶ್ ಈಗಾಗಲೇ ಇಂದೋರ್ನಲ್ಲಿ ನೆಲೆಸಿರುವ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗಿದ್ದು, ಆ ವಿಚಾರವನ್ನು ಮುಸ್ಕಾನ್ನಿಂದ ಸಂಪೂರ್ಣವಾಗಿ ಮುಚ್ಚಿಟ್ಟಿದ್ದ. ಇತ್ತೀಚೆಗಷ್ಟೇ ನೀಲೇಶನ್ ಮೊದಲ ಮದುವೆಯ ಸತ್ಯ ಮುಸ್ಕಾನ್ಗೆ ತಿಳಿದುಬಂದಿದ್ದರಿಂದ ಇಬ್ಬರ ನಡುವೆ ಪ್ರತಿದಿನ ತೀವ್ರ ಜಗಳ ನಡೆಯುತ್ತಿತ್ತು. ಅಷ್ಟೇ ಅಲ್ಲದೆ, ಆಕೆಯ ತಲೆಗೆ ತೀವ್ರ ಗಾಯವಾಗಿರುವ ಗುರುತುಗಳಿದ್ದು, ಸಂಚು ರೂಪಿಸಿ ಮಗಳನ್ನು ಹತ್ಯೆ ಮಾಡಲಾಗಿದೆ ಎಂದು ತಂದೆ ಆಕ್ರೋಶ ಹೊರಹಾಕಿದ್ದಾರೆ.
ಪ್ರಸ್ತುತ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬ್ಯಾಂಕ್ ಮ್ಯಾನೇಜರ್ ನೀಲೇಶ್ನನ್ನು ವಶಕ್ಕೆ ಪಡೆದುಕೊಂಡು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ವರದಿ ಬಂದ ನಂತರವೇ ಸಾವಿಗೆ ನಿಖರವಾದ ಕಾರಣ ಏನು ಎಂಬುದು ತಿಳಿದುಬರಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ನವವಿವಾಹಿತೆಯ ಈ ಅನುಮಾನಾಸ್ಪದ ಸಾವು ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಸಂಚಲನ ಮೂಡಿಸಿದೆ, (ಏಜೆನ್ಸೀಸ್).