ರಾಹುಲ್ ಗಾಂಧಿ  
ದೇಶ

ಮತಗಳ್ಳತನದ ಹಳೆಯ ದಾರಿ ಬಂದ್, ಹೊಸ ಮಾರ್ಗಕ್ಕೆ ಯತ್ನ: ಡಿಲಿಮಿಟೇಶನ್ ವಿರುದ್ಧ ರಾಹುಲ್ ಗಾಂಧಿ ಭಾರಿ ವಾಗ್ದಾಳಿ! | Rahul Gandhi

ನವದೆಹಲಿ: ಮುಂಬರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ಮಂಡಿಸಲು ನಿರ್ಧರಿಸಿರುವ ಬೆನ್ನಲ್ಲೇ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಮತ ಕಳ್ಳತನ ಆರೋಪಗಳನ್ನು ಪುನರುಚ್ಚರಿಸಿದ್ದಾರೆ. ಈ ಪ್ರಸ್ತಾವಿತ ಮಸೂದೆಯು ಬಿಜೆಪಿ ಶಾಶ್ವತವಾಗಿ ಅಧಿಕಾರದಲ್ಲಿ ಉಳಿಯಲು ರೂಪಿಸಿರುವ ಮೂವರು ಮಸ್ಕಿಟಿಯರ್ಸ್ (ಬಂದೂಕುಧಾರಿ ಸೈನಿಕರು) ಅವರ ಹೊಸ ಸಂಚು ಎಂದು ರಾಹುಲ್ ಗಾಂಧಿ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೂವರು ಮಸ್ಕಿಟಿಯರ್ಸ್ ಎಂದು ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಉಲ್ಲೇಖಿಸಿ ಕಿಡಿಕಾರಿದ್ದಾರೆ.

ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ, ಕ್ಷೇತ್ರ ಪುನರ್ವಿಂಗಡಣೆ ಮಸೂದೆಯು ಭಾರತದಲ್ಲಿ ಕ್ಷೇತ್ರಗಳನ್ನು ಮರುರಚಿಸಲು ಬಿಜೆಪಿಗೆ ಖಾಲಿ ಚೆಕ್ ನೀಡಿದಂತಾಗುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ಸಂಪೂರ್ಣವಾಗಿ ನಾಶಮಾಡುತ್ತದೆ ಎಂದು ಆರೋಪಿಸಿದ್ದಾರೆ. ಆದರೆ, ಮೋದಿ ಸರ್ಕಾರ ದೇಶವನ್ನು ಸರ್ವಾಧಿಕಾರದತ್ತ ಕೊಂಡೊಯ್ಯಲು ವಿರೋಧ ಪಕ್ಷಗಳು ಬಿಡುವುದಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

ದೇಶದ ಶೇ. 80ರಷ್ಟು ಮಂದಿ ಮತ್ತು ಸುಮಾರು ಶೇ. 100ರಷ್ಟು ಜೆನ್ ಜೀ ಯುವಜನರು ಮೋದಿ, ಷಾ ಮತ್ತು ಜ್ಞಾನೇಶ್ ಕುಮಾರ್ ಅವರಿಂದ ಚುನಾವಣೆಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ನಂಬಿದ್ದಾರೆಂದು ಸಮೀಕ್ಷೆಗಳು ತೋರಿಸುತ್ತಿವೆ ಎಂದು ವಾದಿಸಿರುವ ರಾಹುಲ್, ಮಹಿಳಾ ಮೀಸಲಾತಿಯ ನೆಪದಲ್ಲಿ ಕೇಂದ್ರ ಸರ್ಕಾರ ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುತ್ತಿದೆ ಎಂದು ಅವರು ದೂರಿದ್ದಾರೆ. ಮಹಿಳಾ ಮೀಸಲಾತಿ ಮಸೂದೆ ಈಗಾಗಲೇ ಅಂಗೀಕಾರವಾಗಿದ್ದರೂ, ಅದನ್ನು ಇನ್ನೂ ಜಾರಿಗೊಳಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

2024ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮ!

ಹಾಗಾದರೆ ಪ್ರಶ್ನೆ ಏನೆಂದರೆ, 850 ಸ್ಥಾನಗಳು ಏಕೆ ಬೇಕು? ಇದಕ್ಕೆ ಉತ್ತರ ಅಸ್ಸಾಂ ಮತ್ತು ಜಮ್ಮು-ಕಾಶ್ಮೀರದಲ್ಲಿದೆ. ಏಕೆಂದರೆ ನಿಮ್ಮ ಬಳಿ ಆಟವಾಡಲು 850 ಸ್ಥಾನಗಳಿದ್ದಾಗ, ಭಾರತದ ಚುನಾವಣಾ ನಕ್ಷೆಯಲ್ಲಿ ಮಾಡಬಹುದಾದ ಬದಲಾವಣೆಗಳು ಮತ್ತು ಮರುವಿನ್ಯಾಸದ ಪ್ರಮಾಣ ಅಗಾಧವಾಗಿರುತ್ತದೆ. ಇದು ಭಾರತದ ಚುನಾವಣಾ ನಕ್ಷೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಲು ಬಿಜೆಪಿಗೆ ಅವಕಾಶ ನೀಡುತ್ತದೆ, ತಮಗೆ ವಿರೋಧವಾಗಿರುವ ಸಮುದಾಯಗಳ ಪ್ರಾತಿನಿಧ್ಯವನ್ನು ದುರ್ಬಲಗೊಳಿಸಲು ಅನುವು ಮಾಡಿಕೊಡುತ್ತದೆ ಮತ್ತು ನಿರ್ದಿಷ್ಟ ವಿಪಕ್ಷ ನಾಯಕರನ್ನು ಗುರಿಯಾಗಿಸಲು ಅವಕಾಶ ಕಲ್ಪಿಸುತ್ತದೆ ಎಂದು ರಾಹುಲ್ ಗಾಂಧಿ ದೂರಿದ್ದಾರೆ.

2024ರ ಲೋಕಸಭಾ ಚುನಾವಣೆಗಳಲ್ಲಿ ಅಕ್ರಮ ನಡೆದಿದೆ ಎಂಬ ತಮ್ಮ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿದ ಅವರು, ಆ ಚುನಾವಣೆಗಳಲ್ಲಿ ಮತ ಚಲಾಯಿಸಿದ 14 ಕೋಟಿ ಜನರು ಮತ ಹಾಕಬಾರದಿತ್ತು ಎಂದು ಭಾರತೀಯ ಚುನಾವಣಾ ಆಯೋಗವೇ ಹೇಳಿದೆ ಎಂದು ಪ್ರತಿಪಾದಿಸಿದ್ದಾರೆ. ಇದು 2024ರ ಸಾರ್ವತ್ರಿಕ ಚುನಾವಣೆಗಳು ಕಾನೂನುಬಾಹಿರವಾಗಿದ್ದವು ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅವರು ವಾದಿಸಿದ್ದಾರೆ.

ವಿರೋಧ ಪಕ್ಷಗಳು ಪ್ರಧಾನಿ ಮೋದಿ, ಷಾ ಮತ್ತು ಜ್ಞಾನೇಶ್ ಕುಮಾರ್ ಅವರನ್ನು ಬಲೆಗೆ ಬೀಳಿಸಿವೆ ಎಂದ ರಾಹುಲ್, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್ ಬಳಿ ಸಾಕಷ್ಟು ಮಾಹಿತಿ ಇದೆ ಮತ್ತು ಅವರನ್ನು ತಪ್ಪಿಸಿಕೊಳ್ಳಲು ಬಿಡುವುದಿಲ್ಲ, ಜ್ಞಾನೇಶ್ ಕುಮಾರ್ ವಿರುದ್ಧ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಬಿಡುಗಡೆ ಮಾಡುವುದಾಗಿಯೂ ಅವರು ತಿಳಿಸಿದ್ದಾರೆ.

ಜೆನ್ ಜೀ ಯುವಕರೇ, ಇದನ್ನು ನೆನಪಿಟ್ಟುಕೊಳ್ಳಿ!

ಈ ಕಳ್ಳರು ದೇಶವನ್ನು ಲೂಟಿ ಮಾಡುವುದನ್ನು ಮುಂದುವರಿಸಲು ಮತ್ತು ನಿಮ್ಮ ಭವಿಷ್ಯವನ್ನು ನಾಶಮಾಡಲು ಭಾರತದ ನಕ್ಷೆಗೆ ನಿಖರವಾಗಿ ಇದೇ ಕೆಲಸ ಆಗಲಿದೆ. ಇಲ್ಲಿದೆ ಕ್ಷೇತ್ರ ಪುನರ್ವಿಂಗಡಣೆ ಆಯೋಗ, ಜ್ಞಾನೇಶ್ ಕುಮಾರ್ ಇದರ ಸದಸ್ಯರಾಗಿರುತ್ತಾರೆ, ಜೊತೆಗೆ ಮೋದಿ ಮತ್ತು ಷಾ ಆಯ್ಕೆ ಮಾಡುವ ಒಬ್ಬ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಇರುತ್ತಾರೆ. ಮತ್ತು ಸಮಿತಿಯ ಮೂರನೇ ಸದಸ್ಯರನ್ನು ಯಾರು ಆಯ್ಕೆ ಮಾಡುತ್ತಾರೆಂದು ಊಹಿಸಿ? ಮೊದಲ ಸದಸ್ಯರನ್ನು ಮೋದಿ ಮತ್ತು ಷಾ ಆಯ್ಕೆ ಮಾಡಿದರೆ, ಸಮಿತಿಯ ಮೂರನೇ ಸದಸ್ಯರನ್ನು ಸ್ವತಃ ಜ್ಞಾನೇಶ್ ಕುಮಾರ್ ಅವರೇ ಆಯ್ಕೆ ಮಾಡುತ್ತಾರೆ ಎಂದು ರಾಹುಲ್​ ಆರೋಪಿಸಿದ್ದಾರೆ.

ಜ್ಞಾನೇಶ್ ಕುಮಾರ್ ಅವರು ಪ್ರಜಾಸತ್ತಾತ್ಮಕ ವ್ಯವಸ್ಥೆಯ ನಾಶದ ಮೇಲ್ವಿಚಾರಣೆ ನಡೆಸಿದ್ದಾರೆ, ಮತ್ತು ಈಗ ಅವರು ಈ ದೇಶದ ನಾಶದ ಮೇಲ್ವಿಚಾರಣೆ ನಡೆಸಲಿದ್ದಾರೆ. ಚುನಾವಣಾ ಆಯೋಗವನ್ನು ವಶಪಡಿಸಿಕೊಳ್ಳಲಾಗಿದೆ. ಈಗ ಇದನ್ನು ಮಾಡಲು ಕ್ಷೇತ್ರ ಪುನರ್ವಿಂಗಡಣೆ ಆಯೋಗವನ್ನು ಕಾರ್ಯಗತಗೊಳಿಸಲಾಗುತ್ತಿದೆ. ಕ್ಷೇತ್ರ ಪುನರ್ವಿಂಗಡಣೆಯ ರಚನೆಯು ಮೋದಿ ಮತ್ತು ಷಾ ಅವರಿಗೆ ಸಂಪೂರ್ಣ ನಿಯಂತ್ರಣ ನೀಡುತ್ತದೆ, ಮತ್ತು ಜ್ಞಾನೇಶ್ ಅವರ ನಿರ್ಧಾರಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಜಾತಿ ಗಣತಿಯ ಬಗ್ಗೆ ಕಾಳಜಿ ಇಲ್ಲ ಎಂದಿರುವ ರಾಹುಲ್, 2024ರಲ್ಲಿ ಪ್ರಧಾನಿ ಮೋದಿ ಅವರು ವಾರಣಾಸಿ ಕ್ಷೇತ್ರದಲ್ಲಿ ಸೋತಿದ್ದರು, ಆದರೆ ವೋಟ್ ಚೋರಿ ಮೂಲಕ ಗೆದ್ದರು ಎಂದು ಆರೋಪಿಸಿದ್ದಾರೆ. ವಿರೋಧ ಪಕ್ಷಗಳು ದ್ವಿಪಕ್ಷೀಯ ಕ್ಷೇತ್ರ ಪುನರ್ವಿಂಗಡಣೆ ಆಯೋಗವನ್ನು ಬಯಸುತ್ತವೆ ಎಂದ ಅವರು, ಲೋಕಸಭೆಯ ಅಸ್ತಿತ್ವದಲ್ಲಿರುವ 543 ಸ್ಥಾನಗಳಲ್ಲೇ ಮಹಿಳಾ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶದ ರಾಯ್ ಬರೇಲಿ ಸಂಸದರಾಗಿರುವ ರಾಹುಲ್, ತಾವು ಮತ್ತು ಜೆನ್ ಜೀ ಯುವಕರು ಮತಕಳ್ಳತನ ವಿಚಾರದಲ್ಲಿ ಬಿಜೆಪಿಯನ್ನು ಮೂಲೆಗುಂಪು ಮಾಡಿದ್ದು, ಅದು ನಡೆಯಲು ಬಿಡುವುದಿಲ್ಲ ಎಂದು ಹೇಳಿದರು. ನಾವು ಮತ್ತು ದೇಶದ ಯುವಕರು ಬಿಜೆಪಿಯ ಆ ದಾರಿಯನ್ನು ಮುಚ್ಚಿ, ಬಾಗಿಲನ್ನೂ ಹಾಕಿದ್ದೇವೆ. ಈಗ ಅವರು ಹೊಸ ಯೋಜನೆಯೊಂದಿಗೆ ಬಂದು ಹೊಸ ದಾರಿ ತೆರೆಯಲು ಯತ್ನಿಸುತ್ತಿದ್ದಾರೆ ಎಂದು ರಾಹುಲ್​ ಗಾಂಧಿ ಆರೋಪಿಸಿದ್ದಾರೆ(ಏಜೆನ್ಸೀಸ್​).