

ನವದೆಹಲಿ: ಕ್ಷೇತ್ರ ಪುನರ್ವಿಂಗಡಣೆ (Delimitation) ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಪ್ರಸ್ತಾವಿತ ಸಾಂವಿಧಾನಿಕ ತಿದ್ದುಪಡಿ ಮಸೂದೆಯ ಪರಿಷ್ಕೃತ ರೂಪಕ್ಕೆ ಕೇಂದ್ರ ಸಚಿವ ಸಂಪುಟ (Union Cabinet Decision) ಶುಕ್ರವಾರ ಮಹತ್ವದ ಅನುಮೋದನೆ ನೀಡಿದೆ. ಹೊಸ ಚೌಕಟ್ಟಿನ ಪ್ರಕಾರ, ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ. 50ರಷ್ಟು ಹೆಚ್ಚಿಸುವುದು ಮತ್ತು ರಾಜ್ಯಗಳ ಸ್ಥಾನ ಹಂಚಿಕೆಯ ಅನುಪಾತವನ್ನು ಮುಂದಿನ 25 ವರ್ಷಗಳ ಕಾಲ ಅಂದರೆ 2051ರವರೆಗೆ ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನವೇ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ನವೆಂಬರ್ 30 ಮತ್ತು ಡಿಸೆಂಬರ್ 1ರಂದು ಲೋಕಸಭೆ ಹಾಗೂ ಡಿಸೆಂಬರ್ 2 ಮತ್ತು 3ರಂದು ರಾಜ್ಯಸಭೆಯ ಕಲಾಪಗಳು ನಡೆಯಲಿವೆ. ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಂಡನೆಯಾಗಲಿರುವ ಮಸೂದೆಗಳ ಹೆಸರನ್ನು ಬಹಿರಂಗಪಡಿಸದಿದ್ದರೂ, ಈ ವಿಶೇಷ ಅಧಿವೇಶನದಲ್ಲಿ ಸರ್ಕಾರವು ಈ ಮಹತ್ವದ ಮಸೂದೆಯನ್ನು ಮಂಡಿಸಲು ಸಜ್ಜಾಗಿರುವುದಂತು ಪಕ್ಕಾ ಆಗಿದೆ.
ಪ್ರಸ್ತುತ ಲೋಕಸಭೆಯ ಒಟ್ಟು ಸದಸ್ಯ ಬಲ 543 ಇದ್ದು, ಶೇ. 50ರಷ್ಟು ಹೆಚ್ಚಳವಾದರೆ ಸ್ಥಾನಗಳ ಸಂಖ್ಯೆ ಸುಮಾರು 816ಕ್ಕೆ ಏರಿಕೆಯಾಗಲಿದೆ. ಈ ಹೆಚ್ಚಳವು ದೇಶದ ಎಲ್ಲಾ ರಾಜ್ಯಗಳಿಗೂ ಏಕರೂಪವಾಗಿ ಅನ್ವಯವಾಗಲಿದ್ದು, ಇದರಿಂದ ಪ್ರತಿಯೊಂದು ರಾಜ್ಯಕ್ಕೂ ಹೆಚ್ಚುವರಿ ಸ್ಥಾನಗಳು ಸಿಗುವುದರ ಜೊತೆಗೆ ಲೋಕಸಭೆಯಲ್ಲಿ ಅವುಗಳ ಪ್ರಸ್ತುತ ಪ್ರಾತಿನಿಧ್ಯದ ಪಾಲಿಗೂ ಯಾವುದೇ ಧಕ್ಕೆಯಾಗುವುದಿಲ್ಲ.
ಜನಸಂಖ್ಯೆ ಬೆಳವಣಿಗೆಯನ್ನು ಯಶಸ್ವಿಯಾಗಿ ನಿಯಂತ್ರಿಸಿರುವ ದಕ್ಷಿಣ ಭಾರತದ ರಾಜ್ಯಗಳು, ಕೇವಲ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ನಡೆದರೆ ತಮ್ಮ ರಾಜಕೀಯ ಪ್ರಾತಿನಿಧ್ಯ ಕಡಿಮೆಯಾಗಬಹುದು ಎಂದು ತೀವ್ರ ಆತಂಕ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ, ರಾಜ್ಯ ಸ್ಥಾನ ಹಂಚಿಕೆಯ ಸ್ಥಗಿತವನ್ನು 2051ರವರೆಗೆ ಮುಂದುವರಿಸುವ ಕೇಂದ್ರದ ಪ್ರಸ್ತಾವನೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಈ ಭರವಸೆಯನ್ನು ಕೇವಲ ಬಾಯಿಮಾತಿನಲ್ಲಿ ನೀಡದೆ ಕಾನೂನಿನಲ್ಲೇ ಸೇರಿಸಬೇಕೆಂಬ ವಿರೋಧ ಪಕ್ಷಗಳ ಬೇಡಿಕೆಗೂ ಈ ತಿದ್ದುಪಡಿ ಸ್ಪಂದಿಸಿದೆ.
ಕಳೆದ ಏಳು ತಿಂಗಳ ಹಿಂದೆ, ಅಂದರೆ 2026ರ ಏಪ್ರಿಲ್ 17ರಂದು ಲೋಕಸಭೆಯಲ್ಲಿ ಮಂಡನೆಯಾಗಿದ್ದ ಸಂವಿಧಾನದ (131ನೇ ತಿದ್ದುಪಡಿ) ಮಸೂದೆಯು ಸೋಲುಂಡಿತ್ತು. ಮಸೂದೆಯ ಪರವಾಗಿ 298 ಮತ್ತು ವಿರುದ್ಧವಾಗಿ 230 ಮತಗಳು ಬಿದ್ದಿದ್ದವು. ಸಾಂವಿಧಾನಿಕ ತಿದ್ದುಪಡಿ ಮಸೂದೆ ಅಂಗೀಕಾರವಾಗಲು ಅಗತ್ಯವಿದ್ದ ಮೂರನೇ ಎರಡರಷ್ಟು ವಿಶೇಷ ಬಹುಮತ ಸಿಗದ ಕಾರಣ ಅಂದು ಮಸೂದೆ ಬಿದ್ದುಹೋಗಿತ್ತು. ಪರಿಣಾಮವಾಗಿ ಅದಕ್ಕೆ ಸಂಬಂಧಿಸಿದ ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನು ತಿದ್ದುಪಡಿ ಮಸೂದೆಗಳನ್ನೂ ಕೈಬಿಡಲಾಗಿತ್ತು.
2023ರ ಸಂವಿಧಾನದ (106ನೇ ತಿದ್ದುಪಡಿ) ಕಾಯ್ದೆಯಡಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಲು ಅವಕಾಶ ಕಲ್ಪಿಸಲಾಗಿದ್ದರೂ, ಅದರ ಜಾರಿಯನ್ನು ಭವಿಷ್ಯದ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆಗೆ ಜೋಡಿಸಲಾಗಿತ್ತು. ಈಗ ಕೇಂದ್ರ ಸರ್ಕಾರ ತಂದಿರುವ ಹೊಸ ತಿದ್ದುಪಡಿಗಳ ಮೂಲಕ, 2029ರ ಲೋಕಸಭಾ ಚುನಾವಣೆಯ ವೇಳೆಗೆ ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಸಂಪುಟದ ಅನುಮೋದನೆ ದೊರೆತಿದ್ದರೂ, ಈ ಪರಿಷ್ಕೃತ ಮಸೂದೆಯು ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ವಿಶೇಷ ಬಹುಮತದೊಂದಿಗೆ ಅಂಗೀಕಾರವಾಗುವುದು ಅನಿವಾರ್ಯವಾಗಿದೆ(ಏಜೆನ್ಸೀಸ್).