Ram Mohan Naidu | ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು 
ದೇಶ

ಇಂಡಿಗೋ ಬಿಕ್ಕಟ್ಟಿಗೆ ಇದೇ ಕಾರಣ...ಪ್ರಯಾಣಿಕರಿಗೆ ತೊಂದರೆ ಮಾಡಲು ಸರ್ಕಾರ ಅವಕಾಶ ನೀಡಲ್ಲ ಎಂದ ಕೇಂದ್ರ ಸಚಿವ | Ram Mohan Naidu

ದೆಹಲಿ: ಇಂಡಿಗೋ ಕಾರ್ಯಾಚರಣೆಗಳು ಸಹಜ ಸ್ಥಿತಿಗೆ ಮರಳುತ್ತಿದ್ದು, ವಿಮಾನಯಾನ ಸಂಸ್ಥೆಗಳು ಎಷ್ಟೇ ಪ್ರಭಾವಿಯಾಗಿರಲಿ, ಯೋಜನಾ ವೈಫಲ್ಯಗಳು, ಶಾಸನಬದ್ಧ ನಿಬಂಧನೆಗಳನ್ನು ಪಾಲಿಸದೆ ಪ್ರಯಾಣಿಕರಿಗೆ ತೊಂದರೆ ಉಂಟುಮಾಡಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಸಚಿವ ನಾಯ್ಡು, ಕಳೆದ ಎಂಟು ದಿನಗಳಿಂದ ಜನರು ಎದುರಿಸುತ್ತಿರುವ ಸಮಸ್ಯೆಗೆ ಇಂಡಿಗೋದ ಆಂತರಿಕ ರೋಸ್ಟರಿಂಗ್ ಅಡಚಣೆಗಳೇ ಕಾರಣವಾಗಿದ್ದು, ಕಾರ್ಯಾಚರಣೆಗಳು ಅತ್ಯಂತ ವೇಗವಾಗಿ ಮೊದಲಿನಂತಾಗುತ್ತಿದ್ದು, ಈ ಬಿಕ್ಕಟ್ಟಿಗೆ ಇಂಡಿಗೋ ಸಂಸ್ಥೆಯೇ ನೇರ ಹೊಣೆ ಎಂದು ಹೇಳಿದರು. ಎದುರಾಗಿರುವ ಸಮಸ್ಯೆಯ ಬಗ್ಗೆ ಪ್ರತಿಕ್ರಿಯೆ ಕೋರಿ ವಿಮಾನಯಾನ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ವಿಷಯದ ಕುರಿತಂತೆ ಈಗಾಗಲೇ ನೊಟೀಸ್​ ನೀಡಲಾಗಿದ್ದು, ವಿವರವಾದ ತನಿಖೆಯನ್ನು ಸಹ ಪ್ರಾರಂಭಿಸಲಾಗಿದೆ. ಅದರ ವರದಿಯನ್ನು ಆಧರಿಸಿ ವಿಮಾನ ನಿಯಮಗಳು ಮತ್ತು ಕಾಯ್ದೆಯಡಿಯಲ್ಲಿ ಅಧಿಕಾರ ಹೊಂದಿರುವ ಕಠಿಣ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಭರವಸೆ ನೀಡಿದರು.
ಅವ್ಯವಸ್ಥೆ ಎರಡನೇ ವಾರಕ್ಕೆ ವಿಸ್ತರಿಸಿದ ಹಿನ್ನಲೆಯಲ್ಲಿ ಮಂಗಳವಾರ (ಡಿ.9) ಸುಮಾರು 500 ಇಂಡಿಗೋ ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ವರದಿಯಾಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಇದು ಕಡಿಮೆಯೇ. ವಿಮಾನ ನಿಲ್ದಾಣಗಳು ಅಸ್ತವ್ಯಸ್ತವಾಗಿರುವ ದೃಶ್ಯಗಳಿಗೆ ಸಾಕ್ಷಿಯಾಗುತ್ತಿದ್ದಂತೆ, ಇತ್ತ ನಾಗರಿಕ ವಿಮಾನಯಾನ ನಿರ್ದೇಶನಾಲಯ ಮಧ್ಯಪ್ರವೇಶಿಸಿ, ಹೊಸ ವಿಮಾನ ಕರ್ತವ್ಯ ಸಮಯ ಮಿತಿ (FDTL) ಮಾನದಂಡಗಳ ಅಡಿಯಲ್ಲಿ ಪೈಲಟ್‌ಗಳಿಗೆ ಕಠಿಣ ರಾತ್ರಿ ಕರ್ತವ್ಯ ನಿಯಮಗಳಿಂದ ಇಂಡಿಗೋಗೆ ತಾತ್ಕಾಲಿಕ ವಿನಾಯಿತಿ ನೀಡಿದೆ.
ನಿರ್ದೇಶನಾಲಯದ ಈ ಕ್ರಮಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಭಾರತದ ದೇಶೀಯ ಸಂಚಾರದ ಸುಮಾರು ಮೂರನೇ ಎರಡರಷ್ಟು ಭಾಗವನ್ನು ನಿಯಂತ್ರಿಸುವ ಇಂಡಿಗೊದ ಕೈವಾಡದ ಬಳಿಕ ಕೇಂದ್ರ ಸರ್ಕಾರ ಒತ್ತಡಕ್ಕೆ ಮಣಿದಿದೆ ಎಂದು ತಜ್ಞರು ಆರೋಪಿಸಿದ್ದಾರೆ. ಈ ನಡುವೆ ಸರ್ಕಾರದ ಪ್ರತಿನಿಧಿಗಳು ಮತ್ತು ಡಿಜಿಸಿಎ ಅಧಿಕಾರಿಗಳು ಇಂದು ಇಂಡಿಗೊ ಸಿಇಒ ಪೀಟರ್ ಎಲ್ಬರ್​​ರನ್ನು ಭೇಟಿಯಾಗಿ ಸದ್ಯದ ಪರಿಸ್ಥಿತಿಯ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ(ಏಜೆನ್ಸೀಸ್​).