ಕ್ಷೇತ್ರ ಮರುವಿಂಗಡಣೆ ಮಸೂದೆ ಅಡಿಯಲ್ಲಿ ಲೋಕಸಭಾ ಸ್ಥಾನಗಳನ್ನು 543ರಿಂದ 816ಕ್ಕೆ ಹೆಚ್ಚಿಸುವ ಕುರಿತ ನಕ್ಷೆ 
ದೇಶ

ವಿಶೇಷ ಅಧಿವೇಶನಕ್ಕೂ ಮೊದಲೇ ಹೊಸ ನಕ್ಷೆ ಬಿಡುಗಡೆ! 543ರಿಂದ 816ಕ್ಕೆ ಏರಲಿದೆ ಸಂಸದರ ಬಲ; ಯಾವ ರಾಜ್ಯಕ್ಕೆ ಎಷ್ಟು ಸೀಟು? Delimitation Bill

ನವದೆಹಲಿ: ಸೋಮವಾರ (ನ.30) ದಿಂದ ಶುರುವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನಕ್ಕೂ ಮುನ್ನವೇ ಕೇಂದ್ರ ಸರ್ಕಾರ ದೇಶದ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಎರಡು ಮಹತ್ವದ ಕ್ಷೇತ್ರ ಮರುವಿಂಗಡಣೆ (Delimitation) ಮಸೂದೆಗಳಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ ಬೆನ್ನಲ್ಲೇ, ಯಾವ ರಾಜ್ಯಕ್ಕೆ ಎಷ್ಟು ಲೋಕಸಭಾ ಸ್ಥಾನಗಳು ಸಿಗಲಿವೆ ಎಂಬ ಸಂಪೂರ್ಣ ಚಿತ್ರಣವನ್ನು ಸರ್ಕಾರ ಬಹಿರಂಗಪಡಿಸಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಶನಿವಾರ (ನ.28) ಮರುಹೊಂದಿಸಲಾದ ಲೋಕಸಭಾ ಕ್ಷೇತ್ರಗಳ ನಕ್ಷೆಯನ್ನು ಹಂಚಿಕೊಂಡಿದ್ದು, ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಎಷ್ಟು ಹೆಚ್ಚುವರಿ ಸೀಟುಗಳು ಸಿಗಲಿವೆ ಎಂಬುದನ್ನು ತೋರಿಸಿದ್ದಾರೆ.

ಪ್ರತಿ ರಾಜ್ಯಕ್ಕೂ ಶೇ. 50ರಷ್ಟು ಸೀಟು ಹೆಚ್ಚಳ!

ನೂತನ ಮಸೂದೆಗಳ ಪ್ರಕಾರ, ದೇಶದ ಪ್ರತಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಲೋಕಸಭಾ ಸ್ಥಾನಗಳಲ್ಲಿ ಶೇಕಡಾ 50ರಷ್ಟು ಹೆಚ್ಚಳವಾಗಲಿದೆ. ವಿಶೇಷವೆಂದರೆ, ಈ ಹೆಚ್ಚಳ ಎಲ್ಲಾ ರಾಜ್ಯಗಳಿಗೂ ಏಕರೂಪವಾಗಿ ಇರಲಿದ್ದು, 2051ರವರೆಗೆ ಈ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಂದರೆ, ಪ್ರಸ್ತುತ ಲೋಕಸಭೆಯಲ್ಲಿರುವ 543 ಸ್ಥಾನಗಳ ಬಲ ಬರೋಬ್ಬರಿ 816ಕ್ಕೆ ಏರಿಕೆಯಾಗಲಿದೆ.

ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಮೇಘವಾಲ್, ಪ್ರಸ್ತಾಪಿತ ಕ್ಷೇತ್ರ ಮರುವಿಂಗಡಣಾ ಚೌಕಟ್ಟು ಭಾರತದ ಸಂಸದೀಯ ಸ್ವರೂಪವನ್ನು ಮರುರೂಪಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದಿದ್ದಾರೆ.

ಬೆಸ ಸಂಖ್ಯೆಯ ಸೀಟುಗಳ ಲೆಕ್ಕಾಚಾರ ಹೇಗಿದೆ?

ಸದ್ಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಪಂಜಾಬ್‌ನಂತಹ ರಾಜ್ಯಗಳಲ್ಲಿ ಬೆಸ ಸಂಖ್ಯೆಯ ಲೋಕಸಭಾ ಸ್ಥಾನಗಳಿವೆ. ಶೇ. 50ರಷ್ಟು ಹೆಚ್ಚಳ ಮಾಡಿದಾಗ ಇವು ಅರ್ಧ ಸಂಖ್ಯೆಗೆ ಬರುತ್ತವೆ. ಇದನ್ನು ಹೇಗೆ ಪೂರ್ಣ ಸಂಖ್ಯೆಗೆ ಬದಲಾಯಿಸಲಾಗುತ್ತದೆ ಎಂಬುದು ಮೇಘವಾಲ್ ಹಂಚಿಕೊಂಡ ನಕ್ಷೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ತಮಿಳುನಾಡು: 39ರಿಂದ (58.5) 59 ಸ್ಥಾನಗಳಿಗೆ ಏರಿಕೆ.

ಆಂಧ್ರಪ್ರದೇಶ: 25ರಿಂದ (37.5) 38 ಸ್ಥಾನಗಳಿಗೆ ಏರಿಕೆ.

ತೆಲಂಗಾಣ: 17ರಿಂದ (25.5) 26 ಸ್ಥಾನಗಳಿಗೆ ಏರಿಕೆ.

ಪಂಜಾಬ್: 13ರಿಂದ (19.5) 20 ಸ್ಥಾನಗಳಿಗೆ ಏರಿಕೆ.

ಇನ್ನು ಕೇವಲ ಒಂದು ಲೋಕಸಭಾ ಸ್ಥಾನ ಹೊಂದಿರುವ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರ್ಣ ಸಂಖ್ಯೆಯ ಲೆಕ್ಕಾಚಾರದ ಪ್ರಕಾರ 2 ಸ್ಥಾನಗಳು ಸಿಗಲಿದ್ದು, ಅಲ್ಲಿ ಶೇ. 100ರಷ್ಟು ಹೆಚ್ಚಳವಾದಂತಾಗುತ್ತದೆ.

ನಾಲ್ಕು ದಿನಗಳ ವಿಶೇಷ ಅಧಿವೇಶನದಲ್ಲಿ ಮಂಡನೆ

ಡಿಸೆಂಬರ್ 3ಕ್ಕೆ ಮುಕ್ತಾಯಗೊಳ್ಳಲಿರುವ ನಾಲ್ಕು ದಿನಗಳ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ 'ಸಂವಿಧಾನ (132ನೇ ತಿದ್ದುಪಡಿ) ಮಸೂದೆ' ಮತ್ತು 'ಕ್ಷೇತ್ರ ಮರುವಿಂಗಡಣೆ (ಎರಡನೇ) ಮಸೂದೆ, 2026' ಮಂಡನೆಯಾಗಲಿವೆ. ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 117(3)ನೇ ವಿಧಿಯ ಅಡಿಯಲ್ಲಿ ಈ ಮಸೂದೆಯನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಲೋಕಸಭೆಗೆ ಸೂಚಿಸಿದ್ದಾರೆ. ಈ ಮಸೂದೆಗಳಿಗೆ ಸಂಸತ್ತಿನಲ್ಲಿ ಒಪ್ಪಿಗೆ ಸಿಕ್ಕರೆ, ಭಾರತದ ರಾಜಕೀಯ ನಕ್ಷೆ ಸಂಪೂರ್ಣ ಬದಲಾಗುವುದು ಖಚಿತವಾಗಿದೆ, (ಏಜೆನ್ಸೀಸ್​).