ಭಾರತದ ಪ್ರಧಾನಿ ನರೇಂದ್ರ ಮೋದಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ  
ದೇಶ

ನೆತನ್ಯಾಹು ಒಬ್ಬ ಯುದ್ಧ ಅಪರಾಧಿ: ಪ್ರಧಾನಿ ಮೋದಿ ಇಸ್ರೇಲ್ ಪ್ರವಾಸಕ್ಕೆ ಓವೈಸಿ ತೀವ್ರ ಆಕ್ರೋಶ | PM Modi

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ಮೋದಿ ಇಸ್ರೇಲ್​ ಪ್ರವಾಸ
  • ಇದರಿಂದ ಇರಾನ್​ ಮೇಲೆ ಯುದ್ಧ ನಡೆಯಲಿದೆ ಎಂದ ಓವೈಸಿ
  • ಇಸ್ರೇಲ್​ ಪ್ರಧಾನಿ ಒಬ್ಬ ಯುದ್ಧ ಅಪರಾಧಿ ಎಂದ ಎಐಎಂಐಎಂ ಅಧ್ಯಕ್ಷ
ಹೈದರಾಬಾದ್​: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ಸದ್ಯ ಎರಡು ದಿನಗಳ ಇಸ್ರೇಲ್​ ಪ್ರವಾಸದಲ್ಲಿದ್ದು, ಈ ಪ್ರವಾಸದ ಬಗ್ಗೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ತೀವ್ರ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಇಸ್ರೇಲ್ ಪ್ರಧಾನಿ ವಿರುದ್ಧ ಹರಿಹಾಯ್ದ ಓವೈಸಿ, ಬೆಂಜಮಿನ್ ನೆತನ್ಯಾಹು ಒಬ್ಬ ಯುದ್ಧ ಅಪರಾಧಿ ಅವನು ಗಾಜಾದಲ್ಲಿ ನರಮೇಧ ನಡೆಯಲು ಕಾರಣನಾದವನು, ಅವರ ವಿರುದ್ಧ ಅಂತರರಾಷ್ಟ್ರೀಯ ವಾರಂಟ್ ಹೊರಡಿಸಲಾಗಿದೆ. ಪ್ರಧಾನಿ ಮೋದಿ ಈಗ ಅವರನ್ನು ಬೇಟಿ ಮಾಡಿದ್ದರಿಂದ, ಅಮೆರಿಕ ಇರಾನ್ ವಿರುದ್ಧ ಮಿಲಿಟರಿ ಕ್ರಮ ಕೈಗೊಳ್ಳಬಹುದು ಎಂದು ಓವೈಸಿ ಹೇಳಿದ್ದಾರೆ.
ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿಯನ್ನು ಅಪ್ಪಿಕೊಂಡಿರುವುದು ಭಾರತದ ನೀತಿಯ ವಿರುದ್ಧವಾಗಿದ್ದು, ಇದರಿಂದ ಪ್ಯಾಲೆಸ್ಟೀನಿಯನ್ ಜನರ ಹಕ್ಕಿಗಳಿಗೆ ಬೆಂಬಲವಾಗಿ ನಿಂತ ಭಾರತದ ವಿದೇಶಾಂಗ ನೀತಿಗೆ ವಿರೋಧವಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬರಲಿಲ್ಲ, ಆದರೆ ಭಾರತವು ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್​ ನಡುವೆ ಶಾಂತಿ ಸ್ಥಾಪಿಸುವ ಪಕ್ಷದಲ್ಲಿದೆ ಎಂದು ಈ ಹಿಂದೆ ತಿಳಿಸಿದೆ.

ಭಾರತ - ಇಸ್ರೇಲ್​ ಸಂಬಂಧ

ಕಳೆದ ಕೆಲ ದಶಕಗಳಿಂದ ಭಾರತ ಮತ್ತು ಇಸ್ರೇಲ್​ ನಡುವಿನ ಸಂಬಂಧ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ರಕ್ಷಣೆ, ಸೈಬರ್ ಭದ್ರತೆ, ಕೃಷಿ ತಂತ್ರಜ್ಞಾನ, ನೀರಿನ ನಿರ್ವಹಣೆ ಮತ್ತು ನವೋದ್ಯಮ ಪರಿಸರ ವ್ಯವಸ್ಥೆ ಮುಂತಾದ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ಹಲವಾರು ಒಪ್ಪಂದ ಮತ್ತು ವಿನಿಮಯ ನಡೆದಿದೆ.
ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಅವರ ಇಸ್ರೇಲ್​ ಭೇಟಿಯನ್ನು ರಾಜತಾಂತ್ರಿಕವಾಗಿ ಭಾರತಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತಿದೆ. ಇಸ್ರೇಲ್​ ಭಾರತಕ್ಕೆ ರಕ್ಷಣಾ ವ್ಯವಸ್ಥೆಯ ತಂತ್ರಜ್ಞಾನ ನೀಡುವುದರಲ್ಲಿ ಪ್ರಮುಖ ದೇಶವಾಗಿದ್ದು, ಇಸ್ರೇಲ್ ಭಾರತಕ್ಕೆ ಸುಧಾರಿತ ಭದ್ರತಾ ವ್ಯವಸ್ಥೆ, ಕ್ಷಿಪಣಿ ತಂತ್ರಜ್ಞಾನ, ರಾಡಾರ್ ವ್ಯವಸ್ಥೆ ಮತ್ತು ಕಣ್ಗಾವಲು ಸಾಧನಗಳನ್ನು ಒದಗಿಸುತ್ತಿದೆ. ಡ್ರೋನ್ ತಂತ್ರಜ್ಞಾನ, ಕ್ಷಿಪಣಿ ವಿರೋಧಿ ವ್ಯವಸ್ಥೆಗಳು ಮತ್ತು ಗಡಿ ಭದ್ರತಾ ಸಾಧನಗಳಲ್ಲಿ ಇಸ್ರೇಲಿ ಪರಿಣತಿಯನ್ನು ಭಾರತದ ಭದ್ರತಾ ಅಗತ್ಯಗಳಿಗೆ ನಿರ್ಣಾಯಕವೆಂದು ಪರಿಗಣಿಸಲಾಗಿದೆ. ಹೀಗಾಗಿ ಇಸ್ರೇಲ್​ ಭಾರತದ ಮಿತ್ರ ರಾಷ್ಟ್ರ ಎಂದು ಹೇಳಬಹುದಾಗಿದೆ,(ಏಜನ್ಸೀಸ್​).