ನೀಟ್​ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣ 
ದೇಶ

ನೀಟ್ ಪೇಪರ್ ಲೀಕ್ ಪ್ರಕರಣ: ಮುಂದುವರೆದ ಸಿಬಿಐ ಬೇಟೆ; ಲಾತೂರ್ ವೈದ್ಯ, ಪುಣೆ ಕೋಚಿಂಗ್ ಪ್ರೊಫೆಸರ್ ಅರೆಸ್ಟ್! NEET Paper Leak

ಪ್ರಮುಖ ಮುಖ್ಯಾಂಶಗಳು

  • ನೀಟ್​ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣ
  • ಮಹಾರಾಷ್ಟ್ರದ ವೈದ್ಯ ಹಾಗೂ ಕೋಚಿಂಗ್​ ಶಿಕ್ಷಕನನ್ನು ಬಂಧಿಸಿದ ಸಿಬಿಐ
  • ಮೇ. 3 ರಂದು ನಡೆದಿದ್ದ ಪರೀಕ್ಷೆ, ಜೂನ್​ 21 ರಂದು ನಡೆಯಲಿರುವ ಮರು ಪರೀಕ್ಷೆ
ಮಹಾರಾಷ್ಟ್ರ: ದೇಶದ ಲಕ್ಷಾಂತರ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ್ದ ನೀಟ್​ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ (NEET Paper Leak) ಪ್ರಕರಣ ಚುರುಕಾಗಿದ್ದು, ತನಿಖೆ ನಡೆಸುತ್ತಿರುವ ಸಿಬಿಐ ಇಂದು (ಮೇ.27) ಲಾತೂರ್​ ಮೂಲದ ವೈದ್ಯ ಹಾಗೂ ಪುಣೆಯ ಕೋಚಿಂಗ್​ ಶಿಕ್ಷಕನೊಬ್ಬನನ್ನು ಬಂಧಿಸಿದೆ ಎಂದು ತಿಳಿದು ಬಂದಿದೆ.

ವೈದ್ಯ ಹಾಗೂ ಪ್ರಾಧ್ಯಾಪಕನ ಬಂಧನ!

ವರ್ಷವಿಡಿ ಕಷ್ಟಪಟ್ಟು ಓದಿ ಡಾಕ್ಟರ್​ ಆಗುವ ಕನಸನ್ನು ಹೊತ್ತಿದ್ದ ಲಕ್ಷಾಂತರ ಮಕ್ಕಳ ಕನಸಿಗೆ ತಣ್ಣೀರನ್ನೇರೆಚಿದ್ದ ಹಿನ್ನಲೆ ಈ ಪ್ರಕರಣದ ವಿಚಾರಣೆಯನ್ನು ಕೇಂದ್ರ ತನಿಖಾ ದಳ ನಡೆಸುತ್ತಿದ್ದು, ಈಗ ಮಹಾರಾಷ್ಟ್ರದ ಲಾತೂರ್​ ಮೂಲದ ಡಾ. ಮನೋಜ್ ಶಿರೂರೆ ಎಂಬ ವೈದ್ಯನನ್ನು ಹಾಗೂ ಪುಣೆಯ ತೇಜಸ್ ಹರ್ಷದ್‌ಕುಮಾರ್ ಶಾ ಎಂಬ ಭೌತಶಾಸ್ತ್ರ ಪ್ರಾಧ್ಯಾಪಕನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಡಾ. ಮನೋಜ್ ಶಿರೂರೆ, ರೇಣುಕೈ ಕೆರಿಯರ್ ಸೆಂಟರ್ (ಆರ್‌ಸಿಸಿ) ಸಂಸ್ಥಾಪಕ ಶಿವರಾಜ್ ಮೋಟೆಗಾಂವ್ಕರ್, ಹಾಗೂ ಇನ್ನೊಬ್ಬ ಆರೋಪಿ ಪಿ.ವಿ ಕುಲಕರ್ಣಿ ಅವರಿಂದ ರಸಾಯನಶಾಸ್ತ್ರದ ಪ್ರಶ್ನೆಗಳನ್ನು ಪಡೆದ ಹಿನ್ನಲೆ ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.
ಇನ್ನೊಬ್ಬ ಬಂಧಿತ ವ್ಯಕ್ತಿ ತೇಜಸ್ ಹರ್ಷದ್‌ಕುಮಾರ್ ಶಾ, ಮತ್ತೊಬ್ಬ ಆರೋಪಿಯಾಗಿರುವ ಭೌತಶಾಸ್ತ್ರ ಪ್ರಶ್ನೆ ಪತ್ರಿಕೆ ಭಾಷಾಂತ ವಿಭಾಗದಲ್ಲಿ ಕೆಲಸ ಮಾಡಿದ್ದ ಮನೀಷಾ ಹವಾಲ್ದಾರ್ ನಿಂದ ಪ್ರಶ್ನೆಗಳನ್ನು ಪಡೆದುಕೊಂಡ ಹಿನ್ನಲೆಯಲ್ಲಿ ಬಂಧನವಾಗಿದೆ ಎನ್ನಲಾಗಿದೆ.

ನೀಟ್ ಪರೀಕ್ಷೆ ರದ್ದು

ರಾಜಸ್ಥಾನದಲ್ಲಿ ನಡೆದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಹಿನ್ನೆಲೆ ಮೇ3 ರಂದು ನಡೆಸಲಾದ ಯುಜಿ ನೀಟ್ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರದ್ದುಗೊಳಿಸಿದೆ.
ರಾಜಸ್ಥಾನದ ಸೀಕರ್ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಹಿನ್ನೆಲೆ ಮರು ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ. ಪರೀಕ್ಷೆ ಬರೆದಿದ್ದ 22,05,035 ವಿದ್ಯಾರ್ಥಿಗಳಿಗೆ ಇದರಿಂದ ಆಘಾತ ಎದುರಾದರೂಯಾವ ವಿದ್ಯಾರ್ಥಿಗೂ ಅನ್ಯಾಯವಾಗದಿರಲಿ ಎಂಬ ನಿಟ್ಟಿನಲ್ಲಿ ಸದ್ಯ ಎನ್ಟಿಎ ಈ ನಿರ್ಧಾರವನ್ನು ಕೈಗೊಂಡಿದ್ದು, ಸೋರಿಕೆಯ ಪ್ರಕರಣವನ್ನು ಗಮನಿಸಿದ ಕೇಂದ್ರ ಸರ್ಕಾರ ಸಿಬಿಐಗೆ ತನಿಖೆ ನಡೆಸುವಂತೆ ಆದೇಶಿಸಿದೆ. ನೀಟ್​ ಮರು ಪರೀಕ್ಷೆಯು ಜೂನ್​ 21 ರಂದು ನಡೆಯಲಿದೆ ಎಂದು ಎನ್​ಟಿಎ ತಿಳಿಸಿದೆ, (ಏಜನ್ಸೀಸ್).