ನೀಟ್ ಗಾಯಾಳು ಜತೆ ‘ಖಾನ್ ಚಾಚಾ’ ರೋಲ್ ಸವಿದ ರಾಹುಲ್ ಗಾಂಧಿ
- ನೀಟ್ ಪ್ರತಿಭಟನೆಯ ಗಾಯಾಳು ಜತೆ ರಾಹುಲ್ ಗಾಂಧಿ ಧರಣಿ
- ದೆಹಲಿಯ ಜನಪ್ರಿಯ ‘ಖಾನ್ ಚಾಚಾ’ ರೋಲ್ ಸವಿದ ರಾಹುಲ್
- ಖಾನ್ ಚಾಚಾ ರೋಲ್‌ನ್ನು ದೆಹಲಿ ಸ್ಟೈಲ್ ಫ್ರಾಂಕಿ ಎನ್ನುವುದು ಯಾಕೆ?
ನವದೆಹಲಿ: ನೀಟ್ ಧರಣಿ ವೇಳೆ ಪೆಲೆಟ್ ಗನ್‌ನಿಂದ ಗಾಯಗೊಂಡಿದ್ದ ಯುವಕ ಸಾಹಿಲ್ ಲೋಚಬ್ ಜತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯ ಸಂಸತ್ ಮಾರ್ಗ್‌ನಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರೊಟೆಸ್ಟ್ ವೇಳೆ ರಾಹುಲ್, ದೆಹಲಿಯ ಜನಪ್ರಿಯ ‘ಖಾನ್ ಚಾಚಾ’ ರೋಲ್ ಸವಿದಿರುವುದು ನೆಟ್ಟಿಗರ ಗಮನ ಸೆಳೆದಿದೆ.
ಸಾಹಿಲ್ ಲೋಚಬ್ ಜತೆ ರಾಹುಲ್ ಗಾಂಧಿ ಸಂಸತ್ ಮಾರ್ಗ್ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು. ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ನೀಟ್(NEET) ಸಂಬಂಧಿತ ಚಳುವಳಿ ವೇಳೆ ಪೆಲೆಟ್ ಗನ್‌ನಿಂದ ಗುಂಡು ಹಾರಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಘಟನೆಯಲ್ಲಿ ಲೋಚಬ್ ಕಣ್ಣು ಹಾಗೂ ಹೊಟ್ಟೆ ಭಾಗಕ್ಕೆ ಗಾಯಗಳಾಗಿವೆ ಎನ್ನಲಾಗಿದೆ.
ಖಾನ್ ಚಾಚಾ ರೋಲ್‌ನಲ್ಲಿ ಏನಿರುತ್ತೆ?
ಖಾನ್ ಚಾಚಾ’ ರೋಲ್ ಅಂದ್ರೆ ಸರಳವಾಗಿ ಹೇಳುವುದಾದರೆ, ದೆಹಲಿ ಸ್ಟೈಲ್ ಕಬಾಬ್ ಫ್ರಾಂಕಿ. ತೆಳುವಾದ, ಮೃದುವಾದ ರುಮಾಲಿ ರೊಟ್ಟಿಯೊಳಗೆ ಜ್ಯೂಸಿ ಕಬಾಬ್‌ಗಳನ್ನು ತುಂಬಿ, ಅದಕ್ಕೆ ಈರುಳ್ಳಿ, ಚಟ್ನಿ ಮತ್ತು ಸಾಸ್ ಸೇರಿಸಿ ರೋಲ್ ಮಾಡಲಾಗುತ್ತೆ.
ಇದರಲ್ಲಿನ ಚಿಕನ್ ಹಾಗೂ ಮಟನ್ ಸೀಖ್, ಕಾಕೋರಿ ಮತ್ತು ಟಿಕ್ಕಾ ಕಬಾಬ್‌ಗಳು ಪ್ರಮುಖ ಆಕರ್ಷಣೆ. ಬಾಯಲ್ಲಿ ಕರಗುವಷ್ಟು ಮೃದುವಾದ ಕಬಾಬ್, ಸಾಫ್ಟ್ ರುಮಾಲಿ ರೊಟ್ಟಿ ಮತ್ತು ಮಿಂಟ್-ಗ್ರೀನ್ ಚಟ್ನಿಯ ಕಾಂಬಿನೇಷನ್ ಈ ರೋಲ್‌ಗೆ ವಿಶೇಷ ರುಚಿ ಕೊಡುತ್ತದೆ. ಒಂದು ಕಡೆ ಕಬಾಬ್‌ನ ಸ್ಮೋಕಿ ಫ್ಲೇವರ್, ಇನ್ನೊಂದು ಕಡೆ ಚಟ್ನಿಯ ಫ್ರೆಶ್ ರುಚಿ, ಇವೆರಡೂ ಸೇರಿ ‘ಒಮ್ಮೆ ತಿಂದ್ರೆ ಮತ್ತೊಮ್ಮೆ ತಿನ್ನಬೇಕು’ ಅನ್ನಿಸುವಂಥ ಕಾಂಬಿನೇಷನ್ ಆಗುತ್ತದೆ.
ದೆಹಲಿಯ ಫೇಮಸ್ ಫುಡ್ ಸ್ಪಾಟ್ ‘ಖಾನ್ ಚಾಚಾ’
ದೆಹಲಿಯ ಫುಡ್ ಲವರ್ಸ್‌ಗೆ ‘ಖಾನ್ ಚಾಚಾ’ ಅನ್ನೋ ಹೆಸರು ಹೊಸದೇನಲ್ಲ. ಕಬಾಬ್ ಮತ್ತು ರೋಲ್‌ಗಳಿಗಾಗಿ ಜನಪ್ರಿಯವಾದ ಈ ಫುಡ್ ಸ್ಪಾಟ್‌ಗೆ ಸೆಲೆಬ್ರಿಟಿಗಳು, ರಾಜಕಾರಣಿಗಳು, ಪ್ರವಾಸಿಗರು ಸೇರಿದಂತೆ ಸಾಕಷ್ಟು ಮಂದಿ ಭೇಟಿ ಕೊಡುತ್ತಾರೆ. ಇಲ್ಲಿನ ರೋಲ್‌ಗಳ ವಿಶೇಷತೆ ಏನಂದ್ರೆ, ತೆಳುವಾದ ರೊಟ್ಟಿಯೊಳಗೆ ಸಾಕಷ್ಟು ಫ್ಲೇವರ್ ಇರುವ ಕಬಾಬ್ ಫಿಲ್ಲಿಂಗ್ ಕೊಡಲಾಗುತ್ತದೆ. ಈ ಕಾರಣಕ್ಕೇ ಇದು ದೆಹಲಿಯ ಜನಪ್ರಿಯ ಸ್ಟ್ರೀಟ್-ಫುಡ್ ಆಯ್ಕೆಗಳಲ್ಲಿ ಒಂದಾಗಿದೆ.
ರಾಹುಲ್ ಪ್ರತಿಭಟನೆ ನಡೆಸಿದ್ದು
ಯಾಕೆ?
ಪೆಲೆಟ್ ಗನ್ ಬಳಕೆಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಬೇಕು ಎಂದು ಆಗ್ರಹಿಸಿ ರಾಹುಲ್ ಗಾಂಧಿ ಧರಣಿ ನಡೆಸಿದರು. ಜುಲೈ 20ರಂದು ಜಂತರ್ ಮಂತರ್‌ನಲ್ಲಿ ನಡೆದ ನೀಟ್ ಪ್ರತಿಭಟನೆಯಲ್ಲಿ ಗಾಯಗೊಂಡಿದ್ದ ಸಾಹಿಲ್ ಲೋಚಬ್‌ಗೆ ಬೆಂಬಲವಾಗಿ ಪೊಲೀಸ್ ಠಾಣೆ ಎದುರು ಪ್ರೊಟೆಸ್ಟ್ ಮಾಡಿದರು.
ಹೀಗಾಗಿ, ಒಂದು ಕಡೆ ನೀಟ್ ವಿಚಾರವಾಗಿ ರಾಜಕೀಯ ಚರ್ಚೆ ಜೋರಾಗಿದ್ದರೆ, ಮತ್ತೊಂದು ಕಡೆ ರಾಹುಲ್ ಗಾಂಧಿ ಮತ್ತು ಸಾಹಿಲ್ ಲೋಚಬ್ ಸವಿದ ‘ಖಾನ್ ಚಾಚಾ ರೋಲ್’ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗುತ್ತಿದೆ,(ಏಜೆನ್ಸೀಸ್).