Nana Patekar Postmortem: ದೇಶಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ದುಃಖಕ್ಕೀಡು ಮಾಡಿದ ಹಿರಿಯ ನಟ ನಾನಾ ಪಾಟೇಕರ್ ಅವರ ಸಾವಿಗೆ ಅಸಲಿ ಕಾರಣವೇನು..? ಮರಣೋತ್ತರ ಪರೀಕ್ಷೆಯ ವರದಿಯು ಕೊನೆಗೂ ಆ ರಹಸ್ಯವನ್ನು ಬಯಲು ಮಾಡಿದ್ದು, ಹಿರಿಯ ನಟ ನಾನಾ ಪಾಟೇಕರ್ ಅವರ ಸಾವಿಗೆ ಹೃದಯದ ಪ್ರಮುಖ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಉಂಟಾದ ತೀವ್ರ ಹೃದಯಾಘಾತವೇ (Acute Myocardial Infarction) ಕಾರಣ ಎಂದು ಗೋವಾ ವೈದ್ಯಕೀಯ ಕಾಲೇಜು ಸ್ಪಷ್ಟಪಡಿಸಿದೆ. ಇದು ಸಂಪೂರ್ಣ ಸ್ವಾಭಾವಿಕ ಸಾವು ಎಂದು ವೈದ್ಯರು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ.
ಬಾಂಬೊಲಿಮ್‌ನಲ್ಲಿರುವ ಗೋವಾ ವೈದ್ಯಕೀಯ ಕಾಲೇಜಿನ ಮೂವರು ಹಿರಿಯ ವೈದ್ಯರ ತಂಡವು ಮರಣೋತ್ತರ ಪರೀಕ್ಷೆಯನ್ನು ನಡೆಸಿ, ಅಕ್ಟೋಬರ್ 8 ರಂದು ಆಸ್ಪತ್ರೆಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದೆ.
ಇದನ್ನೂ ಓದಿ:ಸಾವಿಗೂ ಮುನ್ನ ನಾನಾ ಪಾಟೇಕರ್ ಆಡಿದ ಆ ಕೊನೆಯ ಪದಗಳು: ಕಣ್ಣೀರಾದ ಆಪ್ತ ಸ್ನೇಹಿತ ತುಕಾರಾಂ ಮುಂಡೆ! | Nana Patekar
ನಾನಾ ಪಾಟೇಕರ್ ಅವರ ನಿವಾಸಕ್ಕೆ ತಲುಪಿದ ಬಳಿಕ ಆಂಬುಲೆನ್ಸ್ ವ್ಯವಸ್ಥೆ ಮಾಡಲು ಕೇರ್‌ಟೇಕರ್ ಅನ್ನು ಆಸ್ಪತ್ರೆಗೆ ಕಳುಹಿಸಲಾಯಿತು. ನಂತರ ತುರ್ತು ವೈದ್ಯಕೀಯ ತಂಡವು ಪಾಟೇಕರ್ ಅವರ ಮನೆಗೆ ತಲುಪಿತು. ಡಾ. ಸಲ್ಕರ್ ಅವರ ಪ್ರಕಾರ, ವೈದ್ಯಕೀಯ ಸಹಾಯ ತಲುಪುವಷ್ಟರಲ್ಲಿ ನಟರು ಸಂಪೂರ್ಣವಾಗಿ ಪ್ರತಿಕ್ರಿಯಿಸದ ಸ್ಥಿತಿಯಲ್ಲಿದ್ದರು, ತದನಂತರ ಸಿಪಿಆರ್ (CPR) ಆರಂಭಿಸಲಾಯಿತು. ಬೆಳಿಗ್ಗೆ 4:20 ರ ಸುಮಾರಿಗೆ ಪಾಟೇಕರ್ ಅವರನ್ನು ಗೋವಾದ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರನ್ನು ಆಸ್ಪತ್ರೆಗೆ ಕರೆತಂದ ನಂತರ ವೈದ್ಯರು ಅವರನ್ನು ಬದುಕುಳಿಸುವ ಪ್ರಯತ್ನಗಳನ್ನು ಮುಂದುವರೆಸಿದರು.
ವೈದ್ಯರು ಸುಮಾರು 45 ನಿಮಿಷಗಳ ಕಾಲ ಕಾರ್ಡಿಯಾಕ್ ಮಸಾಜ್ ಮತ್ತು ಸಿಪಿಆರ್ ಮುಂದುವರೆಸಿರುವುದಾಗಿ ಡಾ. ಸಲ್ಕರ್ ಹೇಳಿದರು. ಎಷ್ಟೇ ಪ್ರಯತ್ನಿಸಿದರೂ ಪಾಟೇಕರ್ ಅವರನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ ಮತ್ತು ಬೆಳಿಗ್ಗೆ 5:20 ರ ಸುಮಾರಿಗೆ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಪಾಟೇಕರ್ ಅವರು ಮಣಿಪಾಲ್ ಆಸ್ಪತ್ರೆಯ ನೋಂದಾಯಿತ ರೋಗಿಯಾಗಿರಲಿಲ್ಲದ ಕಾರಣ, ಈ ಪ್ರಕರಣವನ್ನು ವೈದ್ಯಕೀಯ-ಕಾನೂನು ಪ್ರಕರಣವೆಂದು ಪರಿಗಣಿಸಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ತದನಂತರ ಮರಣೋತ್ತರ ಪರೀಕ್ಷೆಗಾಗಿ ಅವರ ಮೃತದೇಹವನ್ನು ಗೋವಾ ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಯಿತು.
ಅಕ್ಟೋಬರ್ 8 ರಂದು ಪಣಜಿ ಪೊಲೀಸರಿಗೆ ನಟರ ಸಾವಿನ ಬಗ್ಗೆ ಮಾಹಿತಿ ನೀಡಲಾಗಿದ್ದು, ನಿಯಮಾನುಸಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಂತರ ಮರಣೋತ್ತರ ಪರೀಕ್ಷೆಗಾಗಿ ನಾನಾ ಪಾಟೇಕರ್ ಅವರ ಮೃತ ದೇಹವನ್ನು ಬಾಂಬೊಲಿಮ್‌ನಲ್ಲಿರುವ ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಸೋದರಳಿಯ ಪ್ರಸಾದ್ ಪಾಟೇಕರ್ ಅವರ ಉಪಸ್ಥಿತಿಯಲ್ಲಿ ಈ ಪರೀಕ್ಷೆಯನ್ನು ನಡೆಸಲಾಯಿತು. ನಟನ ಮಗ ಮಲ್ಹಾರ್ ಪಾಟೇಕರ್ ಕೂಡ ಗೋವಾಕ್ಕೆ ಆಗಮಿಸಿ ಮರಣೋತ್ತರ ಪರೀಕ್ಷೆಗೆ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದರು. ತನಿಖೆಯ ಸಂದರ್ಭದಲ್ಲಿ ಪೊಲೀಸರು ಮಲ್ಹಾರ್ ಮತ್ತು ಪ್ರಸಾದ್ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ನಟನ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರ ಕುಟುಂಬದವರು ಪೊಲೀಸರಿಗೆ ಸ್ಪಷ್ಟಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆ ಮುಗಿದ ಬಳಿಕ, ಪಾಟೇಕರ್ ಅವರ ಪಾರ್ಥೀವ ಶರೀರವನ್ನು ಕುಟುಂಬದವರಿಗೆ ಹಸ್ತಂತರಿಸಲಾಯಿತು. ನಂತರ ಅದನ್ನು ಪುಣೆ ಸಮೀಪದ ದಂಜೆ ಗ್ರಾಮದ ಫಾರ್ಮ್‌ಹೌಸ್‌ಗೆ ಸಾಗಿಸಿ ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರವನ್ನು ನೆರವೇರಿಸಲಾಯಿತು. ಈ ಅಂತ್ಯಕ್ರಿಯೆಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್, ಕೇಂದ್ರ ಸಚಿವರಾದ ರಾಮದಾಸ್ ಅಠಾವಳೆ, ಲೋಕಸಭಾ ಸಂಸದ ಸುನಿಲ್ ತತ್ಕರೆ, ನಟ ಜಾಕಿ ಶ್ರಾಫ್ ಮತ್ತು ನಾಮ್ ಫೌಂಡೇಶನ್ನ ಸಹ-ಸಂಸ್ಥಾಪಕರಾದ ನಟ ಮಕರಂದ ಅನಸ್‌ಪುರೆ ಸೇರಿದಂತೆ ರಾಜಕೀಯ ಹಾಗೂ ಚಲನಚಿತ್ರ ರಂಗದ ಅನೇಕ ಗಣ್ಯರು ಭಾಗವಹಿಸಿದ್ದರು(ಏಜೆನ್ಸೀಸ್).