ವಿವಾದಿತ ಹೇಳಿಕೆಯ ಕುರಿತು ಸ್ಪಷ್ಟನೆ ನೀಡುತ್ತಿರುವ ಬಾಲಿವುಡ್ ನಟ ಸಂಜಯ್ ದತ್. 
ದೇಶ

"ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ": 'ದೇಶದಲ್ಲಿ ಶಾಂತಿ ಇಲ್ಲ' ಹೇಳಿಕೆ; ವಿವಾದದ ಬಳಿಕ ಸಂಜಯ್​ ದತ್​ ಸ್ಪಷ್ಟನೆ! Sanjay Dutt

"ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ": ದೇಶದಲ್ಲಿ ಶಾಂತಿ ಇಲ್ಲ ಎಂದಿದ್ದ ಹೇಳಿಕೆ ವಿವಾದವಾದ ಬಳಿಕ ನುಡಿದ ಸಂಜಯ್ ದತ್ ಸ್ಪಷ್ಟನೆ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂಬೈ: ಇತ್ತೀಚೆಗೆ ನಟ ಸಂಜಯ್​ ದತ್, ಕಾಮೆಡಿಯನ್​ ಶೇಖರ್​ ಸುಮನ್​ ಅವರ ಪಾಡ್​​ಕಾಸ್ಟ್​ನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ವಿಶೇಷ ಅಥಿತಿಯಾಗಿ ಆಗಮಿಸಿದ್ದ ಸಂದರ್ಭದಲ್ಲಿ ಭಾರತದ ಕುರಿತು ನೀಡಿದ್ದ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿತ್ತು. ಈಗ ಅದಕ್ಕೆ ನಟ ಸಂಜಯ್​ ದತ್​ ಸ್ಪಷ್ಟನೆ ನೀಡಿದ್ದಾರೆ.

ಬಾಬಾ ಹೇಳಿದ್ದೇನು?

ಬಾಲಿವುಡ್​ನಲ್ಲಿ ಸಂಜು ಬಾಬಾ ಎಂದೇ ಖ್ಯತಾರಾಗಿರುವ ನಟ ಸಂಜಯ್​ ದತ್​​ ಗಾಂಧಿ ಜಯಂತಿ ದಿನದ ವಿಶೇಷ ಕಾರ್ಯಕ್ರಮದಲ್ಲಿ ಕಾಮೆಡಿಯನ್​ ಶೇಖರ್​ ಸುಮನ್​ ಅವರ ಪಾಡ್​ಕಾಸ್ಟ್​​ನಲ್ಲಿ ಕಾಣಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಸಂಜಯ್​ ದತ್​, ತಮ್ಮ ಖ್ಯಾತ ಮುನ್ನಾಭಾಯ್​ ಶೈಲಿಯಲ್ಲಿ ದೇಶದ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಬಗ್ಗೆ ಹಾಸ್ಯಾತ್ಮಕವಾಗಿ ಮಾತನಾಡಿದ್ದರು.

ಇದೇ, ವೇಳೆ ದೇಶದಲ್ಲಿ ಮೊದಲಿನಂತೆ ಶಾಂತಿ ಇಲ್ಲದಾಗಿದೆ. ದೇಶದಲ್ಲಿ ಮೊದಲಿದ್ದ ಶಾಂತ ವ್ಯವಸ್ಥೆ ಮತ್ತೆ ಮರಳಬೇಕಿದೆ ಎಂದು ಸಂಜಯ್​ ದತ್​​ ನೀಡಿದ್ದ ಹೇಳಿಕೆ ವಿವಾದದ ರೂಪ ಪಡೆದುಕೊಂಡಿತ್ತು. ಈಗ ಈ ಹೇಳಿಕೆ ವಿವಾದ ತೀವ್ರವಾಗುತ್ತಿದ್ದಂತೆ ನಟ ಸಂಜು ಸ್ಪಷ್ಟನೆ ನೀಡಿದ್ದಾರೆ.

ಹಾಗೆಯೇ, ನಾನೇನಾದರೂ ದೇಶದ ಪ್ರಧಾನಿ ಆದರೆ, ವಿದೇಶಗಳನ್ನು ಸುತ್ತುತ್ತಾ ಇರುವುದಿಲ್ಲ, ಬದಲಿಗೆ ದೇಶದ ಜನರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇನೆಂದು ಬಾಬಾ, ಪ್ರಧಾನಿ ಮೋದಿ ಅವರ ಕಾಲೇಳಿದ್ದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ಗೆ ಟ್ರಂಪ್​ ಮಾಮು ಎಂದು ಕರೆದ ನಟ, ಜಗತ್ತಿನಲ್ಲಿ ಶಾಂತಿ ನೆಲೆಸಬೇಕೆಂದರೆ ನೀನು ಮೊದಲು ಗಾಂಧಿಗಿರಿ ಬಗ್ಗೆ ತಿಳಿಯಬೇಕು. ವಿಶ್ವದಲ್ಲಿ ಸಾಕಷ್ಟು ಕ್ಷಿಪಣಿಗಳಿವೆ. ಇದರಿಂದ ಮುಕ್ತಿ ಪಡೆಯಲು ಶಾಂತಿ ಮತ್ತು ಮಾತುಕತೆಗೆ ಮುಂದಾಗಬೇಕು. ನಿನಗೆ ಮುಂದಿನ ಸಲ ಕೋಪ ಬಂದರೆ ಆ ದೇಶಕ್ಕೆ ಹೂವನ್ನು ಕಳುಹಿಸು ಎಂದು ಬಾಬಾ ಹಾಸ್ಯಮಾಡಿದ್ದರು.

ಅದೊಂದು ಸ್ಕ್ರಿಪ್ಟಡ್​ ಶೋ!

ತಾವು ಶೇಖರ್​ ಸುಮನ್​ ಅವರ ಪಾಡ್​ಕಾಸ್ಟ್​ನಲ್ಲಿ ನೀಡಿದ್ದ ಹೇಳಿಕೆ ವಿವಾದದ ರೂಪ ಪಡೆದುಕೊಳ್ಳುತ್ತಿದೆ ಎಂದು ಮನಗಂಡ ನಟ, ಟ್ವಿಟರ್​ನಲ್ಲಿ ಟ್ವಿಟ್​ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾನು ಇತ್ತೀಚೆಗೆ ನೀಡಿದ ಹೇಳಿಕೆ, ಯಾವುದೇ ವ್ಯಕ್ತಿ, ಸಮುದಾಯ ಅಥವಾ ಯಾರದೇ ಭಾವನೆಗಳಿಗೆ ಧಕ್ಕೆ, ಅವಮಾನ ಅಥವಾ ಅಗೌರವನ್ನುಂಟು ಮಾಡುವ ಉದ್ದೇಶ ಹೊಂದಿರಲಿಲ್ಲ ಎಂದು ಸಂಜಯ್​ ದತ್​ ಹೇಳಿದ್ದಾರೆ.

ಅಲ್ಲದೇ, ಆ ಕಾರ್ಯಕ್ರಮ ಗಾಂಧಿ ಜಯಂತಿಯಂದೆ ನಡೆದ ಹಿನ್ನಲೆ, ನನ್ನ ಮುನ್ನಾಭಾಯ್​ ಸಿನಿಮಾದಲ್ಲಿ ಹೇಳಲಾಗಿರುವ ಗಾಂಧಿಗಿರಿ ಎಂಬ ತತ್ವದ ಆಧಾರದ ಮೇಲೆ ಸ್ಕ್ರಿಪ್ಟ್​ಅನ್ನು ಸಿದ್ಧ ಪಡಿಸಲಾಗಿತ್ತು. ನನ್ನ ಪಾತ್ರವನ್ನು ಹಾಸ್ಯಭರಿತವಾಗಿ ತೋರಿಸಿ, ಎಲ್ಲರೊಂದಿಗೆ ಒಗ್ಗಟ್ಟು ಹಾಗೂ ಸೌಹಾರ್ದತೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಇದೊಂದು ಸ್ಕ್ರಿಪ್ಟಡ್ ಕಾರ್ಯಕ್ರಮವಾಗಿದ್ದ ಕಾರಣ, ನನಗೆ ಮುಂಚಿತವಾಗಿ ತಿಳಿಸಲಾಗಿದ್ದ ಸಂಭಾಷಣೆಯನ್ನು ನಾನು ಹೇಳಿದ್ದೇನೆಂದು ನಟ ಸ್ಪಷ್ಟ ಪಡಿಸಿದ್ದಾರೆ.

ಪರಸ್ಪರದಲ್ಲಿ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯನ್ನು ಬೆಳೆಸುವುದು ನನ್ನ ಆ ಹೇಳಿಕೆಯ ಉದ್ದೇಶವಾಗಿತ್ತು. ಆದರೆ ಕೆಲವೊಂದಿಷ್ಟು ಜನರು ಅದನ್ನು ತಪ್ಪಾಗಿ ಅರ್ಥೈಸಿಕೊಂಡು, ಅಪಪ್ರಚಾರ ಮಾಡುತ್ತಿದ್ದಾರೆಂದು ಸಂಜಯ್​ ದತ್​ ಬರೆದುಕೊಂಡಿದ್ದಾರೆ, (ಏಜೆನ್ಸೀಸ್​).