ಉದಯನಿಧಿ ಸ್ಟಾಲಿನ್​ 
ದೇಶ

ಜಾತಿ ವ್ಯವಸ್ಥೆ ರದ್ದುಗೊಳಿಸುವುದು ನನ್ನ ಮಾತಿನ ಉದ್ದೇಶ; ಸನಾತನ ಧರ್ಮ ನಿರ್ಮೂಲನೆ ಹೇಳಿಕೆಗೆ ಉದಯನಿಧಿ ಸ್ಟಾಲಿನ್ ಸ್ಪಷ್ಟೀಕರಣ | Udayanidhi Stalin

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಸನಾತನ ಧರ್ಮ ನಿರ್ಮೂಲನೆಯಾಗಬೇಕು ಎಂದು ಹೇಳಿಕೆ ನೀಡಿ ಮತ್ತೆ ವಿವಾದವನ್ನು ಹುಟ್ಟುಹಾಕಿದ್ದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್(Udayanidhi Stalin), ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಜನರನ್ನು ಮೇಲ್ಜಾತಿ ಮತ್ತು ಕೆಳಜಾತಿಗಳಾಗಿ ವಿಭಜಿಸುವ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು ಎನ್ನುವುದು ನನ್ನ ಮಾತಿನ ಉದ್ದೇಶವಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ತಮಿಳುನಾಡು ವಿಧಾನಸಭೆಯಲ್ಲಿ ನಾನು ಮಾತನಾಡುವಾಗ, ಜನರನ್ನು ವಿಭಜಿಸುವ ಜಾತಿ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಹೇಳಿದ್ದೆ. ಇದಕ್ಕಾಗಿ ಕೆಲವರು ನನ್ನನ್ನು ಟೀಕಿಸುತ್ತಿದ್ದಾರೆ. ಆದರೆ ನಾನು ಭಯಪಡುವ ವ್ಯಕ್ತಿಯಲ್ಲ. ವಿರೋಧದಿಂದ ದ್ರಾವಿಡ ಚಳುವಳಿ ಹೊರಹೊಮ್ಮಿತು. ಆ ಅರ್ಥದಲ್ಲಿ, ನಾನು ಒಂದು ಸಣ್ಣ ವಿವರಣೆಯನ್ನು ನೀಡಲು ಬಯಸುತ್ತೇನೆ.
ಜಾತಿ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ನಾನು ಹೇಳಿದಾಗ, ಯಾರೂ ದೇವಸ್ಥಾನಕ್ಕೆ ಹೋಗಬಾರದು ಎಂದಲ್ಲ. ದೇವಾಲಯದಲ್ಲಿ ಮಾತ್ರವಲ್ಲದೆ ಸಮಾಜದಲ್ಲಿಯೂ ಎಲ್ಲರಿಗೂ ಸಮಾನ ಹಕ್ಕುಗಳಿರಬೇಕು ಎಂದರ್ಥ. ಈ ಅರ್ಥದಲ್ಲಿ ನಾನು ಮಾತನಾಡಿದ್ದೆ. ಜಾತಿ ವ್ಯವಸ್ಥೆ ರದ್ದುಗೊಳಿಸಬೇಕು ಎಂದು ಹೇಳಿದ್ದೆ ಎಂದಿದ್ದಾರೆ.
ಮುಂದುವರೆದು ಪೆರಿಯಾರ್, ಅಂಬೇಡ್ಕರ್, ಅಣ್ಣಾ ಹಾಗೂ ಕಲೈನಾರ್ ಅವರು ಹೇಳಿದ ತತ್ವಗಳ ಬಗ್ಗೆಯೂ ನಾನು ಮಾತನಾಡಿದೆ. ನಾವು ಯಾರ ದೇವರ ನಂಬಿಕೆಗೂ ವಿರುದ್ಧವಾಗಿಲ್ಲ. ಆದರೆ ಅಸಮಾನತೆ ಮತ್ತು ದಬ್ಬಾಳಿಕೆಯನ್ನು ಬಲವಾಗಿ ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಮಾಡಿದ ತಮ್ಮ ಮೊದಲ ಭಾಷಣದಲ್ಲೇ, ತಮಿಳು ತಾಯಿಗೆ ವಂದಿಸಿ, ಜನರನ್ನು ವಿಭಜಿ ಸನಾತನ ಧರ್ಮವನ್ನು ಖಂಡಿತವಾಗಿ ನಿರ್ಮೂಲನೆ ಮಾಡಬೇಕು ಎಂದಿದ್ದರು. 2023ರಲ್ಲೂ ಇದೇ ರೀತಿ ಹೇಳಿಕೆ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ನಾಂದಿ ಹಾಡಿದ್ದರು (ಏಜೆನ್ಸೀಸ್).