Sanchita Ugale 
ದೇಶ

ನನ್ನ ಮಗಳಿಗೆ ಕಿರುಕುಳ ಕೊಡುತ್ತಿದ್ದರು... ನಟಿ Sanchita Ugale ಸಾವಿನ ಬಗ್ಗೆ ತಂದೆಯ ಸ್ಫೋಟಕ ಆರೋಪ!

ಮುಂಬೈ: ಕೇವಲ 22 ವರ್ಷ ವಯಸ್ಸಿನ ಕಿರುತೆರೆ ನಟಿ ಸಂಚಿತಾ ಉಗಾಲೆ( Sanchita Ugale ) ಅವರ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ‘ಕುಂಕುಂ ಭಾಗ್ಯ’, ‘ವಾಗ್ಲೆ ಕಿ ದುನಿಯಾ’ ಸೇರಿದಂತೆ ಹಲವು ಧಾರಾವಾಹಿಗಳ ಮೂಲಕ ಗುರುತಿಸಿಕೊಂಡಿದ್ದ ಸಂಚಿತಾ, ಜೂನ್ 14ರಂದು ಮುಂಬೈ ಸಮೀಪದ ನಲಾಸೋಪಾರಾದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಇಡೀ ಕಿರುತೆರೆ ಲೋಕವನ್ನು ಬೆಚ್ಚಿಬೀಳಿಸಿದೆ.
ಸಂಚಿತಾ ಅವರ ಸಾವಿನ ಬಳಿಕ ಅವರ ತಂದೆ ಭಾವುಕರಾಗಿ ಮಾತನಾಡಿದ್ದು, ಮಗಳು ಹಲವು ದಿನಗಳಿಂದ ಮಾನಸಿಕ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ. ಕೆಲವೊಮ್ಮೆ ಎಲ್ಲವೂ ಸರಿಯಾಗಿರುವಂತೆ ಕಂಡರೂ, ಇದ್ದಕ್ಕಿದ್ದಂತೆ ಆಕೆ ಖಿನ್ನತೆಗೆ ಒಳಗಾಗುತ್ತಿದ್ದಳು ಎಂದು ಅವರು ತಿಳಿಸಿದ್ದಾರೆ. ಜೊತೆಗೆ, ಮಗಳಿಗೆ ಕೆಲವು ರೀತಿಯ ಕಿರುಕುಳವೂ ಎದುರಾಗುತ್ತಿತ್ತು ಎಂದು ಆರೋಪಿಸಿದ್ದಾರೆ.

ಸಾಕಷ್ಟು ನೋವು ಅನುಭವಿಸಿದ್ದಳು!

ತಂದೆಯ ಪ್ರಕಾರ, ಸಂಚಿತಾ ಹೊರಗೆ ಧೈರ್ಯವಾಗಿ ಕಾಣುತ್ತಿದ್ದರೂ ಒಳಗೊಳಗೆ ಸಾಕಷ್ಟು ನೋವನ್ನು ಅನುಭವಿಸುತ್ತಿದ್ದರು. ಮಗಳ ಸಾವಿನ ಹಿಂದಿನ ಸತ್ಯ ಹೊರಬರಬೇಕು ಹಾಗೂ ನ್ಯಾಯ ಸಿಗಬೇಕು ಎಂದು ಅವರು ಸರ್ಕಾರ ಮತ್ತು ತನಿಖಾ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಈ ನಡುವೆ ಸಂಚಿತಾ ಅವರ ಸಹೋದರ ಮತ್ತು ಕುಟುಂಬದವರು ಕೂಡ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕೆಲವು ಕಾಸ್ಟಿಂಗ್ ಏಜೆಂಟ್‌ಗಳು ಮತ್ತು ಮನರಂಜನಾ ಕ್ಷೇತ್ರದ ಕೆಲವರಿಂದ ಮಾನಸಿಕ ಒತ್ತಡ ಎದುರಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಈ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕುಟುಂಬ ಒತ್ತಾಯಿಸಿದೆ.

ಖಿನ್ನತೆಯಿಂದ ಬಳಲುತ್ತಿದ್ದರು

ಆದರೆ ಮತ್ತೊಂದೆಡೆ, ಸಂಚಿತಾ ಅವರ ಕೆಲವು ಸಹನಟರು ಮತ್ತು ಆಪ್ತರು ಬೇರೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಟಿ ಹಲವು ತಿಂಗಳುಗಳಿಂದ ಖಿನ್ನತೆಯೊಂದಿಗೆ ಹೋರಾಡುತ್ತಿದ್ದರು ಎಂದು ಅವರು ಹೇಳಿದ್ದಾರೆ. ಕೆಲವರು ಆಕೆಯ ವೈಯಕ್ತಿಕ ಜೀವನದಲ್ಲಿಯೂ ಸಮಸ್ಯೆಗಳಿದ್ದವು ಎಂದು ತಿಳಿಸಿದ್ದಾರೆ. ಸಂಚಿತಾ ಅವರ ಆಪ್ತ ಸ್ನೇಹಿತ ಹಾಗೂ ಸಹನಟ ಸೊರಬ್ ಬೇಡಿ ಮಾತನಾಡಿ, ಸಾವಿಗೆ ಎರಡು ದಿನಗಳ ಮೊದಲು ಆಕೆಯೊಂದಿಗೆ ಮಾತನಾಡಿದ್ದೆ. ಆಗ ಆಕೆ ತುಂಬಾ ಬೇಸರದಲ್ಲಿದ್ದಂತೆ ಕಂಡಳು ಎಂದು ಹೇಳಿದ್ದಾರೆ. ಇಬ್ಬರೂ ಶೀಘ್ರದಲ್ಲೇ ಭೇಟಿಯಾಗುವ ಯೋಜನೆಯನ್ನೂ ಮಾಡಿಕೊಂಡಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಜೂನ್ 14ರ ಸಂಜೆ ತಮ್ಮ ಕೊಠಡಿಯಲ್ಲಿ ಸೀರೆಯನ್ನು ಬಳಸಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಸಂಚಿತಾ ಪತ್ತೆಯಾಗಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಂಚಿತಾ ಉಗಾಲೆ ಕಿರುತೆರೆ ಮಾತ್ರವಲ್ಲದೆ ಸಿನಿಮಾ ಮತ್ತು OTT ಕ್ಷೇತ್ರದಲ್ಲಿಯೂ ತಮ್ಮದೇ ಆದ ಗುರುತು ಮೂಡಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಕನಸುಗಳನ್ನು ಹೊತ್ತು ಸಾಗುತ್ತಿದ್ದ ನಟಿಯ ಅಕಾಲಿಕ ನಿಧನ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳಿಗೆ ಆಘಾತ ತಂದಿದೆ. ಸದ್ಯ ಸಂಚಿತಾ ಸಾವಿನ ನಿಖರ ಕಾರಣ ಏನು, ಕುಟುಂಬದವರು ಮಾಡಿರುವ ಆರೋಪಗಳಲ್ಲಿ ಎಷ್ಟು ಸತ್ಯ ಇದೆ ಎಂಬುದನ್ನು ಪೊಲೀಸರು ತನಿಖೆ ಮೂಲಕ ಪತ್ತೆಹಚ್ಚಬೇಕಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಟಿಗೆ ಸಾವಿರಾರು ಮಂದಿ ಸಂತಾಪ ಸೂಚಿಸುತ್ತಿದ್ದಾರೆ,(ಏಜೆನ್ಸೀಸ್​).