ಶ್ರೀ ಮಾತಾ ವೈಷ್ಣೋದೇವಿ ಕಾಲೇಜು 
ದೇಶ

ಮುಸ್ಲಿಂ ವಿದ್ಯಾರ್ಥಿಗಳ ಪ್ರವೇಶ ವಿವಾದ; ಮಾನ್ಯತೆ ರದ್ದು ಬಳಿಕ ಮತ್ತೆ MBBS ಕೋರ್ಸ್​ ಪುನರಾರಂಭಿಸಲು ಅನುಮತಿ ಕೋರಿದ ವೈಷ್ಣೋದೇವಿ ಕಾಲೇಜು

ಶ್ರೀನಗರ: ಜಮ್ಮು-ಕಾಶ್ಮೀರದ ರಿಯಾಸಿಯಲ್ಲಿರುವ ಶ್ರೀ ಮಾತಾ ವೈಷ್ಣೋದೇವಿ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್​(SMVDIME) ಮುಂದಿನ 2026-27ರ ಶೈಕ್ಷಣಿಕ ವರ್ಷದಿಂದ ಮತ್ತೆ 50 ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಕೋರ್ಸ್ ಪುನರಾರಂಭಿಸಲು ಮಾನ್ಯತೆ ಮತ್ತು ಅನುಮತಿ ಪತ್ರ ಕೋರಿ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ ಎಂದು ವರದಿಯಾಗಿದೆ.
ಕಳೆದ ವರ್ಷದ ಹೊಸದಾಗಿ ಮೆಡಿಕಲ್ ಕಾಲೇಜು ಆರಂಭಿಸಿದ್ದ ಮಾತಾ ವೈಷ್ಣೋದೇವಿ ಕಾಲೇಜು ಆಡಳಿತ ಮಂಡಳಿಗೆ 2025-26ನೇ ಶೈಕ್ಷಣಿಕ ವರ್ಷದಿಂದ 50 ಎಂಬಿಬಿಎಸ್ ಸೀಟುಗಳನ್ನು ಮಾನ್ಯತೆ ಮತ್ತು ಅನುಮತಿಯನ್ನು ಎನ್​ಎಂಸಿ ನೀಡಿತ್ತು. ಆದರೆ ನೀಟ್ ಪರೀಕ್ಷೆ ಮೂಲಕ 50 ಸೀಟುಗಳಲ್ಲಿ 42 ಮುಸ್ಲಿಂ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ವಿವಾದಕ್ಕೆ ಕಾರಣವಾಗಿತ್ತು.
ಹಿಂದೂ ದೇವಸ್ಥಾನದಿಂದ ಆಡಳಿತ ಮಂಡಳಿಯಿಂದ ನಡೆಯುವ ಕಾಲೇಜಿನಲ್ಲಿ ಹಿಂದೂಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಬೇಕು ಎಂದು ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿ ಕಾರ್ಯಕರ್ತರು ತೀವ್ರ ಹೋರಾಟ ಮಾಡಿದ್ದರು. ಬಳಿಕ ಅನಗತ್ಯ ಮಾನದಂಡಗಳನ್ನು ಪೂರೈಸಲಾಗಿಲ್ಲ ಎಂಬ ಆರೋಪದ ಮೇಲೆ ನೀಡಿದ್ದ ಮಾನ್ಯತೆಯನ್ನು ಎನ್​ಎಂಸಿ ರದ್ದು ಮಾಡಿತ್ತು.
ಪ್ರಸ್ತುತ ಮತ್ತೆ ಮುಂದಿನ 2026-27ನೇ ಶೈಕ್ಷಣಿಕ ವರ್ಷದಿಂದ 50 ಸೀಟುಗಳಿಗೆ MBBS ಕೋರ್ಸ್ ಅನ್ನು ಪ್ರಾರಂಭಿಸಲು ಮಾನ್ಯತೆ ನೀಡುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ಆಡಳಿತ ಮಂಡಳಿ ಅರ್ಜಿ ಸಲ್ಲಿಸಿದೆ ಎಂದು ಕಾಲೇಜಿನ ಅಧ್ಯಾಪಕರೊಬ್ಬರು ಮಾಹಿತಿ ನೀಡಿದ್ದಾರೆ.

ಶ್ರೀ ಮಾತಾ ವೈಷ್ಣೋದೇವಿ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್(SMVDIME) ಎಲ್ಲಾ ಔಪಚಾರಿಕತೆಗಳನ್ನು ಪೂರ್ಣಗೊಳಿಸಿದೆ. ಫೆಬ್ರವರಿಯಲ್ಲಿ ಮಾತ್ರ NMCಗೆ ಹೊಸ ಅರ್ಜಿಯನ್ನು ಸಲ್ಲಿಸಿದೆ. ₹5 ಲಕ್ಷದಿಂದ ₹10 ಲಕ್ಷದವರೆಗೆ ಕಡ್ಡಾಯ ತಪಾಸಣೆ ಮತ್ತು ಸಂಸ್ಕರಣಾ ಶುಲ್ಕವನ್ನು ಪಾವತಿಸಿದ್ದೇವೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).