ನಿಷೇಧಿತ ಬಟನ್ ಚಾಕು, ಬ್ಲಿಂಕಿಟ್ ಡೆಲವರಿ ಆ್ಯಪ್
- ಬ್ಲಿಂಕಿಟ್‌ನಲ್ಲಿ ಚಾಕು ಆರ್ಡರ್ ಮಾಡಿ ಕೊಲೆ
- ವಿಷೇಧಿತ ಚಾಕು ಮಾರಾಟ ಮಾಡಿದ ಹಿನ್ನಲೆ ಡೆಲವರಿ ಆ್ಯಪ್ ಮೇಲೆ ಎಫ್‌ಐಆರ್
- ಬ್ಲಿಂಕಿಟ್ ಸ್ಟೋರ್‌ಗಳ ಮೇಲೆ ದಾಳಿ ಮಾಡಿದ ದೆಹಲಿ ಪೊಲೀಸರು
ನವದೆಹಲಿ: ಆನ್‌ಲೈನ್‌ನಲ್ಲಿ ದಿನಸಿ ಮುಂದಾದ ಅಗತ್ಯ ವಸ್ತುಗಳ ಪೂರೈಕೆದಾರ ವೇದಿಕೆ ಬ್ಲಿಂಕಿಟ್ (Blinkit) ನಿಂದ ಬಟನ್ ಚಾಕು ಖರೀದಿಸಿ ಕೊಲೆ ನಡೆದ ಹಿನ್ನಲೆ ಬ್ಲಿಂಕಿಟ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ನಿಷೇಧಿತ ಬಟನ್ ಚಾಕುಗಳನ್ನು ಬ್ಲಿಂಕಿಟ್ ಮಾರಾಟ ಮಾಡಿದ್ದರಿಂದ ಪ್ರಕರಣ ದಾಖಲಾಗಿದ್ದು, ಮತ್ತು ಎರಡು ಪ್ರತ್ಯೇಕ ಕೊಲೆ ಪ್ರಕರಣದ ಆರೋಪಿಗಳು ತಾವು ಕೊಲೆ ಮಾಡಲು ಚಾಕುವನ್ನು ಬ್ಲಿಂಕಿಟ್ನಿಂದ ಖರೀದಿ ಮಾಡಿದ ಬಗ್ಗೆ ಒಪ್ಪಿಕೊಂಡ ನಂತರ ದೆಹಲಿ ಪೊಲೀಸರು ಕಂಪನಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪಶ್ಚಿಮ ದೆಹಲಿಯಲ್ಲಿ ನಡೆದ ಎರಡು ಪ್ರತ್ಯೇಕ ಕೊಲೆಗಳ ತನಿಖೆಯ ಸಮಯದಲ್ಲಿ, ಎರಡೂ ಅಪರಾಧಗಳಲ್ಲಿ ಬಳಸಲಾದ ಚಾಕುಗಳನ್ನು ಬ್ಲಿಂಕಿಟ್ ಮೂಲಕ ಖರೀದಿಸಲಾಗಿದೆ ಎಂದು ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಪೊಲೀಸರು ಸಹ ಬ್ಲಿಂಕಿಟ್ ಮೂಲಕ ಅದೇ ಮಾದರಿಯ ಚಾಕುವನ್ನು ಖರೀದಿಸಿದ ಬಳಿಕ ಪ್ರಕರಣ ದಾಖಲಿದ್ದಾರೆಂದು ಮಾಹಿತಿ ದೊರೆತಿದೆ.
ಸರ್ಕಾರಿ ನಿಯಮಗಳ ಪ್ರಕಾರ, 7.62 ಸೆಂ.ಮೀ ಉದ್ದ ಮತ್ತು 1.72 ಸೆಂ.ಮೀ ಅಗಲದ ಬ್ಲೇಡ್‌ಗಳನ್ನು ಹೊಂದಿರುವ ಚಾಕುಗಳನ್ನು ಮಾತ್ರ ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಆದರೆ ಬ್ಲಿಂಕಿಟ್‌ನಲ್ಲಿ 8 ಸೆಂ.ಮೀ ಉದ್ದ ಮತ್ತು 2.5 ಸೆಂ.ಮೀ ಅಗಲವಿರುವ ಬಟನ್ ಚಾಕುವನ್ನು ಮಾರಾಟ ಮಾಡಲಾಗುತ್ತಿದ್ದು, ಇದು ಶಸ್ತ್ರಾಸ್ತ್ರ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣ ದಾಖಲಾದ ನಂತರ ಪೊಲೀಸರು ದೆಹಲಿಯಾದ್ಯಂತ ಹಲವಾರು ಬ್ಲಿಂಕಿಟ್ ಸ್ಟೋರ್‌ಗಳ ಮೇಲೆ ದಾಳಿ ನಡೆಸಿ 55 ಕ್ಕೂ ಹೆಚ್ಚು ಅಂತಹ ಚಾಕುಗಳನ್ನು ವಶಪಡಿಸಿಕೊಂಡಿದ್ದು, ಅಂತಹ ಚಾಕುಗಳನ್ನು ಮಾರಾಟ ಮಾಡಿದ್ದಕ್ಕಾಗಿ ಬ್ಲಿಂಕಿಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ,(ಏಜನ್ಸೀಸ್).