ವಿದೇಶಿ ಹಣ ವರ್ಗಾವಣೆ ವಂಚನೆ  WEB
ದೇಶ

ವಿದೇಶಕ್ಕೆ ಕೋಟ್ಯಂತರ ಹಣ ಅಕ್ರಮ ರವಾನೆ: 82 ವರ್ಷದ ಚಾರ್ಟರ್ಡ್ ಅಕೌಂಟೆಂಟ್ ಸಿಕ್ಕಿಬಿದ್ದಿದ್ದು ಹೇಗೆ?Foreign Remittance Fraud

ಬರೋಬ್ಬರಿ 2,575.83 ಕೋಟಿ ಮೌಲ್ಯದ ವಿದೇಶಿ ಹಣ ವರ್ಗಾವಣೆ ವಂಚನೆ ಪ್ರಕರಣದಲ್ಲಿ 82 ವರ್ಷದ ಚಾರ್ಟರ್ಡ್ ಅಕೌಂಟೆಂಟ್‌ಗೆ ಮುಂಬೈ ಸೆಷನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಬೆಂಗಳೂರಿನ ನಿವಾಸಿ ಸೀತಾರಾಮ್ ಭಟ್ ಎಂಬುವವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.Foreign Remittance Fraud

ಮುಂಬೈ: ಬರೋಬ್ಬರಿ 2,575.83 ಕೋಟಿ ಮೌಲ್ಯದ ವಿದೇಶಿ ಹಣ ವರ್ಗಾವಣೆ ವಂಚನೆ ಪ್ರಕರಣದಲ್ಲಿ 82 ವರ್ಷದ ಚಾರ್ಟರ್ಡ್ ಅಕೌಂಟೆಂಟ್‌ಗೆ ಮುಂಬೈ ಸೆಷನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಬೆಂಗಳೂರಿನ ನಿವಾಸಿ ಸೀತಾರಾಮ್ ಭಟ್ ಎಂಬುವವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಐದು ದಶಕಗಳಿಗೂ ಹೆಚ್ಚು ಕಾಲ ವೃತ್ತಿಯಲ್ಲಿ ಅನುಭವ ಹೊಂದಿರುವುದಾಗಿ ವಾದಿಸಿದ್ದ ಸೀತಾರಾಮ್ ಭಟ್, ತಮ್ಮ ವಯಸ್ಸು 82 ವರ್ಷವಾಗಿದ್ದು, ಬೆಂಗಳೂರಿನಿಂದಲೇ ಕಾರ್ಯನಿರ್ವಹಿಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಮುಂಬೈನ ಕಚೇರಿಯನ್ನು ಸಿಬ್ಬಂದಿ ನಿರ್ವಹಿಸುತ್ತಿದ್ದರು. ತಮ್ಮ ಡಿಜಿಟಲ್ ಸಹಿಯನ್ನು ದುರುಪಯೋಗಪಡಿಸಿಕೊಂಡು ನಕಲಿ ಗುರುತಿನ ಚೀಟಿ ಸೃಷ್ಟಿಸಿದ್ದಾರೆ. ಸಿಬ್ಬಂದಿಯ ಮೇಲ್ವಿಚಾರಣೆ ಮಾಡದಿರುವುದಷ್ಟೇ ತಮ್ಮ ತಪ್ಪು ಎಂದು ಅವರು ವಾದಿಸಿದ್ದರು. ಈ ಕುರಿತು ಅಂಧೇರಿ ಪೊಲೀಸರಿಗೂ ದೂರು ನೀಡಿರುವುದಾಗಿ ತಿಳಿಸಿದ್ದರು.

ಪ್ರಮಾಣಪತ್ರ ನೀಡುವಲ್ಲಿ ನಿಯಮ ಉಲ್ಲಂಘನೆ ಆರೋಪ

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿಕ್ರಮ್ ಜಗದಾಳೆ ಅವರು ಪ್ರಕರಣದ ವಿಚಾರಣೆ ನಡೆಸಿ, ಸೀತಾರಾಮ್ ಭಟ್ ಖಾತೆ ಪುಸ್ತಕಗಳು ಮತ್ತು ಒಪ್ಪಂದಗಳನ್ನು ಪರಿಶೀಲಿಸದೆಯೇ ಫಾರ್ಮ್ 15CB ಪ್ರಮಾಣಪತ್ರಗಳನ್ನು ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ಆರ್‌ಬಿಐ ಸುತ್ತೋಲೆ ಮತ್ತು ಆದಾಯ ತೆರಿಗೆ ನಿಯಮಗಳ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಗಮನಿಸಿದೆ.

163 ಪ್ರಮಾಣಪತ್ರಗಳ ಮೂಲಕ 200 ಕೋಟಿ ವರ್ಗಾವಣೆ

2021ರಿಂದ 2025ರ ಅವಧಿಯಲ್ಲಿ ಕೆಲವು ಸಂಸ್ಥೆಗಳು ಶೆಲ್ ಕಂಪನಿಗಳನ್ನು ಸ್ಥಾಪಿಸಿ, ನಕಲಿ ಫಾರ್ಮ್ 15CB ಪ್ರಮಾಣಪತ್ರಗಳನ್ನು ಸಿದ್ಧಪಡಿಸಿ ತೆರಿಗೆ ವಂಚನೆಗೆ ಯತ್ನಿಸಿವೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಆದಾಯ ತೆರಿಗೆ ಅಧಿಕಾರಿಗಳು ಸೆಪ್ಟೆಂಬರ್ 4ರಂದು ಹಲವು ಸಂಸ್ಥೆಗಳು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳ ವಿರುದ್ಧ ದೂರು ದಾಖಲಿಸಿದ್ದರು.ಈ ಪ್ರಕರಣದಲ್ಲಿ ಸೀತಾರಾಮ್ ಭಟ್ ಅವರು ಎಂಟು ಸಂಸ್ಥೆಗಳಿಗೆ ಸಂಬಂಧಿಸಿದಂತೆ 163 ಪ್ರಮಾಣಪತ್ರಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಇವುಗಳ ಮೂಲಕ ಸುಮಾರು 200.58 ಕೋಟಿ ಹಣವನ್ನು ವಿದೇಶಕ್ಕೆ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವಿದೆ.

ಇದನ್ನೂ ಓದಿ: ಬಿಜೆಪಿಯ ಭೀಷ್ಮ ಎಲ್ ಕೆ ಆಡ್ವಾಣಿಗೆ 100ರ ಸಂಭ್ರಮ: ದೀರ್ಘಾಯುಷ್ಯಕ್ಕಾಗಿ ಪಕ್ಷದ ಕಚೇರಿಯಲ್ಲಿ ಹೋಮ-ಹವನ! | LK Advani

ದೂರು ದಾಖಲಿಸಿರುವುದೇ ತಪ್ಪಿಸಿಕೊಳ್ಳುವ ಪ್ರಯತ್ನವೇ?

ಎಫ್‌ಐಆರ್ ದಾಖಲಾದ ಬಳಿಕ ಸೆಪ್ಟೆಂಬರ್ 11ರಂದು ಸೀತಾರಾಮ್ ಭಟ್ ನೀಡಿದ್ದ ದೂರನ್ನು ನ್ಯಾಯಾಲಯ ಅನುಮಾನದಿಂದ ನೋಡಿದೆ. ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಮತ್ತು ತಮ್ಮ ಪರವಾಗಿ ಸುಳ್ಳು ಸಮರ್ಥನೆ ಸೃಷ್ಟಿಸಲು ಈ ದೂರು ನೀಡಲಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಇದಲ್ಲದೆ, ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಆದಾಯವನ್ನು ಕಡಿಮೆ ತೋರಿಸಿರುವುದು ಮತ್ತು ಮೂಲದಲ್ಲೇ ತೆರಿಗೆ ಕಡಿತಗೊಳಿಸದಿರುವ ಅಂಶಗಳನ್ನೂ ನ್ಯಾಯಾಲಯ ಉಲ್ಲೇಖಿಸಿದೆ. ವಿದೇಶಿ ವಿನಿಮಯ ನಷ್ಟಕ್ಕೆ ಕಾರಣವಾಗಬಹುದಾದ ಗಂಭೀರ ಪ್ರಕರಣ ಇದಾಗಿದೆ ಎಂದು ಹೇಳಿರುವ ನ್ಯಾಯಾಲಯ, ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.