ಆರೋಪಿ ಸುಕೇಶ್ ಜೊತೆ ಕೈ ಜೋಡಿಸಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್
- 200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ
- ಆರೋಪಿ ಸುಕೇಶ್ ಜೊತೆ ಕೈ ಜೋಡಿಸಿದ್ದ ನಟಿ ಜಾಕ್ವೆಲಿನ್ ಫರ್ನಾಂಡಿಸ್
- ಬಾಲಿವುಡ್ ನಟಿ ವಿರುದ್ಧ ಜಾರ್ಜಶೀಟ್ ಸಲ್ಲಿಸುವಂತೆ ಕೋರ್ಟ್ ಆದೇಶ
- ಜೂನ್. 3 ರಂದು ನಡೆಯಲಿರುವ ವಿಚಾರಣೆ
ನವದೆಹಲಿ: ಬಹು ಕೋಟಿ ವಂಚಕ ಸುಕೇಶ್ ಚಂದ್ರಶೇಖರ್ ಜೊತೆಗಿನ ಸಂಪರ್ಕದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಗೆ ಈಗ ಕಾನೂನಿನ ಸಂಕೋಲೆ ಮತ್ತಷ್ಟು ಬಿಗಿಯಾಗಿದೆ.
200 ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್, ಕಿಂಗ್‌ಪಿನ್ ಸುಕೇಶ್ ಚಂದ್ರಶೇಖರ್ ಸೇರಿದಂತೆ ಒಟ್ಟು 17 ಜನರ ವಿರುದ್ಧ ಶಾರ್ಜ್ಶೀಟ್ ದಾಖಲಿಸಲು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಬುಧವಾರ (ಜೂನ್.3) ರಂದು ಈ ಪ್ರಕರಣದ ಔಪಚಾರಿಕ ದಾಖಲಾತಿ ಪ್ರಕ್ರಿಯೆ ನಡೆಯಲಿದ್ದು, ಅಂದು ಜಾಕ್ವೆಲಿನ್ ಮತ್ತು ಇತರ ಆರೋಪಿಗಳು ತಮ್ಮ ಮೇಲಿನ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರಾ ಅಥವಾ ನಿರಾಕರಿಸುತ್ತಾರಾ ಎಂಬುದು ನಿರ್ಧಾರವಾಗಲಿದೆ.
ಜಾಕ್ವೆಲಿನ್ ವಿರುದ್ಧ ಕೋರ್ಟ್ ಗರಂ ಆಗಿದ್ದೇಕೆ?
ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪ್ರಶಾಂತ್ ಶರ್ಮಾ, ಜಾಕ್ವೆಲಿನ್ ಫರ್ನಾಂಡಿಸ್ ಕೇವಲ ಉಡುಗೊರೆ ಪಡೆದ ನಟಿಯಲ್ಲ, ಬದಲಿಗೆ ಸುಕೇಶ್ ಮಾಡಿದ್ದ ಕಳ್ಳತನದ ದುಡ್ಡನ್ನು ಮರೆಮಾಚಲು ಆತನ ಜೊತೆ ಕೈಜೋಡಿಸಿದ್ದರು ಎನ್ನುವುದಕ್ಕೆ ಬಲವಾದ ಸಾಕ್ಷ್ಯಗಳಿವೆ ಎಂದು ಹೇಳಿದ್ದಾರೆ.
ಪ್ರಾಥಮಿಕ ದಾಖಲೆಗಳನ್ನು ನೋಡಿದರೆ ಜಾಕ್ವೆಲಿನ್ ಫರ್ನಾಂಡಿಸ್ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಸೆಕ್ಷನ್ 3 ರ ಅಡಿಯಲ್ಲಿ ತಪ್ಪು ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದು ಸೆಕ್ಷನ್ 4 ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಡ್ಜ್ ಪ್ರಶಾಂತ್ ಶರ್ಮಾ ಮೇ 30 ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.
ಸುಕೇಶ್ ಕೊಟ್ಟ ದುಡ್ಡಲ್ಲಿ ಫ್ಯಾಮಿಲಿಗೆ ಕಾರು, ವಿದೇಶಕ್ಕೆ ಫಂಡ್!
ಈ ಇಡೀ ಹಗರಣದಲ್ಲಿ ಜಾಕ್ವೆಲಿನ್ ಕುಟುಂಬಸ್ಥರು ಸುಕೇಶ್ ಹಣವನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಕೋರ್ಟ್ ಆದೇಶದಲ್ಲಿದೆ. ಮಧ್ಯವರ್ತಿಗಳಾದ ಪಿಂಕಿ ಇರಾನಿ ಮತ್ತು ಲೀಪಕ್ಷಿ ಮೂಲಕ ಜಾಕ್ವೆಲಿನ್ ಬರೋಬ್ಬರಿ 5.71 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಗಿಫ್ಟ್‌ಗಳನ್ನು ಸುಕೇಶನ್‌ನಿಂದ ಪಡೆದಿದ್ದರು.
ಅಷ್ಟೇ ಅಲ್ಲದೆ, ಜಾಕ್ವೆಲಿನ್ ಅವರ ಸಹೋದರಿ ಜೆರಾಲ್ಡಿನ್ ಬ್ಯಾಂಕ್ ಖಾತೆಗೆ 1,72,913 ಯುಎಸ್ ಡಾಲರ್ ಹಾಗೂ ಸಹೋದರ ವಾರೆನ್ ಖಾತೆಗೆ 26,740 ಆಸ್ಟ್ರೇಲಿಯನ್ ಡಾಲರ್ ಹಣವನ್ನು ವರ್ಗಾಯಿಸಲಾಗಿತ್ತು. ಜೊತೆಗೆ, ಸುಕೇಶ್ ಕೊಟ್ಟ ಅಕ್ರಮ ಹಣದಿಂದಲೇ ಜಾಕ್ವೆಲಿನ್ ಅವರ ಪೋಷಕರಿಗೆ ಐಷಾರಾಮಿ ಕಾರುಗಳನ್ನು ಖರೀದಿಸಲಾಗಿತ್ತು. ವಿಚಾರಣೆಯ ಸಮಯದಲ್ಲಿ ನಟಿ ಜಾಕ್ವೆಲಿನ್ ಅವರೇ, ಹೌದು, ನನ್ನ ಪೋಷಕರು ಕಾರುಗಳನ್ನು ಪಡೆದುಕೊಂಡಿದ್ದಾರೆ ಎಂದು ಒಪ್ಪಿಕೊಂಡಿರುವುದು ಅವರಿಗೆ ಈಗ ದೊಡ್ಡ ಮೈನಸ್ ಪಾಯಿಂಟ್ ಆಗಿದೆ.
ಎಲ್ಲಾ ಗೊತ್ತಿದ್ದರೂ ಗಿಫ್ಟ್ ಸ್ವೀಕರಿಸಿದ ನಟಿ!
ಸುಕೇಶ್ ಚಂದ್ರಶೇಖರ್ ಒಬ್ಬ ದೊಡ್ಡ ಕ್ರಿಮಿನಲ್, ಆತನ ಮೇಲೆ ಈಗಾಗಲೇ ಹಲವಾರು ಚೀಟಿಂಗ್ ಕೇಸ್‌ಗಳಿವೆ ಎಂಬ ಸುದ್ದಿ ವರದಿಗಳನ್ನು ಜಾಕ್ವೆಲಿನ್ ಅವರಿಗೆ ತೋರಿಸಲಾಗಿತ್ತು. ಆತನ ಬ್ಯಾಕ್‌ಗ್ರೌಂಡ್ ಇಷ್ಟು ಕರಾಳವಾಗಿದೆ ಎಂದು ಗೊತ್ತಿದ್ದರೂ ಸಹ ಜಾಕ್ವೆಲಿನ್ ದುಬಾರಿ ಉಡುಗೊರೆಗಳು, ಬ್ರಾಂಡೆಡ್ ವಸ್ತುಗಳು ಮತ್ತು ಹಣದ ಸೌಲತ್ತುಗಳನ್ನು ಪಡೆಯುವುದನ್ನು ನಿಲ್ಲಿಸಲಿಲ್ಲ. ಕ್ರಿಮಿನಲ್ ಚಟುವಟಿಕೆಯ ಮೂಲಕ ಬಂದ ದುಡ್ಡನ್ನು ಅಕ್ರಮವಾಗಿ ವರ್ಗಾವಣೆ ಮಾಡಲು ಮತ್ತು ಅದನ್ನು ಮರೆಮಾಚಲು ಸುಕೇಶ್‌ಗೆ ನಟಿ ನೇರವಾಗಿ ಸಹಾಯ ಮಾಡಿದ್ದಾರೆ ಎಂದು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
ಒಟ್ಟಿನಲ್ಲಿ ಜೂನ್ 3 ರಂದು ನಡೆಯಲಿರುವ ಕೋರ್ಟ್ ಕಲಾಪ ಇಡೀ ಬಾಲಿವುಡ್ನಲ್ಲಿ ಕುತೂಹಲ ಮೂಡಿಸಿದೆ. ಸುಕೇಶ್ ತಂದಿಟ್ಟ ಈ 200 ಕೋಟಿಯ ಸುಳಿಯಿಂದ ಜಾಕ್ವೆಲಿನ್ ಪಾರಾಗ್ತಾರಾ ಅಥವಾ ಜೈಲು ಪಾಲಾಗ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ,(ಏಜನ್ಸೀಸ್).