- ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬ್ಯಾಗ್ನಲ್ಲಿ ಕೋತಿಯ ತಲೆಬುರುಡೆ ಪತ್ತೆ
- ಭದ್ರತಾ ತಪಾಸಣೆಯ ಸಮಯದಲ್ಲಿ ಸಿಐಎಸ್ಎಫ್ ಅನುಮಾನಾಸ್ಪದ ವ್ಯಕ್ತಿಯ ಬ್ಯಾಗ್ ಪರಿಶೀಲನೆ ವೇಳೆ ಬೆಳಕಿಗೆ
ನವದೆಹಲಿ: ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಬ್ಯಾಗ್ನಲ್ಲಿ ಮಂಗನ ತಲೆಬುರುಡೆ (Monkey skull ) ಪತ್ತೆಯಾಗಿದ್ದನ್ನು ಕಂಡು ಸ್ವತಃ ಏರ್ಪೋರ್ಟ್ ಅಧಿಕಾರಿಗಳೇ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.
ವಿಮಾನ ಹಾರಾಟಕ್ಕೂ ಮುನ್ನ ನಡೆದ ಪೂರ್ವ ಭದ್ರತಾ ತಪಾಸಣೆಯ ವೇಳೆ ದೆಹಲಿಯಿಂದ ಹೈದರಾಬಾದ್‌ಗೆ ಹಾರಲು ಮುಂದಾಗಿದ್ದ ಪ್ರಯಾಣಿಕನ ಮೇಲೆ ಅನುಮಾನಗೊಂಡು ಬ್ಯಾಗ್ ಪರಿಶೀಲಿಸಿದ ಸಿಐಎಸ್‌ಎಫ್ ಸಿಬ್ಬಂದಿಗೆ ಶಾಕಿಂಗ್ ವಸ್ತುಗಳೇ ಪತ್ತೆಯಾಗಿವೆ. ಸಿಕ್ಕ ಬುರುಡೆಯನ್ನು ಮುಂದಿಟ್ಟು ಪ್ರಶ್ನಿಸಿದ ಸೆಕ್ಯೂರಿಟಿ ಸಿಬ್ಬಂದಿಗೆ, ಅದು ಮಂಗನ ತಲೆಬುರುಡೆ ಎಂದು ಆತ ಉತ್ತರಿಸಿರುವುದು ಆತನ ಮೇಲಿನ ಅನುಮಾನವನ್ನು ಇನ್ನಷ್ಟು ಹೆಚ್ಚಿಸಿದೆ.
ತಲೆಬುರುಡೆ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡ ಅಧಿಕಾರಿಗಳು, ವ್ಯಕ್ತಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಶಕ್ಕೆ ಪಡೆದ ತಲೆಬುರುಡೆಯನ್ನು ಪರೀಕ್ಷೆಗಾಗಿ ಸಂರಕ್ಷಿಸಲಾಗಿದೆ. ಈ ಘಟನೆಯು ವನ್ಯಜೀವಿಗೆ ಸಂಬಂಧಿಸಿದ ಹಿನ್ನಲೆ, ವನ್ಯಜೀವಿ (ರಕ್ಷಣೆ) ಕಾಯ್ದೆ, 1972ರ ನಿಬಂಧನೆಗಳ ಅಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಯಾಣಿಕನ ಬ್ಯಾಗ್ನಲ್ಲಿ ತಲೆಬುರುಡೆ ಏಕೆ ಬಂತು? ಇದನ್ನು ಆತ ಎಲ್ಲಿಂದ ಹೊತ್ತುಕೊಂಡು ಬಂದಿದ್ದಾನೆ? ದೆಹಲಿಯಿಂದ ಹೈದರಾಬಾದ್‌ಗೆ ಏಕೆ ತೆಗೆದುಕೊಂಡು ಹೋಗುತ್ತಿದ್ದ? ಎಂಬುದರ ಸಂಪೂರ್ಣ ಮಾಹಿತಿ ಕಲೆಹಾಕಲು ಪೊಲೀಸರು ಮುಂದಾಗಿದ್ದು, ದೂರು ದಾಖಲಾದ ಬೆನ್ನಲ್ಲೇ ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).