ತಾಜ್ ಮಹಲ್ ಪ್ರವೇಶದ್ವಾರದ ಬಳಿ ವಿದೇಶಿ ಮಹಿಳಾ ಪ್ರವಾಸಿಗರಿಗೆ ಕೋತಿಯೊಂದು ಕಚ್ಚಿರುವ ಘಟನೆ
- ತಾಜ್ ಮಹಲ್ ಪ್ರವೇಶದ್ವಾರದ ಬಳಿ ವಿದೇಶಿ ಮಹಿಳಾ ಪ್ರವಾಸಿಗರಿಗೆ ಕೋತಿಯೊಂದು ಕಚ್ಚಿರುವ ಘಟನೆ
- ಗಾಯಗೊಂಡ ಮಹಿಳೆಗೆ ಸಕಾಲದಲ್ಲಿ ಆಂಬುಲೆನ್ಸ್ ಸಿಗದೆ ಪರದಾಟ
- ಸೋಷಿಯಲ್ ಮೀಡಿಯಾನಲ್ಲಿ ವಿಡಿಯೋ ವೈರಲ್
ಆಗ್ರಾ: ವಿಶ್ವ ವಿಖ್ಯಾತ ಸ್ಮಾರಕ ತಾಜ್ ಮಹಲ್ಗೆ ಬರುವ ಪ್ರವಾಸಿಗರಿಗೆ ಈಗ ಪ್ರಾಣ ಭಯ ಶುರುವಾಗಿದೆ. ಹೌದು, ಪ್ರೀತಿಯ ಸಂಕೇತವೆಂದು ನಂಬಲಾಗುವ ಆಗ್ರಾದ ತಾಜ್ ಮಹಲ್ ವೀಕ್ಷಣೆಗೆ ಬಂದಿದ್ದ ದಕ್ಷಿಣ ಕೊರಿಯಾದ ಮಹಿಳಾ ಪ್ರವಾಸಿಗೊಬ್ಬರ ಮೇಲೆ ಕೋತಿಯೊಂದು ದಾಳಿ (Monkey Attack in Taj Mahal) ನಡೆಸಿ ಗಾಯಗೊಳಿಸಿದೆ. ಅಷ್ಟೇ ಅಲ್ಲದೆ, ಪ್ರವಾಸಿಗರಿಗೆ ತುರ್ತು ಸಂದರ್ಭದಲ್ಲಿ ಸಿಗಬೇಕಾದ ವೈದ್ಯಕೀಯ ನೆರವು ಸರಿಯಾಗಿ ದೊರೆಯದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.
ನಡೆದಿದ್ದೇನು?
ಮಂಗಳವಾರ (ಜು.28) ದಕ್ಷಿಣ ಕೊರಿಯಾದಿಂದ ಕೆಲವರು ತಾಜ್ ಮಹಲ್ ವೀಕ್ಷಿಸಲು ಆಗ್ರಾಕ್ಕೆ ಬಂದಿದ್ದರು. ತಾಜ್ ಮಹಲ್‌ನ ಪೂರ್ವ ದ್ವಾರದ ಬಳಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ದಿಢೀರ್ ಎಂದು ಪ್ರವಾಸಿಗರ ಬಳಿ ಬಂದ ಕಾಡಿನ ಕೋತಿಯೊಂದು, ದಕ್ಷಿಣ ಕೊರಿಯಾದ ಮಹಿಳೆಯ ಕೈಗೆ ಬಲವಾಗಿ ಕಚ್ಚಿದೆ.
ಕೋತಿ ಕಚ್ಚಿದ ರಭಸಕ್ಕೆ ಮಹಿಳೆಯ ಕೈಯಿಂದ ರಕ್ತ ನೀರನಂತೆ ಹರಿದಿದೆ. ನೋವಿನಿಂದ ನರಳಿದ ಮಹಿಳೆ ರಕ್ಷಣೆಗಾಗಿ ಕಿರುಚಾಡಿದ್ದಾರೆ. ತಕ್ಷಣವೇ ಸ್ಥಳೀಯರು ಮತ್ತು ಇತರೆ ಪ್ರವಾಸಿಗರು ನೆರವಿಗೆ ಧಾವಿಸಿ, ರಕ್ತ ಸೋರುತ್ತಿದ್ದ ಕೈಗೆ ಬಟ್ಟೆ ಕಟ್ಟಿ ಸಮಾಧಾನಪಡಿಸಿದ್ದಾರೆ.
ಒಂದು ಗಂಟೆ ಕಾಯಿಸಿದ ಆಂಬ್ಯುಲೆನ್ಸ್!
ಈ ಘಟನೆಯಲ್ಲಿ ಕೋತಿ ದಾಳಿಯಷ್ಟೇ ಅಲ್ಲ, ಆಡಳಿತ ಮಂಡಳಿಯ ಬೇಜವಾಬ್ದಾರಿತನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ನಡೆದ ತಕ್ಷಣ ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಮೀಕ್ಷೆ (ASI) ಆರೋಗ್ಯ ಇಲಾಖೆಗೆ ತುರ್ತು ಸಂದೇಶ ರವಾನಿಸಿ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಆದರೆ, ವಿದೇಶಿ ಪ್ರವಾಸಿ ನೋವಿನಿಂದ ನರಳುತ್ತಿದ್ದರೂ, ಆಂಬ್ಯುಲೆನ್ಸ್ ಬರಲು ಬರೋಬ್ಬರಿ ಒಂದು ಗಂಟೆ ತೆಗೆದುಕೊಂಡಿದೆ.
ಕೊನೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಖಸಗಿ ವಾಹನದಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನು ಆಂಬ್ಯುಲೆನ್ಸ್ ಚಾಲಕನ ನಿರ್ಲಕ್ಷ್ಯದ ಬಗ್ಗೆ ಎಎಸ್‌ಐ ಅಧಿಕಾರಿಗಳು ಮುಖ್ಯ ವೈದ್ಯಾಧಿಕಾರಿಗೆ ದೂರು ನೀಡಿದ್ದಾರೆ.
ನೆಟ್ಟಿಗರ ಆಕ್ರೋಶ!
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಭಾರತೀಯ ಪ್ರವಾಸೋದ್ಯಮ ಮತ್ತು ಆಡಳಿತ ವ್ಯವಸ್ಥೆಯ ವಿರುದ್ಧ ಕಿಡಿಕಾರುತ್ತಿದ್ದಾರೆ. ನಮ್ಮ ದೇಶದ ಬಗ್ಗೆ ನನಗೆ ತೀವ್ರ ಮುಜುಗರವಾಗುತ್ತಿದೆ. ನಮ್ಮ ದೇಶವನ್ನು ನೋಡುವ ಬರುವವರಿಗೆ ಕನಿಷ್ಟ ಸೇವೆಯನ್ನು ನೀಡಲು ಸಾಧ್ಯವಾಗುತ್ತಿಲ್ಲವೇ? ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದರೆ.
ವಿದೇಶದಿಂದ ಬರುವ ಪ್ರವಾಸಿಗರ ಸಂಖ್ಯೆ ನಮ್ಮಲ್ಲಿ ದಿನದಿಂದ ದಿನಕ್ಕೆ ಯಾಕೆ ಕಡಿಮೆ ಆಗುತ್ತಿದೆ ಅಂದುಕೊಳ್ಳುತ್ತೀರಾ? ಇದಕ್ಕೆ ಇಂತಹ ಕಳಪೆ ವ್ಯವಸ್ಥೆಯೇ ಕಾರಣ ಎಂದು ಮತ್ತೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ತಾಜ್ ಮಹಲ್ ಅಂತಹ ಜಾಗದಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆ ಸಿಗಲು ಒಂದು ಗಂಟೆ ಕಾಯಬೇಕೆಂದರೆ, ಇಲ್ಲಿ ಆಡಳಿತವೇ ಇಲ್ಲ ಎಂದರ್ಥ ಎಂದು ಇನ್ನೊಬ್ಬರು ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, (ಏಜನ್ಸೀಸ್).