FCRA Bill 2026 | ಸಂಸತ್ತಿನಲ್ಲಿ ಚರ್ಚೆಗೂ ಮುನ್ನವೇ ರಣತಂತ್ರ!
ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, 2026 (FCRA Bill 2026) ಅನ್ನು ಕೂಲಂಕುಷ ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ರವಾನಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಎಫ್‌ಸಿಆರ್‌ಎ ತಿದ್ದುಪಡಿ ವಿಧೇಯಕದ ನಿಬಂಧನೆಗಳ ಕುರಿತು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿರುವ ಬೆನ್ನಲ್ಲೇ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, 2026 ಅನ್ನು ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಲೋಕಸಭೆಯ ಅಜೆಂಡಾದಲ್ಲಿ ಇದುವರೆಗೆ ಪಟ್ಟಿ ಮಾಡಲಾಗಿಲ್ಲ. ಆದರೆ ಇದನ್ನು ಆಗಸ್ಟ್ 12 ರಂದು ಕೈಗೆತ್ತಿಕೊಳ್ಳಬಹುದು ಎಂದು ಸರ್ಕಾರ ಮುಂಚಿತವಾಗಿಯೇ ಸೂಚಿಸಿತ್ತು.
ಇಂದು ಸಂಸತ್ತಿನಲ್ಲಿ ಎಫ್‌ಸಿಆರ್‌ಎ ವಿಧೇಯಕ ಚರ್ಚೆ..?
ಆಗಸ್ಟ್ 7 ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದ ನಂತರ ಮಾತನಾಡಿದ್ದ ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ, ಎಫ್‌ಸಿಆರ್‌ಎ ವಿಧೇಯಕವನ್ನು ಆಗಸ್ಟ್ 12 ರಂದು ಸಂಸತ್ತಿನಲ್ಲಿ ಚರ್ಚೆಗೆ ಮತ್ತು ಅಂಗೀಕಾರಕ್ಕಾಗಿ ಕೈಗೆತ್ತಿಕೊಳ್ಳಲಾಗುವುದು ಹಾಗೂ ಇದನ್ನು ಪೂರ್ವಾನ್ವಯವಾಗುವಂತೆ ಜಾರಿಗೆ ತರುವುದಿಲ್ಲ ಎಂದು ಹೇಳಿದ್ದರು.
ಮಿಜೋರಾಂನ ಚರ್ಚ್ ನಾಯಕರ ನಿಯೋಗದೊಂದಿಗೆ ಷಾ ಅವರನ್ನು ಭೇಟಿಯಾದ ಲಾಲ್ದುಹೋಮ, ಎಫ್‌ಸಿಆರ್‌ಎ ಪರವಾನಗಿ ಕಳೆದುಕೊಳ್ಳುವ ಎನ್‌ಜಿಒಗಳ ಆಸ್ತಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಭಾವಿ ನಿಯೋಜಿತ ಪ್ರಾಧಿಕಾರವನ್ನು ರಚಿಸುವ ಮೂಲಕ ವಿದೇಶಿ ನಿಧಿ ಪಡೆಯುವ ಸಂಸ್ಥೆಗಳ ಮೇಲ್ವಿಚಾರಣೆಯನ್ನು ಬಿಗಿಗೊಳಿಸಲು ಉದ್ದೇಶಿಸಿರುವ ಪ್ರಸ್ತಾವಿತ ಶಾಸನದ ಕುರಿತು ಕಳವಳ ವ್ಯಕ್ತಪಡಿಸಿದ್ದರು. ಹೊಸ ಎಫ್‌ಸಿಆರ್‌ಎ ವಿಧೇಯಕದ ಕುರಿತು ನಮ್ಮ ಆತಂಕಗಳನ್ನು ನಾವು ಗೃಹ ಸಚಿವರಿಗೆ ತಿಳಿಸಿದ್ದೇವೆ. ಈ ವಿಧೇಯಕವು ಪೂರ್ವಾನ್ವಯವಾಗಿ ಜಾರಿಗೆ ಬರುವುದಿಲ್ಲ ಎಂದು ಅವರು ನಮಗೆ ಭರವಸೆ ನೀಡಿದ್ದಾರೆ ಎಂದು ಲಾಲ್ದುಹೋಮ ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಗಾರರಿಗೆ ತಿಳಿಸಿದರು.
ಶಾಸನದ ಸಮಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಆಗಸ್ಟ್ 12 ರಂದು ಸಂಸತ್ತಿನಲ್ಲಿ ಈ ವಿಧೇಯಕದ ಕುರಿತು ಚರ್ಚೆ ನಡೆಯಲಿದೆ ಎಂದು ಷಾ ನಿಯೋಗಕ್ಕೆ ತಿಳಿಸಿದ್ದಾರೆ ಎಂದರು. ಪ್ರಸ್ತಾವಿತ ಮಸೂದೆಯನ್ನು ಮಾರ್ಚ್ 25 ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು.
ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ವಿಧೇಯಕ, 2026, ಯಾವುದೇ ಸಂಸ್ಥೆಯ ಎಫ್‌ಸಿಆರ್‌ಎ ರದ್ದಾದಾಗ, ಹಿಂಪಡೆದಾಗ ಅಥವಾ ನವೀಕರಣಗೊಳ್ಳದೆ ಸ್ಥಗಿತಗೊಂಡಾಗ, ಆ ಸಂಸ್ಥೆಯು ವಿದೇಶಿ ದೇಣಿಗೆಯಿಂದ ಪಡೆದ ಆಸ್ತಿ ಮತ್ತು ನಿರ್ವಹಣೆಯನ್ನು ವಶಕ್ಕೆ ಪಡೆಯಲು ನಿಯೋಜಿತ ಪ್ರಾಧಿಕಾರವನ್ನು ರಚಿಸಲು ಸರ್ಕಾರಕ್ಕೆ ಅಧಿಕಾರ ನೀಡಲು ಉದ್ದೇಶಿಸಿದೆ.
ವಶಕ್ಕೆ ಪಡೆದ ಆಸ್ತಿಯು ಪೂಜಾ ಸ್ಥಳವಾಗಿದ್ದಲ್ಲಿ, ಆ ಪ್ರಾಧಿಕಾರವು ಅದರ ಧಾರ್ಮಿಕ ಸ್ವರೂಪವನ್ನು ಉಳಿಸಿಕೊಂಡು ಹೋಗುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಈ ವಿಧೇಯಕವು ತಿಳಿಸುತ್ತದೆ. ಇದಲ್ಲದೆ, ಪ್ರಸ್ತಾವಿತ ಶಾಸನವು ಕಾಯ್ದೆಯ ಉಲ್ಲಂಘನೆಗೆ ವಿಧಿಸಲಾಗುವ ಗರಿಷ್ಠ ಶಿಕ್ಷೆಯನ್ನು ಐದು ವರ್ಷಗಳ ಜೈಲು ಶಿಕ್ಷೆಯಿಂದ ಒಂದು ವರ್ಷಕ್ಕೆ ಕಡಿತಗೊಳಿಸಲಿದೆ. ಎಫ್‌ಸಿಆರ್‌ಎ ಪೋರ್ಟಲ್ ಪ್ರಕಾರ, 2026 ರ ಜುಲೈ 15 ರಂತೆ 14,449 ಸಕ್ರಿಯ ಎಫ್‌ಸಿಆರ್‌ಎ ಪ್ರಮಾಣಪತ್ರಗಳು, 22,498 ರದ್ದುಗೊಂಡ ಪ್ರಮಾಣಪತ್ರಗಳು ಮತ್ತು 15,212 ಅವಧಿ ಮುಗಿದ ಪ್ರಮಾಣಪತ್ರಗಳಿವೆ(ಏಜೆನ್ಸೀಸ್).