MK Stalin | ಸೋಲಿನ ತಪ್ಪು ಒಪ್ಪಿಕೊಂಡು ಪಕ್ಷದ ಮರುಸಂಘಟನೆಗೆ ಮುಂದಾದ ಸ್ಟಾಲಿನ್! 
ದೇಶ

ಅವರೊಬ್ಬರ ತಪ್ಪಿಗೆ 75 ವರ್ಷದ ಪಕ್ಷಕ್ಕೆ ಶಿಕ್ಷೆ: ಸೋಲಿನ ತಪ್ಪು ಒಪ್ಪಿಕೊಂಡು ಪಕ್ಷದ ಮರುಸಂಘಟನೆಗೆ ಮುಂದಾದ ಸ್ಟಾಲಿನ್! | MK Stalin

ಚೆನ್ನೈ: ವಿಧಾನಸಭೆ ಚುನಾವಣೆಯ ಹಿನ್ನಡೆ ಹಾಗೂ ಮುಖ್ಯಮಂತ್ರಿ ಹುದ್ದೆ ಕೈತಪ್ಪಿದ ಕೆಲವೇ ತಿಂಗಳುಗಳಲ್ಲಿ ಡಿಎಂಕೆ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ (

MK Stalin)

ಅವರು ತಮ್ಮ ಪಕ್ಷದ ಆಡಳಿತಾತ್ಮಕ ರಚನೆಯಲ್ಲಿ ದೊಡ್ಡ ಮಟ್ಟದ ಸುಧಾರಣೆ ಮತ್ತು ಪುನರ್ರಚನೆಯನ್ನು ಘೋಷಿಸಿದ್ದು, ಚೆನ್ನೈನ ಅಣ್ಣಾ ಅರಿವಾಲಯಂನಲ್ಲಿ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಸ್ಟಾಲಿನ್, ಚುನಾವಣೆಯಲ್ಲಿ ತಮ್ಮ ಪಕ್ಷ ಸೋಲು ಕಂಡಿರುವುದನ್ನು ಮುಕ್ತವಾಗಿ ಒಪ್ಪಿಕೊಂಡರು.

ಪಕ್ಷದ ಆಡಳಿತಾಧಿಕಾರಿಗಳು ಹಾಗೂ ಪದಾಧಿಕಾರಿಗಳ ಕಾರ್ಯವೈಖರಿಯೇ ಈ ಹಿನ್ನಡೆಗೆ ಮುಖ್ಯ ಕಾರಣಗಳಲ್ಲಿ ಒಂದಾಗಿದೆ ಎಂದ ಸ್ಟಾಲಿನ್​, ತಪ್ಪುಗಳನ್ನು ಮುಕ್ತವಾಗಿ ಒಪ್ಪಿಕೊಳ್ಳುವುದು ಅಗತ್ಯವಾಗಿದ್ದು, ಒಬ್ಬ ವ್ಯಕ್ತಿ ಮಾಡುವ ತಪ್ಪಿನಿಂದ 75 ವರ್ಷಗಳ ಇತಿಹಾಸವಿರುವ ಪಕ್ಷವು ನಷ್ಟ ಅನುಭವಿಸಬೇಕಾಗುತ್ತದೆ. ಮುಂಬರುವ 100 ವರ್ಷಗಳ ಕಾಲ ಪಕ್ಷವನ್ನು ಬಲವಾಗಿ ಕಾಯ್ದುಕೊಳ್ಳಲು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು.

ವಯೋಮಿತಿ ಮತ್ತು ಅಧಿಕಾರಾವಧಿ ಮಿತಿ ನಿಗದಿ

ಚೆನ್ನೈನಲ್ಲಿ ಅಂಗೀಕರಿಸಲಾದ ನಿರ್ಣಯಗಳ ಪ್ರಕಾರ, ಪಕ್ಷದ ವಿವಿಧ ಹಂತದ ಪದಾಧಿಕಾರಿಗಳ ಹುದ್ದೆಗಳಿಗೆ ವಯೋಮಿತಿ ಹಾಗೂ ಗರಿಷ್ಠ 2 ಅವಧಿಗಳ ಮಿತಿಯನ್ನು ಕಡ್ಡಾಯಗೊಳಿಸಲಾಗಿದೆ.
1. ಶಾಖಾ ಕಾರ್ಯದರ್ಶಿ (Branch Party Secretary): ಗರಿಷ್ಠ ವಯೋಮಿತಿ 45 ವರ್ಷಗಳು.
2. ಪುರಸಭೆ, ನಗರ ಹಾಗೂ ಪಟ್ಟಣ ಪಂಚಾಯಿತಿ ವಾರ್ಡ್ ಸಮಿತಿ ಕಾರ್ಯದರ್ಶಿಗಳು: ಗರಿಷ್ಠ ವಯೋಮಿತಿ 50 ವರ್ಷಗಳು.
3. ಪಟ್ಟಣ ಪಂಚಾಯಿತಿ, ಏರಿಯಾ ಹಾಗೂ ನಗರ ಸಮಿತಿ ಕಾರ್ಯದರ್ಶಿಗಳು: ವಯೋಮಿತಿ 60 ವರ್ಷಗಳು.
4. ಜಿಲ್ಲಾ ಕಾರ್ಯದರ್ಶಿಗಳು (District Party Secretaries): ಗರಿಷ್ಠ ವಯೋಮಿತಿ 70 ವರ್ಷಗಳು.
5. ಪ್ರತಿಯೊಬ್ಬ ಪದಾಧಿಕಾರಿಯು ತಮ್ಮ ಹುದ್ದೆಯಲ್ಲಿ ಗರಿಷ್ಠ ಎರಡು ಅವಧಿಗಳಿಗೆ ಮಾತ್ರ ಸೇವೆ ಸಲ್ಲಿಸಲು ಅವಕಾಶವಿರಲಿದೆ.

ಜಿಲ್ಲಾ ಘಟಕಗಳ ವಿಸ್ತರಣೆ ಮತ್ತು ನಗರ ರಚನೆ

ಪಕ್ಷದ ಆಡಳಿತವನ್ನು ಮತ್ತಷ್ಟು ಚುರುಕುಗೊಳಿಸಲು ಪ್ರಸ್ತುತ ಇರುವ 77 ಪಕ್ಷದ ಜಿಲ್ಲಾ ಘಟಕಗಳ ಸಂಖ್ಯೆಯನ್ನು 110ಕ್ಕೆ ಹೆಚ್ಚಿಸಲು ಕಾರ್ಯಕಾರಿ ಸಮಿತಿ ಅನುಮೋದನೆ ನೀಡಿದ್ದು, ಪ್ರತಿಯೊಂದು ಜಿಲ್ಲಾ ಘಟಕವು ಸಾಮಾನ್ಯ ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರಲಿದೆ. ಇದರ ಜೊತೆಗೆ ನಗರ ಪ್ರದೇಶಗಳಲ್ಲಿ ಹೊಸದಾಗಿ ಶಾಖಾ ಮಟ್ಟದ ರಚನೆಯನ್ನು ತರಲಾಗುತ್ತಿದ್ದು, ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನಲ್ಲಿ ಪ್ರತಿಯೊಂದು ಏರಿಯಾ ಸಮಿತಿಯು ಸರಾಸರಿ 40,000 ಮತದಾರರನ್ನು ಮತ್ತು ಇತರ ಮಹಾನಗರ ಪಾಲಿಕೆಗಳಲ್ಲಿ 30,000 ಮತದಾರರನ್ನು ಒಳಗೊಂಡಿರಲಿದೆ.
ಈ ಹೊಸ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಚೆನ್ನೈ, ಕೊಯಮತ್ತೂರು, ಮಧುರೈ, ತಿರುಚಿರಾಪಳ್ಳಿ ಮತ್ತು ಸೇಲಂ ನಗರಗಳಲ್ಲಿ ಜಾರಿಗೆ ತರಲಾಗುತ್ತಿದೆ. ಪಕ್ಷದ ಹೊಸ 110 ಜಿಲ್ಲಾ ಘಟಕಗಳ ಗಡಿಗಳನ್ನು ನಿರ್ಧರಿಸುವ ಅಧಿಕಾರವನ್ನು ಎಂ ಕೆ ಸ್ಟಾಲಿನ್ ಅವರಿಗೆ ನೀಡಲಾಗಿದ್ದು, ಹೊಸ ಜಿಲ್ಲೆಗಳ ಪ್ರಕಟಣೆಯ ನಂತರ 15 ದಿನಗಳ ಒಳಗಾಗಿ ಆಯಾ ಜಿಲ್ಲಾ ಕಾರ್ಯಕಾರಿ ಸಮಿತಿಗಳು ಸಭೆ ನಡೆಸಿ ಮುಂದಿನ ಸಮಿತಿಗಳನ್ನು ರಚಿಸಲಿವೆ. ಪಕ್ಷದಲ್ಲಿ ಹೊಸ ಮುಖಗಳಿಗೆ, ಯುವಕರಿಗೆ ಮತ್ತು ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವುದು ಈ ಸುಧಾರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಡಿಎಂಕೆ ತಿಳಿಸಿದೆ. ಡಿಎಂಕೆ ಸಂಸದ ಪಿ. ವಿಲ್ಸನ್ ಸೇರಿದಂತೆ ಹಲವು ನಾಯಕರು ಈ ಸುಧಾರಣಾ ಕ್ರಮಗಳನ್ನು ಸ್ವಾಗತಿಸಿದ್ದಾರೆ(ಏಜೆನ್ಸೀಸ್​).