MiyazakiMango  
ದೇಶ

Miyazaki Mango; ಕೆಜಿಗೆ 3 ಲಕ್ಷದ ಮಾವಿನ ಹಣ್ಣು: ತೋಟದಲ್ಲೇ ರೈತನ, ಹಗಲು-ರಾತ್ರಿ ಹದ್ದಿನ ಕಣ್ಣು!

ಭುವನೇಶ್ವರ್: ಸಾಮಾನ್ಯವಾಗಿ ನಾವೆಲ್ಲರೂ ಒಂದು ಕೆಜಿ ಮಾವಿನಹಣ್ಣಿಗೆ 100 ರಿಂದ 200 ರೂಪಾಯಿ ನೀಡುತ್ತೇವೆ. ಆದರೆ, ಇಲ್ಲೊಬ್ಬ ರೈತ ಬೆಳೆದಿರುವ ಮಾವಿನಹಣ್ಣಿನ ಬೆಲೆ ಕೇಳಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರಿ.
ಹೌದು, ಒಡಿಶಾದ ಮಲ್ಕಾನ್‌ಗಿರಿ ಜಿಲ್ಲೆಯ ತಮಸಾ ಗ್ರಾಮದ ರೈತರೊಬ್ಬರು ವಿಶ್ವದ ಅತ್ಯಂತ ದುಬಾರಿ ಮತ್ತು ಅಪರೂಪದ ಜಪಾನಿ ತಳಿಯ ‘ಮಿಯಾಜಾಕಿ’ (Miyazaki Mango) ಮಾವನ್ನು ಯಶಸ್ವಿಯಾಗಿ ಬೆಳೆದು ದೇಶದಾದ್ಯಂತ ಸುದ್ದಿಯಾಗಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಮಾವಿನಹಣ್ಣಿನ ಬೆಲೆ ಪ್ರತಿ ಕೆಜಿಗೆ ಬರೋಬ್ಬರಿ 3 ಲಕ್ಷ ರೂಪಾಯಿ!

ರೈತನಿಗೆ ನಿದ್ದೆಗೆಡಿಸಿದ ‘ಮಹಾ’ ಹಣ್ಣು

ಹೀಗೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ಮಾವನ್ನು ಬೆಳೆದಿರುವ ರೈತ ದೇಬಾ ಪಾಧಿಯಾಮಿ ಅವರಿಗೆ ಈಗ ದೊಡ್ಡ ಸಂಕಷ್ಟವೊಂದು ಎದುರಾಗಿದೆ. ತೋಟದಲ್ಲಿ ಹಣ್ಣುಗಳು ಮಾಗತೊಡಗಿದ್ದರಿಂದ, ಯಾರಾದರೂ ಇವುಗಳನ್ನು ಕದ್ದುಬಿಡಬಹುದು ಎಂಬ ಭಯ ಅವರನ್ನು ಕಾಡುತ್ತಿದೆ. ಇದೇ ಕಾರಣಕ್ಕೆ ರೈತ ದೇಬಾ ಅವರು ಹಗಲು-ರಾತ್ರಿ ಎನ್ನದೆ ಮಾವಿನ ಮರದ ಕೆಳಗೇ ಮಲಗಿ ಕಾವಲು ಕಾಯುತ್ತಿದ್ದಾರೆ. ತೋಟದಲ್ಲೇ ತಮ್ಮ ದಿನದ ಬಹುಪಾಲು ಸಮಯವನ್ನು ಕಳೆಯುತ್ತಿರುವ ಇವರಿಗೆ ಈ ದುಬಾರಿ ಹಣ್ಣುಗಳು ನೆಮ್ಮದಿಯ ನಿದ್ದೆಯನ್ನೇ ಗೆಡಿಸಿವೆ.

ಒಡಿಶಾ ಹಳ್ಳಿಗೆ ಈ ಜಪಾನ್ ತಳಿ ಬಂದಿದ್ದು ಹೇಗೆ?

ನಾಲ್ಕು ವರ್ಷಗಳ ಹಿಂದೆ ಸಾಮಾಜಿಕ ಕಾರ್ಯಕರ್ತರೊಬ್ಬರು ದೇಬಾ ಅವರಿಗೆ ಈ ಮಿಯಾಜಾಕಿ ಮಾವಿನ ಸಸಿಯನ್ನು ಉಡುಗೊರೆಯಾಗಿ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಹವಾಮಾನದ ಏರುಪೇರು ಹಾಗೂ ಕಠಿಣ ಪರಿಸ್ಥಿತಿಗಳ ನಡುವೆಯೂ ದೇಬಾ ಅವರು ಮಗುವಿನಂತೆ ಈ ಗಿಡವನ್ನು ಪೋಷಿಸಿದ್ದಾರೆ. ಅವರ ನಾಲ್ಕು ವರ್ಷಗಳ ನಿರಂತರ ಪರಿಶ್ರಮದ ಫಲವಾಗಿ ಇಂದು ಮರದಲ್ಲಿ ಕೆಂಪು ವರ್ಣದ ಆಕರ್ಷಕ ಮಾವಿನ ಹಣ್ಣುಗಳು ನಗುತ್ತಿವೆ.

ಮಾರಾಟ ಹೇಗೆಂಬುದೇ ದೊಡ್ಡ ಯಕ್ಷಪ್ರಶ್ನೆ?

ಲಕ್ಷಗಳ ಬೆಲೆಬಾಳುವ ಈ ಮಾವನ್ನು ಬೆಳೆದಿದ್ದರೂ, ಸ್ಥಳೀಯ ಮಾರುಕಟ್ಟೆಯಲ್ಲಿ ಇದಕ್ಕೆ ಸೂಕ್ತ ಬೆಲೆ ಸಿಗುವುದಿಲ್ಲ ಎಂಬುದು ದೇಬಾ ಅವರಿಗೆ ಚೆನ್ನಾಗಿ ಗೊತ್ತು. ಇಂತಹ ಐಷಾರಾಮಿ ಹಣ್ಣುಗಳಿಗೆ ವಿದೇಶಗಳಲ್ಲಿ ಅಥವಾ ದೊಡ್ಡ ಹೋಟೆಲ್‌ಗಳಲ್ಲಿ ಮಾತ್ರ ಬೇಡಿಕೆ ಇರುತ್ತದೆ. ಆದರೆ, ಇವುಗಳನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಿ, ರಫ್ತು ಮಾಡುವುದು ಹೇಗೆ ಮತ್ತು ಯಾರಿಗೆ ಮಾರಾಟ ಮಾಡಬೇಕು ಎಂಬುದು ತಿಳಿಯುತ್ತಿಲ್ಲ ಈ ರೈತನಿಗೆ. ಹೀಗಾಗಿ ಇವುಗಳನ್ನು ಮಾರಾಟ ಮಾಡಲು ಸರ್ಕಾರ ಮತ್ತು ಕೃಷಿ ತಜ್ಞರ ಸಹಾಯಕ್ಕಾಗಿ ದೇಬಾ ಕಾಯುತ್ತಿದ್ದಾರೆ.

ಏನಿದು ‘ಮಿಯಾಜಾಕಿ’ ಮಾವಿನ ವಿಶೇಷತೆ?

ನಮ್ಮ ದೇಶದ ಮಾವಿನ ಹಣ್ಣುಗಳು ಸಾಮಾನ್ಯವಾಗಿ ಹಳದಿ ಅಥವಾ ಹಸಿರು ಬಣ್ಣದಲ್ಲಿರುತ್ತವೆ. ಆದರೆ ಜಪಾನ್ ಮೂಲದ ಈ ಮಿಯಾಜಾಕಿ ಮಾವುಗಳು ಸಂಪೂರ್ಣವಾಗಿ ಗಾಢ ಕೆಂಪು ಬಣ್ಣದಲ್ಲಿರುತ್ತವೆ. ಇವುಗಳ ವಿಶಿಷ್ಟ ಆಕಾರ ಮತ್ತು ಹೊಳೆಯುವ ಕೆಂಪು ಬಣ್ಣದಿಂದಾಗಿ ಇವುಗಳನ್ನು ‘ಸೂರ್ಯನ ಮೊಟ್ಟೆಗಳು’ (Eggs of the Sun) ಎಂದೂ ಕರೆಯಲಾಗುತ್ತದೆ.
ತೂಕ ಮತ್ತು ಸಿಹಿ: ಈ ತಳಿಯ ಒಂದೊಂದು ಹಣ್ಣು ಕನಿಷ್ಠ 350 ಗ್ರಾಂ ತೂಗುತ್ತದೆ. ಇದರಲ್ಲಿ ಸಕ್ಕರೆ ಅಂಶವು ಶೇಕಡಾ 15 ಕ್ಕಿಂತ ಹೆಚ್ಚಿರುವುದರಿಂದ ಇದು ಅತ್ಯಂತ ಸಿಹಿಯಾಗಿರುತ್ತದೆ.
ಐಷಾರಾಮಿ ಮಾರುಕಟ್ಟೆ: ಜಪಾನ್‌ನಲ್ಲಿ ಈ ಹಣ್ಣುಗಳನ್ನು ಮಾರುಕಟ್ಟೆಗೆ ಬಿಡುವ ಮುನ್ನ ಕಠಿಣ ಗುಣಮಟ್ಟದ ತಪಾಸಣೆಗೆ ಒಳಪಡಿಸಲಾಗುತ್ತದೆ. ಶ್ರೀಮಂತರು, ಐಷಾರಾಮಿ ಹೋಟೆಲ್‌ಗಳು ಮತ್ತು ಹಣ್ಣುಗಳ ಸಂಗ್ರಹಕಾರರು ಹರಾಜಿನ ಮೂಲಕ ಇವುಗಳನ್ನು ಲಕ್ಷಾಂತರ ರೂಪಾಯಿ ನೀಡಿ ಖರೀದಿಸುತ್ತಾರೆ,(ಏಜೆನ್ಸೀಸ್​).